ಬ್ಯಾಡಗಿಯಲ್ಲಿ ಮತ್ತೆ ಮುಖ್ಯರಸ್ತೆ ಅಗಲೀಕರಣ ಹೈಡ್ರಾಮಾ

KannadaprabhaNewsNetwork |  
Published : May 13, 2026, 01:15 AM IST
ಫೋಟೊ-12ಬಿವೈಡಿ1ಏ-ಬ್ಯಾಡಗಿ-4ನೇ ದಿನದ ಕರ‍್ಯಾಚರಣೆ ದೃಶ್ಯ | Kannada Prabha

ಸಾರಾಂಶ

ಸೋಮವಾರ ನಡೆದ ಸಭೆಯಲ್ಲಿ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಾಮೂಹಿಕವಾಗಿ ಒಪ್ಪಿಗೆ ಸೂಚಿಸಿದ್ದ ಮುಖ್ಯ ರಸ್ತೆ ನಿವಾಸಿ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್, ಮಂಗಳವಾರ ನಡೆದ 4ನೇ ದಿನದ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಏಕಾಏಕಿ ಯೂ-ಟರ್ನ್ ಹೊಡೆದು ಜಿಲ್ಲಾಧಿಕಾರಿಗಳ ಎದುರೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಪಟ್ಟಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.

