ಆಲ್ಕೋ ಮೀಟರ್‌ ತಿರುಚುವಂತಿಲ್ಲ: ಕೋರ್ಟ್‌ ನಿರ್ದೇಶನ

KannadaprabhaNewsNetwork |  
Published : Aug 29, 2025, 02:00 AM IST

ಸಾರಾಂಶ

ಪೊಲೀಸರು ವಾಹನ ಚಾಲಕರನ್ನು ತಡೆದು ಮದ್ಯಪಾನ ಪರೀಕ್ಷೆ ಮಾಡುವಾಗ ಆಲ್ಕೋ ಮೀಟರ್‌ (ಬ್ರೀತ್‌ ಅನಲೈಸರ್‌) ಅನ್ನು ಯಾವುದೇ ರೀತಿಯಲ್ಲೂ ತಿರುಚಬಾರದು ಎಂದು ಹೈಕೋರ್ಟ್‌ ಮೌಖಿಕವಾಗಿ ಸೂಚಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೊಲೀಸರು ವಾಹನ ಚಾಲಕರನ್ನು ತಡೆದು ಮದ್ಯಪಾನ ಪರೀಕ್ಷೆ ಮಾಡುವಾಗ ಆಲ್ಕೋ ಮೀಟರ್‌ (ಬ್ರೀತ್‌ ಅನಲೈಸರ್‌) ಅನ್ನು ಯಾವುದೇ ರೀತಿಯಲ್ಲೂ ತಿರುಚಬಾರದು ಎಂದು ಹೈಕೋರ್ಟ್‌ ಮೌಖಿಕವಾಗಿ ಸೂಚಿಸಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸದಿದ್ದರೂ ಆಲ್ಕೋ ಮೀಟರ್‌ ಪಾಸಿಟಿವ್‌ ಫಲಿತಾಂಶ ತೋರಿಸಿದ ಕಾರಣಕ್ಕೆ ಡ್ರಿಂಕ್‌ ಆ್ಯಂಡ್‌ ಡ್ರೈವ್‌ ಪ್ರಕರಣದಲ್ಲಿ ತನಗೆ 10 ಸಾವಿರ ರು. ದಂಡ ವಿಧಿಸಲಾಗಿದೆ ಎಂದು ಆರೋಪಿಸಿ ಸಿ.ಅಜಯ್‌ ಕುಮಾರ್‌ ಕಶ್ಯಪ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ ಪ್ರಸಾದ್‌ ಅವರ ಪೀಠ ಮೌಖಿಕವಾಗಿ ಹೇಳಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸಿ ಮೊದಲ ಬಾರಿ ಸಿಕ್ಕಿಬಿದ್ದರೆ 10 ಸಾವಿರ ರು. ದಂಡ ಅಥವಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಬಹುದು. ಎರಡನೇ ಬಾರಿ ಸಿಕ್ಕಿಬಿದ್ದರೆ 15 ಸಾವಿರ ರು. ದಂಡ ವಿಧಿಸಬಹುದಾಗಿದೆ. ಆಲ್ಕೋ ಮೀಟರ್‌ಗಳನ್ನು ತಿರುಚುವ ಸಾಧ್ಯತೆಯಿದೆ. ಈ ಮೂಲಕ ಕುಡಿದು ವಾಹನ ಚಲಾಯಿಸಲಾಗಿದೆ ಎಂಬುದಾಗಿ ಪ್ರಯಾಣಿಕರ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಅರ್ಜಿದಾರರು ಸಮರ್ಥಿಸಿಕೊಳ್ಳಬಹುದು. ಆದರೆ, ಇದು ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಪೀಠ ಹೇಳಿತು.

ಆದ್ದರಿಂದ ಆಲ್ಕೋ ಮೀಟರ್‌ಗಳನ್ನು ತಿರುಚಲು ಸಾಧ್ಯವಿಲ್ಲ. ಅವುಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆಲ್ಕೋ ಮೀಟರ್‌ಗಳು ದೋಷರಹಿತವಾಗಿವೆ ಎಂಬುದನ್ನು ಖಚಿತಪಡಿಸಲು ಯಾವ ಕಾರ್ಯವಿಧಾನ ಜಾರಿ ಮಾಡಲಾಗಿದೆ ಎಂಬ ಬಗ್ಗೆ ಪೊಲೀಸ್‌ ಇಲಾಖೆ ಲಿಖಿತವಾಗಿ ತಿಳಿಸಬೇಕೆಂದು ನ್ಯಾಯಾಲಯ ಬಯಸುತ್ತಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಅಂತಿಮವಾಗಿ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ನಗರದ ಹೈಗ್ರೌಂಡ್ಸ್‌ ಸಂಚಾರ ಠಾಣಾ ಪೊಲೀಸರು ಮತ್ತು ನಗರ ಸಂಚಾರ ವಿಭಾಗದ ಪೊಲೀಸ್‌ ಆಯುಕ್ತರಿಗೆ ನ್ಯಾಯಪೀಠ ನೋಟಿಸ್‌ ಜಾರಿ ಮಾಡಿತು.

