ಬಂಕಾಪುರ: ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣವಾಗಲು 500 ವರ್ಷಗಳ ಪ್ರಯತ್ನ ಮತ್ತು ಪರಿಶ್ರಮ ಬೇಕಾಯಿತು. ಆರ್‌ಎಸ್ಎಸ್ ನಮಗೆ ಜೀವ ಇರುವವರೆಗೂ ಸನಾತನ ಧರ್ಮವನ್ನು ಹಾಗೂ ಹಿಂದುತ್ವವನ್ನು ಉಳಿಸಲು ತಿಳಿಸುತ್ತದೆ. ಈಗಿನ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಕುಲಗೆಟ್ಟು ಹೋಗಿದ್ದು ಸುಧಾರಣೆಯಾಗದಷ್ಟು ಹದಗೆಟ್ಟು ಹೋಗಿವೆ. ಇದಕ್ಕೆ ನಮ್ಮ ಬೇಜವಾಬ್ದಾರಿಯೇ ಕಾರಣ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.
ಸರ್ವೇ ಜನಃ ಸುಖಿನೋ ಭವಂತು ಎಂದು ಹೇಳುವ ದೇಶ ಎಂದರೆ ಅದು ನಮ್ಮ ಭಾರತ. ಪಹಲ್ಗಾಂವ ದಾಳಿ ನಡೆದು ವರ್ಷ ಗತಿಸಿದ್ದು ಇಂತಹ ಕುಕೃತ್ಯಗಳನ್ನು ಮಟ್ಟ ಹಾಕಲು ಹಾಗೂ ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಾಣ ಮಾಡಲು ಎರಡನೇ ಸರ್ದಾರ್ ವಲ್ಲಭಾಯಿ ಪಟೇಲ್‌ರಾದ ನರೇಂದ್ರ ಮೋದಿಯವರು ಬರಬೇಕಾಯಿತು ಎಂದರು. ಕಾರ್ಯಕ್ರಮದ ಅತಿಥಿ ಭಾಷಣ ಮಾಡಿದ ವಿಧಾನ ಪರಿಷತ್ ಸದಸ್ಯರಾದ ಅರುಣ ಮಾತನಾಡಿ, ನಮ್ಮ ದೇಶವು ಸನಾತನ ಧರ್ಮದ ತಳಹದಿಯ ಮೇಲೆ ನಿಂತಿದ್ದು ಧರ್ಮೋ ರಕ್ಷತಿ ರಕ್ಷಿತಃ ಎಂಬ ಧ್ಯೇಯ ಹೊಂದಿದೆ ಎಂದರು. ದೇವಸ್ಥಾನಗಳಿಗೆ ಹೋಗುವ ಮುಖಾಂತರ ಹಿರಿಯರು ಮಕ್ಕಳಲ್ಲಿ ಧಾರ್ಮಿಕ ಭಾವನೆ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಬೇಕು ಎಂದರು. ಹಿಂದೂ ಪೀಳಿಗೆ ಇರುವ ದೇಶ ಎಂದರೆ ಅದು ನಮ್ಮ ಭಾರತ. ನಾವು ಗುರು, ಗಾಳಿ, ನೀರು, ಬೆಂಕಿ ಎಲ್ಲವನ್ನೂ ಪೂಜಿಸುತ್ತೇವೆ. ಯಾವ ದೇಶವು ಸಂಸ್ಕೃತಿ ಬಿಟ್ಟಿದೆಯೋ ಆ ದೇಶವು ದೀವಾಳಿಯಾಗಿದೆ. ಒಳ್ಳೆಯ ಸಂಸ್ಕಾರ ಮೈಗೂಡಿಸಿಕೊಳ್ಳುವ ಮುಖಾಂತರ ನಮ್ಮ ದೇಶಕ್ಕೆ ಶಕ್ತಿ ನೀಡೋಣ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಅರಳೆಲೆ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅಗಡಿ ಆನಂದವನದ ವಿಶ್ವನಾಥ ಚಕ್ರವರ್ತಿಗಳು ಹಾಗೂ ಕೆಂಡದಮಠದ ಸಿದ್ದಯ್ಯ ಸ್ವಾಮಿಗಳು ವಹಿಸಿದ್ದರು.ಕಾರ್ಯಕ್ರಮದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ, ಭಾರತ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ ದುಂಡಿಗೌಡ್ರ, ಬಿಜೆಪಿ ನಾಯಕ ಸಿದ್ದಲಿಂಗಪ್ಪ ಕಮಡೊಳ್ಳಿ, ಪುರಸಭೆಯ ಉಪಾಧ್ಯಕ್ಷರಾದ ಆಂಜನೇಯ ಗುಡಗೇರಿ, ಸದಸ್ಯರಾದ ಸುರೇಶ ಕುರಗೋಡಿ, ಸತೀಶ ಆಲದಕಟ್ಟಿ, ಯಲ್ಲಪ್ಪ ಸುಂಕದ ಹಾಗೂ ಮೇಘರಾಜ ಕೂಲಿ, ಪ್ರಶಾಂತ ಗುತ್ತಲ, ಮೋಹನ ಮೇಲಗಿರಿ, ಡಾ. ಆರ್.ಎಸ್. ಅರಳೆಲೆ ಹಿರೇಮಠ, ಡಾ. ಕೆ.ಎಮ್. ಬೊಮ್ಮನಹಳ್ಳಿ, ಕೇಶವಮೂರ್ತಿ, ನಿಂಗನಗೌಡ್ರ ಪಾಟೀಲ, ಸಿದ್ದಪ್ಪ ಹರವಿ ಭಾಗವಹಿಸಿದ್ದರು. ಕಾರ್ಯಕ್ರಮದ ಮೊದಲಿಗೆ ಮಕ್ಕಳಿಂದ ಪ್ರಾರ್ಥನಾ ಗೀತೆ ಹಾಗೂ ಹನುಮಾನ್ ಚಾಲೀಸಾ ಪಠಣ ಮಾಡಿಸಲಾಯಿತು. ಡಾ. ಸಿದ್ದಲಿಂಗಪ್ಪ ನರೇಗಲ್ಲ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬಿಜೆಪಿ ನಾಯಕರಾದ ಬಸವರಾಜ ನಾರಾಯಣಪುರ ಅವರು ಸ್ವಾಗತ ಭಾಷಣ ಮಾಡಿದರು. ನಿವೃತ್ತ ಶಿಕ್ಷಕ ಎ.ಕೆ. ಆದವಾನಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಎಂ.ಬಿ. ಉಂಕಿ ಕಾರ್ಯಕ್ರಮ ನಿರೂಪಿಸಿದರು.