ಬೆಂಗಳೂರು : ರಾಜ್ಯದಲ್ಲಿನ 43 ಸಾವಿರಕ್ಕೂ ಹೆಚ್ಚಿನ ಸಹಕಾರ ಸಂಘಗಳ ಪೈಕಿ 14 ಸಾವಿರಕ್ಕೂ ಹೆಚ್ಚಿನ ಸಂಘಗಳು ಸಾಲ ವಸೂಲಾತಿ ಸೇರಿ ಮತ್ತಿತರ ಕಾರಣಗಳಿಂದಾಗಿ ನಷ್ಟದಲ್ಲಿದ್ದು, ಅವುಗಳನ್ನು ಆರ್ಥಿಕ ಸಬಲಗೊಳಿಸಲು ಸಾಲ ವಸೂಲಾತಿಗೆ ಹೆಚ್ಚಿನ ಒತ್ತು ನೀಡಬೇಕು. ಸಹಕಾರಿ ವ್ಯವಸ್ಥೆ ಗಟ್ಟಿಗೊಳ್ಳುವಂತೆ ಎಲ್ಲ ಕ್ರಮ ಕೈಗೊಳ್ಳಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಸಹಕಾರ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಾಜ್ಯದಲ್ಲಿ 43 ಸಾವಿರಕ್ಕೂ ಹೆಚ್ಚಿನ ಸಹಕಾರ ಸಂಘಗಳ ಪೈಕಿ 14,670 ಸಂಘಗಳು ನಷ್ಟದಲ್ಲಿವೆ. ಅದರಲ್ಲಿ 2,200 ಹಾಲು ಉತ್ಪಾದಕ ಸಂಘಗಳೂ ಸೇರಿವೆ. ಇಷ್ಟು ದೊಡ್ಡ ಪ್ರಮಾಣದ ಸಹಕಾರ ಸಂಘಗಳು ನಷ್ಟದಲ್ಲಿರುವುದು ಸಹನೀಯವಲ್ಲ. ಸಾಲ ವಸೂಲಾತಿ ಸರಿಯಾಗಿ ಆಗದ ಕಾರಣ ಬಹುತೇಕ ಸಂಘಗಳು ನಷ್ಟದಲ್ಲಿವೆ. ಅಂತಹ ಸಂಘಗಳ ಸಾಲ ವಸೂಲಾತಿಗೆ ಕೈಗೊಂಡ ಕ್ರಮಗಳ ಕುರಿತು ಪರಿಶೀಲಿಸಬೇಕು. ಹಾಲು ಉತ್ಪಾದಕ ಸಹಕಾರ ಸಂಘಗಳ ವೆಚ್ಚದ ಮೇಲೆ ನಿಗಾವಹಿಸಿ, ಹಾಲು ಉತ್ಪಾದನೆ ಹೆಚ್ಚಿಸಲು ಸಂಘದ ಕಾರ್ಯದರ್ಶಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಪ್ರಸಕ್ತ ಅವಧಿಯಲ್ಲಿ 37 ಲಕ್ಷ ರೈತರಿಗೆ 28 ಸಾವಿರ ಕೊಟಿ ರು. ಸಾಲ ವಿತರಣೆ ಗುರಿ ಹೊಂದಲಾಗಿದೆ. ಜುಲೈ ಅಂತ್ಯಕ್ಕೆ 8.69 ಲಕ್ಷ ರೈತರಿಗೆ 8,362 ಕೋಟಿ ರು. ಸಾಲ ವಿತರಿಸಲಾಗಿದೆ. ರೈತರಿಗೆ ಸಕಾಲದಲ್ಲಿ ಕೃಷಿ ಸಾಲ ಸಿಗುವುದನ್ನು ಖಾತ್ರಿಪಡಿಸಬೇಕು. ನಬಾರ್ಡ್‌ನಿಂದ ರಿಯಾಯಿತಿ ಬಡ್ಡಿ ದರದ ಸಾಲದ ಮಿತಿಯನ್ನು ಹಿಂದಿನ ಸಾಲಿನಲ್ಲಿ 5,600 ಕೋಟಿ ರು. ನಿಗದಿ ಮಾಡಲಾಗಿತ್ತು. ಈ ಬಾರಿ ಶೇ. 42.21ರಷ್ಟು ಕಡಿಮೆ ಮಾಡಿ 3,236.11 ಕೋಟಿ ರು. ನಿಗದಿ ಮಾಡಿದೆ. ಆದರೂ ಸಾಲ ವಿತರಣೆಯಲ್ಲಿ ಶೇ. 96.07ರಷ್ಟು ಪ್ರಗತಿ ಸಾಧಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಖಾಲಿ ಇರುವ ಸಹಕಾರ ಸಂಘಗಳ ಹಿರಿಯ ನಿರೀಕ್ಷಕರ 126 ಹುದ್ದೆ ಹಾಗೂ ಸಹಕಾರ ಸಂಘಗಳ ನಿರೀಕ್ಷಕರ 403 ಹುದ್ದೆಗಳ ಭರ್ತಿಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ಸಹಕಾರ ಸಂಘಗಳ ನಿಬಂಧಕರ ಕಚೇರಿ ವ್ಯಾಪ್ತಿಯ ಸೇವೆಗಳನ್ನು ಗಣಕೀಕರಿಸುವ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ 7,074 ಗಿರವಿದಾರ ಸಂಸ್ಥೆಗಳು ಹಾಗೂ 1,468 ಚೀಟಿ ಸಂಸ್ಥೆಗಳು ನೋಂದಣಿಯಾಗಿವೆ. ಅವುಗಳನ್ನು ಹೊರತುಪಡಿಸಿ ನೊಂದಾಯಿಸಿಕೊಳ್ಳದೆ ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿರುವ ಗಿರಿವಿದಾರ ಸಂಸ್ಥೆ ಮತ್ತು ಚೀಟಿ ಸಂಸ್ಥೆಗಳ ಮೇಲೆ ಹೆಚ್ಚಿನ ನಿಗಾವಹಿಸುವಂತೆ ತಿಳಿಸಿದರು.
ಕಸಾಪ ವಿರುದ್ಧ ಕ್ರಮಕ್ಕೆ ಸೂಚನೆ
ಕನ್ನಡ ಸಾಹಿತ್ಯ ಪರಿಷತ್ತಿನ ಅವ್ಯವಹಾರಗಳ ಕುರಿತು ಡಿಆರ್‌ಸಿಎಸ್ ತನಿಖೆ ನಡೆಸುತ್ತಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಕೆಲ ಸದಸ್ಯರ ಸದಸ್ಯತ್ವವನ್ನು ಪರಿಷತ್‌ನಿಂದ ರದ್ದು ಮಾಡುತ್ತಿರುವ ಕುರಿತು ದೂರು ಬಂದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಕುರಿತು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅಜುಂ ಪರ್ವೇಜ್, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಇತರರಿದ್ದರು.