ಜೊತೆಗೆ, ಪ್ರಕರಣದ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಪದೇ ಪದೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ ಎಂಬ ಅರ್ಜಿದಾರರು ಆಕ್ಷೇಪವನ್ನು ಪರಿಗಣಿಸಿದ ಪೀಠ, ಅರ್ಜಿದಾರನ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂದು ಪೊಲೀಸರಿಗೆ ಸೂಚಿಸಿ ವಿಚಾರಣೆಯನ್ನು ಸೆ.3ಕ್ಕೆ ಮುಂದೂಡಿದೆ.

ಪ್ರಕರಣದ ವಿವರ:

ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಪ್ರಕರಣ ಸಂಬಂಧ ಹೈಗ್ರೌಂಡ್ಸ್‌ ಸಂಚಾರ ಪೊಲೀಸರು 2025ರ ಮೇ 9ರಂದು ತಮಗೆ ನೀಡಿರುವ ನೋಟಿಸ್‌ ಮತ್ತು 10 ಸಾವಿರ ರು. ದಂಡ ವಿಧಿಸಿರುವ ಕ್ರಮ ರದ್ದುಪಡಿಸಲು ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪೊಲೀಸರು ತನ್ನ ಕಾರನ್ನು ತಡೆದು ಬ್ರೀತ್‌ ಅನಲೈಸರ್‌ ಮುಂದೆ ಎರಡು ಬಾರಿ ಊದಿದರೂ ಆಲ್ಕೋ ಮೀಟರ್‌ ನಕರಾತ್ಮಕ ಫಲಿತಾಂಶ ತೋರಿಸಿತ್ತು. ಮೂರನೇ ಬಾರಿ ಊದಿದಾಗ ಪಾಸಿಟಿವ್‌ ಫಲಿತಾಂಶ ತೋರಿಸಿತ್ತು. ಇದರಿಂದ ಪೊಲೀಸರು ನನಗೆ 10 ಸಾವಿರ ರು. ದಂಡ ವಿಧಿಸಿದರು. ವಾಸ್ತವವಾಗಿ ನಾನು ಮದ್ಯಪಾನ ಮಾಡಿರಲಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ತನ್ನನ್ನು ಪರೀಕ್ಷೆ ಮಾಡುವ ಮುನ್ನ ಆಲ್ಕೋ ಮೀಟರ್‌ ಅನ್ನು ಪೊಲೀಸರು ಸರಿಪಡಿಸಿರಲಿಲ್ಲ. ನಾನು ಮದ್ಯಪಾನ ಮಾಡಿರುವುದಾಗಿ ಹೇಳಿದರು. ಅದನ್ನು ನಾನು ನಿರಾಕರಿಸಿದೆ. ಜೊತೆಗೆ ರಕ್ತ ಪರೀಕ್ಷೆ ನಡೆಸಲು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಪೊಲೀಸರಿಗೆ ಹೇಳಿದೆ. ಆದರೆ, ಪೊಲೀಸರು ರಕ್ತ ಪರೀಕ್ಷೆ ನಡೆಸದೆ ನನಗೆ 10 ಸಾವಿರ ರು. ದಂಡ ವಿಧಿಸಿ, ಕಾರು ಜಪ್ತಿ ಮಾಡಿದರು. ನಂತರ ನಾನು ಖಾಸಗಿ ಡೈಯಗ್ನೋಸ್‌ ಸೆಂಟರ್‌ಗೆ ಹೋಗಿ ರಕ್ತ ಪರೀಕ್ಷೆಗೆ ಒಳಗಾದೆ. ರಕ್ತದಲ್ಲಿ ಮದ್ಯದ ಅಂಶಗಳು ಕಂಡುಬಂದಿಲ್ಲ. ಈ ಕುರಿತು ಪ್ರಮಾಣ ಪತ್ರವಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?