ಕರ್ನಾಟಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ 2026ನೇ ಸಾಲಿನ ಅಂತಿಮ ವಿಶೇಷ ನಿಯಮಾವಳಿಯನ್ನು ಅಧಿಕೃತವಾಗಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಬೇಕೆಂದು ಕನಸು ಕಾಣುತ್ತಿರುವ ಲಕ್ಷಾಂತರ ಯುವಜನತೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಕರ್ನಾಟಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ 2026ನೇ ಸಾಲಿನ ಅಂತಿಮ ವಿಶೇಷ ನಿಯಮಾವಳಿಯನ್ನು ಅಧಿಕೃತವಾಗಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಈ ಮೂಲಕ ಶೀಘ್ರದಲ್ಲೇ 15,000ಕ್ಕೂ ಹೆಚ್ಚು ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವ ಹಾದಿ ಸುಗಮವಾಗಿದೆ.
ಈ ಬಾರಿ ನೇಮಕಾತಿ ನಿಯಮಗಳಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. 1 ರಿಂದ 5ನೇ ತರಗತಿ, 6 ರಿಂದ 8ನೇ ತರಗತಿ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಿಗೆ ನಡೆಯುತ್ತಿದ್ದ ದೀರ್ಘ ಬರವಣಿಗೆ ಅಂದರೆ ವಿವರಣಾತ್ಮಕ ಪರೀಕ್ಷೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಇನ್ನು ಮುಂದೆ ಕೇವಲ ಬಹುಆಯ್ಕೆಯ ಪ್ರಶ್ನೆಗಳ ಆಧಾರದ ಮೇಲೆಯೇ ಪರೀಕ್ಷೆ ನಡೆಯಲಿದೆ. ಇದರಿಂದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯುವುದು ಹಾಗೂ ಸಮಯ ಉಳಿಸುವುದು ಸುಲಭವಾಗಲಿದೆ.
ಗೆಜೆಟ್ ವಿವರಗಳು:
ವಿವರಣಾತ್ಮಕ ಪರೀಕ್ಷೆ ರದ್ದು ಮಾಡಿದ್ದು, ಹೊಸ ನಿಯಮದ ಸಂಪೂರ್ಣವಾಗಿ ಸ್ಪರ್ಧಾತ್ಮಕ ಪರೀಕ್ಷೆಯು ಒಎಂಆರ್ ಶೀಟ್ ಆಧಾರಿತ ಬಹುಆಯ್ಕೆ ಪ್ರಶ್ನೆಗಳ ರೂಪದಲ್ಲಿಯೇ ಇರಲಿದೆ. ಎಲ್ಲಾ ವೃಂದದ ಶಿಕ್ಷಕ ಹುದ್ದೆಗಳಿಗೆ ಒಟ್ಟು 200 ಅಂಕಗಳ ಪರೀಕ್ಷೆ ನಡೆಯಲಿದೆ. ಇದನ್ನು ಎರಡು ಪತ್ರಿಕೆಗಳಾಗಿ ವಿಂಗಡಿಸಲಾಗಿದೆ.
ಪತ್ರಿಕೆ 1 ಇದರಲ್ಲಿ 100 ಅಂಕಗಳಿದ್ದು, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನ, ಶೈಕ್ಷಣಿಕ ಮನೋವಿಜ್ಞಾನ, ಸಾಮಾನ್ಯ ಕನ್ನಡ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಸಾಕ್ಷರತೆ ಪ್ರಶ್ನೆಗಳಿರುತ್ತವೆ. ಪತ್ರಿಕೆ 2 ಇದರಲ್ಲಿ 100 ಅಂಕಗಳಿದ್ದು, ಇದು ವಿಷಯ ನಿರ್ದಿಷ್ಟ ಪತ್ರಿಕೆಯಾಗಿದೆ. ಅಂದರೆ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಗಣಿತ, ವಿಜ್ಞಾನ ಅಥವಾ ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇಲ್ಲಿರುತ್ತವೆ. ಎರಡೂ ಪತ್ರಿಕೆಗಳಲ್ಲಿ ಕನಿಷ್ಠ ಶೇ.35ರಷ್ಟು ಅಂಕ ಪಡೆದರೆ ಮಾತ್ರ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸಲಾಗುತ್ತದೆ.
ಸೇವಾನಿರತ ಶಿಕ್ಷಕರಿಗೆ ಹೊಸ ನಿಯಮ:
ಈಗಾಗಲೇ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವವರು, ತಾವು ಇರುವ ಅದೇ ಹುದ್ದೆಗೆ ಮತ್ತೆ ಅರ್ಜಿ ಹಾಕುವಂತಿಲ್ಲ. ಉದಾಹರಣೆಗೆ ಜಿಪಿಎಸ್ಟಿಆರ್ ಶಿಕ್ಷಕರಾಗಿರುವವರು, ಮತ್ತೆ ಅದೇ ವೃಂದದ ಹುದ್ದೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ. ಕಂಪ್ಯೂಟರ್ ಸೈನ್ಸ್ ಶಿಕ್ಷಕರ ಹುದ್ದೆಗೆ ಬಿ.ಎಸ್ಸಿ ಸಿಎಸ್, ಬಿಸಿಎ ಅಥವಾ ಬಿಇ ಬಿಟೆಕ್ ಪದವಿ ಪಡೆದವರು ಅರ್ಜಿ ಹಾಕಬಹುದು. ಇವರು ನೇಮಕಗೊಂಡ ಐದು ವರ್ಷಗಳ ಒಳಗೆ ಬಿ.ಎಡ್ ಮತ್ತು ಟಿಇಟಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.