ಬ್ಯಾಡಗಿ: ಸೋಮವಾರ ನಡೆದ ಸಭೆಯಲ್ಲಿ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಾಮೂಹಿಕವಾಗಿ ಒಪ್ಪಿಗೆ ಸೂಚಿಸಿದ್ದ ಮುಖ್ಯ ರಸ್ತೆ ನಿವಾಸಿ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್, ಮಂಗಳವಾರ ನಡೆದ 4ನೇ ದಿನದ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಏಕಾಏಕಿ ಯೂ-ಟರ್ನ್ ಹೊಡೆದು ಜಿಲ್ಲಾಧಿಕಾರಿಗಳ ಎದುರೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಪಟ್ಟಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.ಸೋಮವಾರ ಎಲ್ಲ ವ್ಯಾಪಾರಿಗಳು ಹಾಗೂ ಕಟ್ಟಡ ಮಾಲೀಕರು ಅಗಲೀಕರಣಕ್ಕೆ ಸಹಕಾರ ಸೂಚಿಸಿದ್ದರಿಂದ “ಇನ್ನು ಯಾವುದೇ ಅಡೆತಡೆ ಇಲ್ಲದೆ ಕಾರ್ಯಾಚರಣೆ ಮುಗಿಯಲಿದೆ” ಎಂಬ ನಿರಾಳ ಭಾವನೆ ಪಟ್ಟಣದ ಜನರಲ್ಲಿ ಮೂಡಿತ್ತು. ಆದರೆ ಮಂಗಳವಾರ ಬೆಳಗ್ಗೆ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಮುರಿಗೆಪ್ಪ ಶೆಟ್ಟರ್ ಮತ್ತೊಂದು ಹೊಸ ನಾಟಕ ಆರಂಭಿಸಿದ್ದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿತು.ಮಂಗಳವಾರ ನಡೆದದ್ದೇನು?: ಮುಖ್ಯರಸ್ತೆಯ 4ನೇ ದಿನದ ತೆರವು ಕಾರ್ಯಾಚರಣೆಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ನೇತೃತ್ವದಲ್ಲಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಇದೇ ವೇಳೆ ಮಾತನಾಡಿದ ಮುರಿಗೆಪ್ಪ ಶೆಟ್ಟರ್, “ನಮ್ಮ ಕಟ್ಟಡ ತೆರವುಗೊಳಿಸಲು ಕನಿಷ್ಠ ಒಂದು ತಿಂಗಳ ಕಾಲಾವಕಾಶ ನೀಡಿ” ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, “ನೀವು ಸೋಮವಾರ ಸಾರ್ವಜನಿಕರ ಎದುರೇ ಒಪ್ಪಿಗೆ ಸೂಚಿಸಿದ್ದೀರಿ. ಈಗಾಗಲೇ ಬಹುತೇಕ ವ್ಯಾಪಾರಿಗಳು ತಮ್ಮ ಕಟ್ಟಡಗಳನ್ನು ಒಂದೇ ದಿನದಲ್ಲಿ ತೆರವುಗೊಳಿಸಿ ಸಹಕಾರ ನೀಡಿದ್ದಾರೆ. ಆದ್ದರಿಂದ ತಿಂಗಳ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಒಂದೆರಡು ದಿನಗಳಲ್ಲಿ ನೀವೇ ತೆರವು ಮಾಡಿಕೊಳ್ಳಿ, ಇಲ್ಲವಾದರೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ” ಎಂದು ಸ್ಪಷ್ಟಪಡಿಸಿದರು.ಆತ್ಮಹತ್ಯೆ ಬೆದರಿಕೆ: ಜಿಲ್ಲಾಧಿಕಾರಿಗಳ ಉತ್ತರ ಕೇಳುತ್ತಿದ್ದಂತೆಯೇ ವಿಚಲಿತರಾದಂತೆ ಕಂಡ ಮುರಿಗೆಪ್ಪ ಶೆಟ್ಟರ್ ಏಕಾಏಕಿ ಮಾತಿನ ಧಾಟಿ ಬದಲಿಸಿ,“ಒಂದು ವೇಳೆ ಕಟ್ಟಡ ತೆರವುಗೊಳಿಸಿದರೆ ನಾನು ಇದೇ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಸಾರ್ವಜನಿಕರ ಎದುರೇ ಬೆದರಿಕೆ ಹಾಕಿದರು. ಅವರ ಈ ಹೇಳಿಕೆಯಿಂದ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಆದರೆ ಜಿಲ್ಲಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕಠಿಣ ಧೋರಣೆ ತಾಳಿದರು.“ಮುಖ್ಯ ರಸ್ತೆಯಲ್ಲಿರುವ ಬಹುತೇಕ ಎಲ್ಲ ವರ್ತಕರು ಯಾವುದೇ ಶರತ್ತು ಇಲ್ಲದೆ ತಮ್ಮ ಆಸ್ತಿಯನ್ನು ತೆರವುಗೊಳಿಸಿ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಅವರಿಗೆ ಒಂದು ನ್ಯಾಯ, ನಿಮಗೆ ಒಂದು ನ್ಯಾಯ ಎಂಬ ಪ್ರಶ್ನೆಯೇ ಇಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿ ಡ್ರಾಮಾ ಸೃಷ್ಟಿ ಮಾಡುವ ಅವಶ್ಯಕತೆ ಇಲ್ಲ, ನಮ್ಮ ಕೆಲಸ ನಮಗೆ ಗೊತ್ತಿದೆ” ಎಂದು ತಿರುಗೇಟು ನೀಡಿದರು.

ಇದಾದ ಬಳಿಕವೂ ಜಿಲ್ಲಾಡಳಿತ ಯಾವುದೇ ವ್ಯತ್ಯಯಕ್ಕೆ ಅವಕಾಶ ನೀಡದೆ ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆಯನ್ನು ಮುಂದುವರಿಸಿತು. ಪೊಲೀಸ್ ಬಂದೋಬಸ್ತ್ ನಡುವೆ ಮುಖ್ಯರಸ್ತೆಯ ಎರಡೂ ಬದಿಯ ಕಟ್ಟಡ ತೆರವು ಕಾರ್ಯ ವೇಗವಾಗಿ ಸಾಗಿದ್ದು, ಪಟ್ಟಣದ ಬಹುಕಾಲದ ಕನಸಾದ ರಸ್ತೆ ಅಗಲೀಕರಣಕ್ಕೆ ಇದೀಗ ಮತ್ತಷ್ಟು ವೇಗ ಸಿಕ್ಕಂತಾಗಿದೆ.

