ಹಾವೇರಿ: ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ನಗರದ ಜನತೆ ಹಾಗೂ ಬೇಸಿಗೆ ರಜೆಯ ಮಜಾದಲ್ಲಿರುವ ಮಕ್ಕಳು ಈಜುಗೊಳದತ್ತ ಹೆಜ್ಜೆ ಇಡುತ್ತಿದ್ದಾರೆ.
ಕೆಎಲ್‌ಇ ಶಾಲೆ ಆವರಣದಲ್ಲಿರುವ ಹರ್ಷ ಅಕ್ವಾಟಿಕ್ ಸೆಂಟರ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಈಜುಗೊಳಕ್ಕೆ ಹೆಚ್ಚಿನ ಸಂಖ್ಯೆಯ ಜನರು ಆಗಮಿಸುತ್ತಿದ್ದು, ನಿರ್ವಹಣೆಯೇ ಸವಾಲಾಗಿದೆ. ಹೊಸದಾಗಿ ಈಜು ಕಲಿಯಲು ಬರುವವರಿಗೆ ತರಬೇತಿ ನೀಡಲು ಇಲಾಖೆಯಿಂದ ನುರಿತ ತರಬೇತಿದಾರರನ್ನು ನೇಮಿಸಲಾಗಿದ್ದು, ಬೇಸಿಗೆ ಅವಧಿಯಲ್ಲಿ ಎರಡು ತಿಂಗಳು ತರಬೇತಿ ನೀಡುತ್ತಿದ್ದಾರೆ. ಬೆಳಗ್ಗೆ 7ರಿಂದ 9ಗಂಟೆ ವರೆಗೆ ಮಕ್ಕಳು, ಪುರುಷರಿಗೆ ಹಾಗೂ ಸಂಜೆ 5ರಿಂದ 6ಗಂಟೆಯವರೆಗೆ ಮಹಿಳೆಯರಿಗೆ ತರಬೇತಿ ಅವಧಿಯಾಗಿದೆ. 14 ವರ್ಷದೊಳಗಿನವರಿಗೆ 2,500 ರು. ಹಾಗೂ 14 ವರ್ಷ ಮೇಲ್ಪಟ್ಟವರಿಗೆ 3 ಸಾವಿರ ರು. ಮಾಸಿಕ ಶುಲ್ಕನಿಗದಿಪಡಿಸಿದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿಗೆ ನೋಂದಾಯಿಸಿಕೊಂಡು ತರಬೇತಿ ಪಡೆಯುತ್ತಿದ್ದಾರೆ.
ಈಜುಕೊಳದಲ್ಲಿ ಶೌಚಾಲಯ, ಶವರ್, ಸ್ನಾನಗೃಹ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಸಜ್ಜಿತ ಈಜುಗೊಳದಲ್ಲಿ ಈಜುಪಟುಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಶಾಲೆಗಳಿಗೆ ರಜೆ ಇರುವ ಕಾರಣ ಕಳೆದೊಂದು ತಿಂಗಳಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಹಿತ ಯುವಕರು, ಸಾರ್ವಜನಿಕರು ಬರುತ್ತಿದ್ದಾರೆ. ಈಜುಗೊಳದಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 2ಗಂಟೆಯ ವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ಗಂಟೆ ಯವರೆಗೆ ಸಮಯ ನಿಗದಿಪಡಿಸಲಾಗಿದೆ. ಪ್ರತಿ ಗಂಟೆಗೆ ಹಾಗೂ ತಿಂಗಳಿಗೆ ದರ ನಿಗದಿ ಮಾಡಲಾಗಿದೆ.10 ವರ್ಷದೊಳಗಿನ ಮಕ್ಕಳ ಜತೆಗೆ ಪೋಷಕರು ಹಾಜರಿರುವುದು ಕಡ್ಡಾಯವಿದೆ. ಈಜುಗೊಳ ಆವರಣದಲ್ಲಿ ಮದ್ಯಪಾನ ಹಾಗೂ ಧೂಮಪಾನ ನಿಷೇಧಿಸಲಾಗಿದೆ. ಚರ್ಮರೋಗ, ಅಂಟು ರೋಗ ಹಾಗೂ ಮೂರ್ಛಿ ರೋಗ ಇರುವವರಿಗೆ ಪ್ರವೇಶವಿಲ್ಲ ಎಂದು ಇಲಾಖೆ ಅಧಿಕಾರಿಗಳು ಸೂಚನಾ ಫಲಕ ಅಳವಡಿಸಿದ್ದಾರೆ.ಸ್ವಚ್ಛತೆಗೆ ಆದ್ಯತೆ: ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳವು 8 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ನೀರು ಶುದ್ಧೀಕರಣಕ್ಕಾಗಿ 7.5ಎಚ್‌ಪಿ ಸಾಮರ್ಥ್ಯದ ಎರಡು ಪಂಪ್‌ಗಳನ್ನು ಅಳವಡಿಸಲಾಗಿದೆ. ಆಗಾಗ ನೀರು ಬದಲಿಸುತ್ತೇವೆ. ಪ್ರತಿ ದಿನ ಶುದ್ಧೀಕರಣಕ್ಕಾಗಿ ಕ್ಲೋರಿನ್, ವಾರಕ್ಕೊಮ್ಮೆ ಅಲೋಮ್ ಜೆಲ್ ಬಳಸಲಾಗುತ್ತದೆ. ತ್ಯಾಜ್ಯವನ್ನು ಬ್ಯಾಕ್‌ವಾಶ್‌ನಿಂದ ಸ್ವಚ್ಛಗೊಳಿಸುತ್ತೇವೆ. ಪ್ರತಿ ಸೋಮವಾರ ಈಜುಕೊಳ ಬಂದ್ ಮಾಡಿ ಸ್ವಚ್ಛಗೊಳಿಸುತ್ತೇವೆ ಎಂದು ಈಜುಕೊಳದ ಸಿಬ್ಬಂದಿ ಹೇಳಿದರು.ಹಾವೇರಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಸರ್ಕಾರ, ಜಿಲ್ಲಾಡಳಿತ ಹಾಗೂ ಕ್ರೀಡಾ ಇಲಾಖೆ ಸುಸಜ್ಜಿತ ಈಜುಗೊಳ ನಿರ್ಮಿಸಿ, ಮೂಲ ಸೌಕರ್ಯ ಕಲ್ಪಿಸಿದೆ. ಎಲ್ಲ ವಯೋಮಾನದ ಸಾರ್ವಜನಿಕರು ಕುಟುಂಬ ಸಮೇತ ಈಜುಗೊಳಕ್ಕೆ ಆಗಮಿಸಬೇಕು. ಜಲಕ್ರೀಡೆಯಾಡುವ ಮೂಲಕ ಮನರಂಜನೆ ಪಡೆದುಕೊಳ್ಳಬೇಕು ಎಂದು ಹಾವೇರಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ ಬಿ.ಎಚ್. ಹೇಳಿದರು.