ಬರಗಾಲ ಪರಿಸ್ಥಿತಿ ಸರಿಯಾಗಿ ನಿರ್ವಹಿಸಿ: ಸಿಎಂ

KannadaprabhaNewsNetwork |  
Published : Aug 12, 2026, 02:15 AM IST
ಡಿಕೆಶಿ | Kannada Prabha

ಸಾರಾಂಶ

ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಸೃಷ್ಟಿಯಾಗಿರುವ ಬರ ಪರಿಸ್ಥಿತಿ ನಿರ್ವಹಣೆಗೆ ಎಲ್ಲ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಸೃಷ್ಟಿಯಾಗಿರುವ ಬರ ಪರಿಸ್ಥಿತಿ ನಿರ್ವಹಣೆಗೆ ಎಲ್ಲ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಅರ್ಹರಿದ್ದರೂ ಮತ ಹಕ್ಕು ಕಳೆದುಕೊಳ್ಳುವವರ ಹಕ್ಕು ಮರುಸ್ಥಾಪನೆಗೆ ನೆರವಾಗುವಂತೆ ಸರ್ಕಾರಿ ನೌಕರರು, ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದರು.

ಬುಧವಾರ ಏರ್ಪಡಿಸಲಾಗಿದ್ದ ಸರ್ಕಾರಿ ನೌಕರರೊಂದಿಗಿನ ಸಂವಾದದಲ್ಲಿ ಅವರು ಅಧಿಕಾರಿಗಳಿಗೆ ಹಲವು ನಿರ್ದೇಶನ ನೀಡಿದರು. ತಮಿಳುನಾಡಿಗೆ ಎಷ್ಟು ನೀರು ಬಿಡಬೇಕು ಅಥವಾ ಬಿಡಬಾರದೇ ಎಂಬ ಬಗ್ಗೆ ತೀರ್ಮಾನಿಸುವುದು ನಮ್ಮ ಜವಾಬ್ದಾರಿ. ಆದರೆ, ಕಾವೇರಿ ವಿಚಾರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಿಮ್ಮದು. ನೀರು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಕಬಿನಿ ಸಂಪೂರ್ಣ ಭರ್ತಿಯಾದರೆ ನೀರು ಹರಿಯುತ್ತದೆ. ಜಲಾಶಯಗಳಲ್ಲಿ ನೀರು ಎಷ್ಟು ಸಂಗ್ರಹವಾಗುತ್ತದೆ ಎಂಬುದರ ಆಧಾರದಲ್ಲಿ ರೈತರು ಬೆಳೆ ಬೆಳೆಯಬೇಕು. ನೀರಿನ ಸಂಗ್ರಹದ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ಸಂವಾದದಲ್ಲಿ ಭಾಗಿಯಾಗಿದ್ದ ಮಂಡ್ಯ ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಡಿ.ಕೆ.ಶಿವಕುಮಾರ್‌ ಸೂಚಿಸಿದರು.

ಮತ ಹಕ್ಕು ಕಳೆದುಕೊಳ್ಳಬಾರದು:

ಎಸ್‌ಐಆರ್‌ ಕುರಿತಂತೆ ಎಲ್ಲ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಿಜವಾದ ಮತದಾರರು ಯಾವುದೇ ಕಾರಣಕ್ಕೂ ಸಂವಿಧಾನ ನೀಡಿದ ಹಕ್ಕನ್ನು ಕಳೆದುಕೊಳ್ಳಬಾರದು. ಎಸ್‌ಐಆರ್‌ನಲ್ಲಿ ಪಾಲ್ಗೊಳ್ಳುವುದು ಸೇರಿ ಮತ ಹಕ್ಕು ಉಳಿಸಿಕೊಳ್ಳಲು ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ನಿರ್ದೇಶಿಸಿದರು.

ಜಿಪಂ ಮಟ್ಟದಲ್ಲಿ ಭಾರತ್‌ ಜೋಡೋ ಸಂಘಗಳ ಸ್ಥಾಪನೆ, ಪ್ರಜಾ ಸೇವೆ ಕುರಿತಂತೆಯೂ ಜನರಿಗೆ ಜಾಗೃತಿ ಮೂಡಿಸಬೇಕು. ಈ ಸಂಬಂಧ ಮಾಹಿತಿ ಒಳಗೊಂಡ ಕರಪತ್ರವನ್ನು ಸಿದ್ಧಪಡಿಸಿ ಜನರಿಗೆ ವಿತರಿಸಬೇಕು ಎಂದರು.

750 ಕಡೆಗಳಿಂದ 2.50 ಲಕ್ಷ ನೌಕರರು ಭಾಗಿ:

ಸಂವಾದ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಅಧಿಕಾರಿ, ನೌಕರರು ಪಾಲ್ಗೊಂಡಿದ್ದರು. ಬೆಂಗಳೂರು ಹೊರತುಪಡಿಸಿ ರಾಜ್ಯದ 750 ಕಡೆಗಳಲ್ಲಿ 2.50 ಲಕ್ಷ ಅಧಿಕಾರಿ, ನೌಕರರು ವರ್ಚ್ಯುವಲ್‌ ಮೂಲಕ ಸಂವಾದದಲ್ಲಿ ಭಾಗವಹಿಸಿದ್ದರು.

