ಮಹಿಳೆಯರ ದೌರ್ಜನ್ಯ ಹೆಚ್ಚಳಕ್ಕೆ ಮದ್ಯ, ಮಾದಕ ವಸ್ತು ಕಾರಣ

KannadaprabhaNewsNetwork |  
Published : Feb 08, 2026, 02:45 AM IST
ಪೋಟೊ7.8: ಕೊಪ್ಪಳ ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ಮಹಿಳಾ ಸ್ಪಂದನಾ ಕಾರ್ಯಕ್ರಮ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಮದ್ಯ,ಗಾಂಜಾ ಡ್ರಗ್ಸ್ ನಂತಹ ಮಾದಕ ವಸ್ತುಗಳು ಯಾವುದೇ ವ್ಯಕ್ತಿಯನ್ನು ನಶೆಯಲ್ಲಿ ಮುಳುಗಿಸಿ ನೈತಿಕ ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡುತ್ತವೆ

ಕೊಪ್ಪಳ: ಯಥೇಚ್ಛವಾಗಿ ದೊರೆಯುವ ಮದ್ಯ ಮತ್ತು ಮಾದಕ ವಸ್ತು ಮಹಿಳೆಯರ ಮೇಲಿನ ಹಲ್ಲೆ ಅತ್ಯಾಚಾರದಂತಹ ದೌರ್ಜನ್ಯಕ್ಕೆ ಪ್ರಮುಖ ಕಾರಣ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.

ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಹಿಳಾ ಸ್ಪಂದನಾ ಕಾರ್ಯಕ್ರಮ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮದ್ಯ,ಗಾಂಜಾ ಡ್ರಗ್ಸ್ ನಂತಹ ಮಾದಕ ವಸ್ತುಗಳು ಯಾವುದೇ ವ್ಯಕ್ತಿಯನ್ನು ನಶೆಯಲ್ಲಿ ಮುಳುಗಿಸಿ ನೈತಿಕ ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ನಶೆಯಲ್ಲಿ ಮಹಿಳೆಯರ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆಯಂತಹ ದೌರ್ಜನ್ಯವೆಸಗುತ್ತಾರೆ. ಆದ್ದರಿಂದ ಜಿಲ್ಲೆಯಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕಬೇಕು. ಅಬಕಾರಿ ಇಲಾಖೆಯಿಂದ ನೀಡಲಾಗುವ ಪರವಾನಗಿ ನಿಯಮಾನುಸಾರ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕಿರಾಣಿ, ಪಾನ್ ಮಸಾಲಾ ಅಂಗಡಿಗಳಲ್ಲಿಯೂ ಮದ್ಯ ದೊರೆಯುವುದು ಆರೋಗ್ಯಕರ ವಿಷಯವಲ್ಲ. ಅಪ್ರಾಪ್ತರು ಕೂಡ ಇಂತಹ ವ್ಯಸನಗಳಿಗೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಅಬಕಾರಿ ಇಲಾಖೆ ಕಡ್ಡಾಯವಾಗಿ ಕ್ರಮ ತೆಗೆದುಕೊಂಡು ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಿಳೆಯರ ಮೇಲೆ ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳ, ಮಾನಸಿಕ ಒತ್ತಡ ತಡೆಯಲು ಜಿಲ್ಲೆಯ ಎಲ್ಲ ಪೊಲೀಸ್ ಠಾಣೆ, ಮಹಿಳೆಯರು ಅಥವಾ ಪುರುಷರು ಎಂದು ನೋಡದೆ ಹತ್ತಕ್ಕಿಂತ ಹೆಚ್ಚು ಉದ್ಯೋಗಿ ಕಾರ್ಯನಿರ್ವಹಿಸುವ ಎಲ್ಲ ಸರ್ಕಾರಿ,ಖಾಸಗಿ ಸಂಸ್ಥೆ, ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ನಿವಾರಣಾ ಸಮಿತಿ ರಚಿಸಬೇಕು. ಸಮಿತಿ ಇರುವ ಬಗ್ಗೆ ಪ್ರತಿ ಕಚೇರಿಗಳಲ್ಲಿ ಪ್ರದರ್ಶನ ಫಲಕ ಅಳವಡಿಸಬೇಕು. ಈ ಬಗ್ಗೆ ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ₹ 5 ಲಕ್ಷದವರೆಗೆ ದಂಡ ವಿಧಿಸುವ ಸಾಧ್ಯತೆ ಇರುತ್ತದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಮಿತಿ ಸಭೆ ನಡೆಸಿ ವಾರ್ಷಿಕವಾಗಿ ಮಹಿಳಾ ಆಯೋಗಕ್ಕೆ ವರದಿ ಸಲ್ಲಿಸಬೇಕು. ಸೈಬರ್ ವಂಚನೆ ಪರಿಣಾಮಕಾರಿಯಾಗಿ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು. ಕಾರ್ಮಿಕ ಇಲಾಖೆ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯುವ ಪ್ರತಿಯೊಂದು ಕಾರ್ಖಾನೆ, ಸಂಸ್ಥೆಗಳಲ್ಲಿ ಆಂತರಿಕ ದೂರು ನಿವಾರಣಾ ಸಮಿತಿ ರಚಿಸುವ ಷರತ್ತು ಇರಬೇಕು. ಅದನ್ನು ಪರಿಶೀಲಿಸಿಯೇ ಪರವಾನಗಿ ನೀಡಬೇಕು ಎಂದರು.

ಸಭೆಯ ನಂತರ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಅಹವಾಲಿನ ಆಧಾರದ ಮೇಲೇ ಕೆಲ ಪ್ರಕರಣಗಳನ್ನು ಸ್ಥಳದಲ್ಲಿಯೇ ಪರಿಹಾರ ಒದಗಿಸಿದರು. ಏಕ ಪೋಷಕತ್ವ ಹೊಂದಿದ ಮಹಿಳೆಯರು, ಮಕ್ಕಳಿಗೆ ಪ್ರಾಯೋಜಕತ್ವ ಯೋಜನೆಯಡಿ ಮಾಸಿಕ ₹6000 ದೊರಕಿಸಿಕೊಡುವಂತೆ ಸಂಬಂಧಿಸಿದ ಅಧಿಕಾರಿಗೆ ತಿಳಿಸಿದರು.

ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಡಿಎಫ್‌ಒ ನಿರ್ಮಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ್, ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ
ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು