ಗದುಗಿನಲ್ಲಿ ಹಾಲಿಗಿಂತ ಮೊದಲೇ ಇಲ್ಲಿ ಮದ್ಯ ಸಿಗುತ್ತೆ!

KannadaprabhaNewsNetwork |  
Published : May 13, 2026, 01:15 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಅಬಕಾರಿ ನಿಯಮಗಳ ಪ್ರಕಾರ ಬೆಳಗ್ಗೆ 10 ಗಂಟೆಯ ಮೊದಲು ಮದ್ಯ ಮಾರಾಟ ಮಾಡುವಂತಿಲ್ಲ. ಆದರೆ ಗದುಗಿನಲ್ಲಿ ಬೆಳಗ್ಗೆ 6ಕ್ಕೇ ಮದ್ಯದ ವ್ಯಾಪಾರ ಶುರುವಾಗುತ್ತಿದೆ.

ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲಾದ್ಯಂತ ಅಬಕಾರಿ ಇಲಾಖೆಯ ನಿಯಮಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದ್ದು, ವಾಸ್ತವದಲ್ಲಿ ಮದ್ಯದ ಅಂಗಡಿಗಳ ಮಾಲೀಕರು ಮತ್ತು ಅಧಿಕಾರಿಗಳ ನಡುವಿನ ಅಲಿಖಿತ ಒಪ್ಪಂದ ಜನಸಾಮಾನ್ಯರ ನೆಮ್ಮದಿಗೆ ಕೊಳ್ಳಿ ಇಡುತ್ತಿದೆ. ಪ್ರತಿದಿನ ಬೆಳಗ್ಗೆ 6ಕ್ಕೆ ಬಾರ್‌ಗಳು ಬಾಗಿಲು ತೆರೆಯುತ್ತಿರುವುದು ಒಂದೆಡೆಯಾದರೆ, ಹಳ್ಳಿ ಹಳ್ಳಿಗಳ ಚಹಾ ಅಂಗಡಿಗಳಲ್ಲಿ ಅಕ್ರಮ ಮದ್ಯದ ಹೊಳೆ ಹರಿಯುತ್ತಿರುವುದು ಜಿಲ್ಲಾಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಅಬಕಾರಿ ನಿಯಮಗಳ ಪ್ರಕಾರ ಬೆಳಗ್ಗೆ 10 ಗಂಟೆಯ ಮೊದಲು ಮದ್ಯ ಮಾರಾಟ ಮಾಡುವಂತಿಲ್ಲ. ಆದರೆ ಗದುಗಿನಲ್ಲಿ ಬೆಳಗ್ಗೆ 6ಕ್ಕೇ ಮದ್ಯದ ವ್ಯಾಪಾರ ಶುರುವಾಗುತ್ತಿದೆ. ಇದು ಕರ್ನಾಟಕ ಅಬಕಾರಿ (ಪರವಾನಗಿಗಳ ಸಾಮಾನ್ಯ ನಿಬಂಧನೆಗಳು) ನಿಯಮಗಳು 1967ರ ಅಡಿಯಲ್ಲಿ ಸಮಯದ ಮಿತಿಯ ಸ್ಪಷ್ಟ ಉಲ್ಲಂಘನೆಯಾಗಿದೆ.

ನಿಗದಿತ ಪರವಾನಗಿ ಇಲ್ಲದ ಸ್ಥಳಗಳಲ್ಲಿ (ಚಹಾ ಅಂಗಡಿಗಳಲ್ಲಿ) ಮದ್ಯ ಮಾರಾಟ ಮಾಡುವುದು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 15ರ ಅಡಿಯಲ್ಲಿ ಜಾಮೀನು ರಹಿತ ಅಪರಾಧವಾಗಿದೆ. ಸೇಲ್ಸ್ ಹೆಚ್ಚಿಸುವ ನೆಪದಲ್ಲಿ ಅಬಕಾರಿ ಅಧಿಕಾರಿಗಳೇ ಮದ್ಯದ ಅಂಗಡಿಗಳ ಮೇಲೆ ಒತ್ತಡ ಹೇರುತ್ತಿರುವುದು, ಪರೋಕ್ಷವಾಗಿ ಅಕ್ರಮ ಸಾಗಾಟಕ್ಕೆ ಪ್ರಚೋದನೆ ನೀಡಿದಂತಾಗುತ್ತಿದೆ.

ವ್ಯತಿರಿಕ್ತ ಪರಿಣಾಮ: ಬೆಳ್ಳಂಬೆಳಗ್ಗೆ ಮದ್ಯ ಸಿಗುತ್ತಿರುವುದರಿಂದ ಕಾರ್ಮಿಕ ವರ್ಗದವರು ಮತ್ತು ಯುವಜನತೆ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ದಿನದ ಕೂಲಿಯನ್ನು ಬೆಳಗ್ಗೆಯೇ ಮದ್ಯಕ್ಕೆ ಸುರಿಯುತ್ತಿರುವುದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬರುತ್ತಿವೆ. ಇದರಿಂದ ಜಿಲ್ಲೆಯಲ್ಲಿ ಕೌಟುಂಬಿಕ ಕಲಹಗಳು ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ.

ಅಬಕಾರಿ ಅಂಗಡಿಗಳಿಂದ ಹೊರಬರುವ ಗಾಜು ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಗಟಾರಗಳಿಗೆ ಎಸೆಯುವುದರಿಂದ ಮಳೆಗಾಲದಲ್ಲಿ ಚರಂಡಿ ನೀರು ಹರಿದು ಹೋಗುವುದು ದುಸ್ತರವಾಗುತ್ತಿದ್ದು, ಇತ್ತೀಚೆಗೆ ಸುರಿದ ಮಳೆಯ ಸಂದರ್ಭದಲ್ಲಿ ಇದು ಸಾಬೀತಾಗಿದೆ. ಅಕ್ರಮ ಮದ್ಯ ಸಾಗಾಟದ ವ್ಯಾನ್ ಮತ್ತು ಬೈಕ್‌ಗಳ ಹಾವಳಿಯಿಂದ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆಯೂ ವ್ಯಾಪಕವಾಗಿ ಹೆಚ್ಚಳವಾಗಿದೆ.

ಅಧಿಕಾರಿಗಳ ಮೌನ ಸಮ್ಮತಿ: ಜಿಲ್ಲಾ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಈ ಎಲ್ಲ ಅಕ್ರಮಗಳ ಮಾಹಿತಿ ಇದ್ದರೂ ಆದಾಯ ಸಂಗ್ರಹದ ನೆಪವೊಡ್ಡಿ ಮೌನಕ್ಕೆ ಶರಣಾಗಿದ್ದಾರೆ. ಸಾರ್ವಜನಿಕರು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಾ ನುಣುಚಿಕೊಳ್ಳುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಮದ್ಯದ ಘಾಟು ಹರಡುತ್ತಿರುವುದು ಜಿಲ್ಲೆಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡುವುತ್ತಿದೆ. ಇನ್ನಾದರೂ ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಅಕ್ರಮ ಮದ್ಯದ ಜಾಲಕ್ಕೆ ಮತ್ತು ಸಮಯ ಮೀರಿ ನಡೆಯುವ ವ್ಯವಹಾರಕ್ಕೆ ಬ್ರೇಕ್ ಹಾಕಬೇಕಿದೆ.

ಈ ಕುರಿತು ಅಧಿಕಾರಿಗಳನ್ನು ಸಂಪರ್ಕಿಸಿದರೆ, ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಲು ನಮಗೆ ಅಧಿಕಾರವಿಲ್ಲ, ನಮ್ಮ ಹೆಸರನ್ನು ಬಳಸಬೇಡಿ ಎನ್ನುತ್ತಾರೆ ಜಿಲ್ಲಾ ಅಬಕಾರಿ ಡಿಸಿ.169 ಮದ್ಯ ಮಾರಾಟ ಮಳಿಗೆಗಳು

ಜಿಲ್ಲೆಯಲ್ಲಿ ಒಟ್ಟು 169 ಮದ್ಯ ಮಾರಾಟದ ಮಳಿಗೆಗಳಿವೆ. ಅದರಲ್ಲಿ 133 ನಗರ ಪ್ರದೇಶದ ವ್ಯಾಪ್ತಿಯಲ್ಲಿವೆ. ಉಳಿದ 36 ಅಂಗಡಿಗಳು ಗ್ರಾಮೀಣ ಪ್ರದೇಶದಲ್ಲಿವೆ. ಅದೇ ರೀತಿ ಅಬಕಾರಿ ಇಲಾಖೆಯ ಒಟ್ಟು ಗಸ್ತು ಮಾರ್ಗಗಳು 34 ಇವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮದೇವಿ ದರ್ಶನ
ರಾಜಕೀಯ ವ್ಯವಸ್ಥೆ ಕುಲಗೆಟ್ಟು ಹೋಗಲು ನಾವೇ ಕಾರಣ-ಪ್ರಮೋದ ಮುತಾಲಿಕ್‌