-ಬಾಕ್ಸ್‌-

‘ಎಸ್‌ಐಆರ್‌ ಚೆನ್ನಾಗಿದೆ

ಎಂದರೇನಮ್ಮಾ’: ಸಿಎಂ!

ಸಂವಾದ ವೇಳೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಹಸೀಲ್ದಾರ್‌ ಅವರಿಗೆ ನಿಮ್ಮಲ್ಲಿ ಎಸ್‌ಐಆರ್‌ ಪ್ರಗತಿ ಹೇಗಿದೆ ಎಂದು ಮುಖ್ಯಮಂತ್ರಿಗಳು ಕೇಳಿದರು. ಅದಕ್ಕೆ ತಹಸೀಲ್ದಾರ್‌ ಅವರು, ಎಲ್ಲಾ ಚೆನ್ನಾಗಿದೆ ಸರ್‌ ಎಂದು ಉತ್ತರಿಸಿದರು. ಅದಕ್ಕೆ ಮುಖ್ಯಮಂತ್ರಿಗಳು, ಚೆನ್ನಾಗಿದೆ ಎಂದರೇನಮ್ಮಾ? ಎಷ್ಟು ಮತಗಳನ್ನು ಡಿಲೀಟ್‌ ಮಾಡಿಸಿದ್ದೀಯ. ಎಷ್ಟು ಜನರನ್ನು ಉಳಿಸಿದ್ದೀಯಾ ಎಂದು ನಗುತ್ತಾ ಪ್ರಶ್ನಿಸಿದರು. ಕೊನೆಗೆ ತಹಸೀಲ್ದಾರ್‌ ಅವರು ಉತ್ತರಿಸಿ, ತಮ್ಮ ಕ್ಷೇತ್ರದಲ್ಲಿ 42 ಸಾವಿರ ಮತಗಳು ಡಿಲೀಟ್‌ ಆಗಿವೆ. ಅದರಲ್ಲಿ 8 ಸಾವಿರ ಮಂದಿ ಮರಣ ಹೊಂದಿದ್ದು, 18 ಸಾವಿರ ಶಾಶ್ವತ ಸ್ಥಳಾಂತಗೊಂಡ ಮತಗಳಾಗಿವೆ ಎಂದರು.

ಸಿಎಂ-ಡಿಸಿಎಂ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬು:

ಬರ ನಿರ್ವಹಣೆ, ಎಸ್‌ಐಆರ್‌ ಕುರಿತು ಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಅಧಿಕಾರಿಗಳು ತಬ್ಬಿಬ್ಬಾದರು. ಅದರಲ್ಲೂ ಬರ ನಿರ್ವಹಣೆಗೆ ಸಂಬಂಧಿಸಿ ಅಧಿಕಾರಿಗಳು ನೀಡುತ್ತಿದ್ದ ಮಾಹಿತಿಯಿಂದ ತೃಪ್ತರಾಗದ ಡಾ.ಜಿ.ಪರಮೇಶ್ವರ್‌, ನಿಮ್ಮ ವ್ಯಾಪ್ತಿಯಲ್ಲಿ ಬರ ಪರಿಸ್ಥಿತಿ ಎದುರಿಸಲು ಯಾವೆಲ್ಲ ಕ್ರಮ ಕೈಗೊಂಡಿದ್ದೀರಿ ಎಂದು ಸ್ಪಷ್ಟವಾಗಿ ತಿಳಿಸಿ ಎಂದು ಕೆಲ ಅಧಿಕಾರಿಗಳಿಗೆ ಜೋರಾಗಿಯೇ ಕೇಳಿದರು.

ಡಿ.ಕೆ.ಶಿವಕುಮಾರ್‌ ಅವರು, ಎಸ್‌ಐಆರ್‌ನಲ್ಲಿ ಮತಗಳ ಡಿಲೀಟ್‌ ಬಗ್ಗೆ ಮಾತ್ರ ಹೇಳುತ್ತಿದ್ದೀರಿ. ಆದರೆ, ಮತ ಹಕ್ಕು ಕಳೆದುಕೊಳ್ಳದಂತೆ ತಡೆಯಲು ಏನು ಕೆಲಸ ಮಾಡಿದ್ದೀರಿ. ಜನರಿಗೆ ಆ ಬಗ್ಗೆ ತಿಳಿಸಿದ್ದೀರಾ ಎಂದು ಪ್ರಶ್ನಿಸಿದರು. ಮತ ಹಕ್ಕು ಕಳೆದುಕೊಂಡವರು ಬಾಂಗ್ಲಾದೇಶದವರಲ್ಲವಲ್ಲಾ? ಅವರಿಗೆ ಹೇಗೆ ಸಹಾಯ ಮಾಡುತ್ತಿದ್ದೀರಿ. ಈ ಬಗ್ಗೆ ಜಿಲ್ಲಾಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೈಕ್ಷಣಿಕ ಶ್ರೇಷ್ಠತೆಗೆ ಹೊಸ ಅಧ್ಯಾಯ ಬರೆದ ಎಕ್ಸಲೆಂಟ್
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತಸಂಘ ಆಗ್ರಹ