ನಿನ್ನೆವರೆಗೂ ಅಗಲೀಕರಣಕ್ಕೆ ಒಪ್ಪಿಗೆ ಸೂಚಿಸಿ ಇಂದು ಉಲ್ಟಾ ಹೊಡೆಯುವುದು ಸರಿಯಲ್ಲ. 15 ವರ್ಷಗಳಿಂದ ಕೊಟ್ಟ ಮಾತಿಗೆ ತಪ್ಪುವುದೇ ಇವರ ಕೆಲಸವಾಗಿದೆ. ಜಿಲ್ಲಾಧಿಕಾರಿಗಳು ಇವರ ಮೊಸಳೆ ಕಣ್ಣೀರಿಗೆ ಕರಗದೇ ಕಟ್ಟಡ ತೆರವುಗೊಳಿಸಲಿ. ಸಾಮಾನ್ಯ ವ್ಯಾಪಾರಿಗಳು ಒಂದು ದಿನದಲ್ಲೇ ಅಂಗಡಿಗಳನ್ನು ಖಾಲಿ ಮಾಡಿ ಸಹಕಾರ ನೀಡಿದ್ದಾರೆ. ಆದರೆ ಇಂತಹ ಪ್ರಭಾವಿಗಳಿಂದ ಮಾತ್ರ ಬೇರೆ ರೀತಿಯ ಒತ್ತಡ ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ ಹೇಳಿದರು.ಜಿಲ್ಲಾಧಿಕಾರಿಗಳೇ ನಿಯಮಾನುಸಾರ ಕಾರ‍್ಯಾಚರಣೆ ನಡೆಸಿ ಇಂತಹ ಬೆದರಿಕೆ ಡ್ರಾಮಾಗಳು 15 ವರ್ಷದಲ್ಲಿ ಸಾಕಷ್ಟು ನೋಡಿದ್ದೇವೆ. ಎಲ್ಲರಿಗೂ ಒಂದೇ ನ್ಯಾಯ, ತಿಂಗಳುಗಳ ಕಾಲ ಅವಕಾಶ ಸಾಧ್ಯವೆ ಇಲ್ಲ, ನಿಮಗೆ ಆಗದೇ ಇದ್ದರೆ ನಮಗೆ ಬೀಡಿ, ನಾವು ಅವರ ಕಟ್ಟಡ ತೆರವುಗೊಳಿಸುತ್ತೇವೆ ಎಂದು ಹೋರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಹೇಳಿದರು.ನಿಯಮಾನುಸಾರ ತೆರವು ಕಾರ‍್ಯ ಮಾಡಲಾಗುತ್ತಿದೆ. ಇಲ್ಲಿ ಎಲ್ಲರಿಗೂ ಒಂದೇ ನ್ಯಾಯ, ಶೇ.99ರಷ್ಟು ಜನರು ಸಹಕಾರ ನೀಡುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆ, ಆದರೆ ಕೆಲವರು ಇದನ್ನು ಪ್ರತಿಷ್ಠೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ, ಎಷ್ಟು ಬೇಗ ತೆರವು ಕಾರ‍್ಯ ಮುಗಿಯುತ್ತದೆಯೋ ಆದಷ್ಟು ಬೇಗ ಯುಜಿಡಿ, ನೀರು, ರಸ್ತೆ, ವಿದ್ಯುತ್ ಸಂಪರ್ಕ ಕಾರ‍್ಯ ನಡೆಸಲು ಅನುಕೂಲ ಎಲ್ಲರ ಸಹಕಾರ ಇದ್ದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನವಮ್ಮನವರ ಹೇಳಿದರು..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದುಗಿನಲ್ಲಿ ಹಾಲಿಗಿಂತ ಮೊದಲೇ ಇಲ್ಲಿ ಮದ್ಯ ಸಿಗುತ್ತೆ!
ಎರಡು ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮದೇವಿ ದರ್ಶನ