ಧಾರವಾಡ: ಸುಮಾರು 132 ವರ್ಷ ಪೂರೈಸಿರುವ ಇಲ್ಲಿಯ ಮರಾಠಾ ವಿದ್ಯಾಪ್ರಸಾರಕ ಮಂಡಳದ ವೆಬ್‌ಸೈಟ್ ಉದ್ಘಾಟನೆ, ಆಡಳಿತ ಕಚೇರಿ ಹಾಗೂ ವಿಜ್ಞಾನ ಪದವಿಪೂರ್ವ ಕಾಲೇಜು ಕಟ್ಟಡದ ಶಂಕುಸ್ಥಾಪನೆ ಆ. 30ರ ಶನಿವಾರ ಬೆಳಗ್ಗೆ 11ಕ್ಕೆ ಹಮ್ಮಿಕೊಂಡಿರುವುದಾಗಿ ಮಂಡಳದ ಅಧ್ಯಕ್ಷ ಎಂ.ಎನ್. ಮೋರೆ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಶಂಕುಸ್ಥಾಪನೆ ನೆರವೇರಿಸಲಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಪ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸ್ಥಳೀಯ ಶಾಸಕರುಗಳು, ಜಿಲ್ಲಾಧಿಕಾರಿ ದಿವ್ಯ ಪ್ರಭು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಾನು ಅಧ್ಯಕ್ಷತೆ ವಹಿಸಲಿದ್ದೇನೆ. ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ, ಸದಸ್ಯರಾದ ಮಯೂರ ಮೋರೆ, ಶಂಕರ ಶೇಳಕೆ ಹಾಗೂ ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ. ಸರಜೂ ಕಾಟ್ಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.ಮಂಡಳದ ಕಾರ್ಯಾಧ್ಯಕ್ಷ ಸುಭಾಸ ಶಿಂಧೆ ಮಾತನಾಡಿ, ಶತಮಾನದ ಇತಿಹಾಸ ಹೊಂದಿದ್ದರೂ ಇಷ್ಟು ವರ್ಷಗಳ ಕಾಲ ಅಭಿವೃದ್ಧಿ ಹೊಂದಿರಲಿಲ್ಲ. ಎಂ.ಎನ್. ಮೋರೆ ನೇತೃತ್ವದಲ್ಲಿ ಆಡಳಿತ ಮಂಡಳಿಯು ಅಭಿವೃದ್ಧಿಯ ಪರ್ವ ಶುರು ಮಾಡಿದೆ. ಅಂಬರೈ ಹೋಟೆಲ್ ಹಿಂಬದಿ ಸಂಸ್ಥೆಗೆ ಸರ್ಕಾರದಿಂದ ಕಡಿಮೆ ವೆಚ್ಚದಲ್ಲಿ 14 ಗುಂಟೆ ಜಾಗ ಖರೀದಿಸಿದ್ದು, ಅಲ್ಲಿ ವಸತಿ ನಿಲಯದ ಯೋಜನೆ ರೂಪಿಸಿದೆ. ಸುಸಜ್ಜಿತ ಗ್ರಂಥಾಲಯ ನಿರ್ಮಾಣ, ಶಾಹು ಮಹಾರಾಜ ವೇದಿಕೆ ಹಾಗೂ ಧ್ವಜಸ್ತಂಭ ನಿರ್ಮಿಸಲಾಗಿದೆ. ಸಮಾಜ ಬಾಂಧವರ ವಿಧಿವಶರಾದಾಗ ಶವ ವಾಹನದ ವ್ಯವಸ್ಥೆ ಮಾಡಿದೆ. ತುಳಜಾ ಭವಾನಿ ದೇವಸ್ಥಾನ ಜೀರ್ಣೋದ್ಧಾರ ಮತ್ತು ಮುಖ್ಯದ್ವಾರದ ನಿರ್ಮಾಣ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ನೂತನವಾಗಿ ಶೌಚಾಲಯ ನಿರ್ಮಿಸಿದೆ ಎಂದರು.
ಧರ್ಮವೀರ ಶ್ರೀ ಛತ್ರಪತಿ ಸಂಭಾಜೀರಾಜೇ ಸಭಾಂಗಣ, ಕಳೆದ ವರ್ಷ ಸ್ನಾತಕೋತ್ತರ ಇತಿಹಾಸ (ಎಂಎ) ವಿಭಾಗ ಆರಂಭಿಸಿದೆ. ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ವ್ಯಾಸಂಗ ಮಾಡುವ ಮರಾಠ ಸಮಾಜದ ಮಕ್ಕಳಿಗೆ ಶೇ. 50ರಷ್ಟು ರಿಯಾಯ್ತಿ ಶಿಕ್ಷಣ ನೀಡಿದ್ದು, ಕಳೆದ ಎಸ್ಸೆಸ್ಸೆಲ್ಸಿಯಲ್ಲಿ ಶೇ. 95ರಷ್ಟು ಫಲಿತಾಂಶ ದಾಖಲಿಸಿದೆ. ಸಂಸ್ಥೆಯಲ್ಲಿ ಎರಡೂವರೆ ಸಾವಿರ ಮಕ್ಕಳು ಕಲಿಯುತ್ತಿದ್ದು, ಮರಾಠಾ ವಧು-ವರರ ಮಾಹಿತಿ ಕೇಂದ್ರ ಸಹ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಂಡಳದ ಉಪಾಧ್ಯಕ್ಷ ಯಲ್ಲಪ್ಪ ಚವ್ಹಾಣ, ಕಾರ್ಯದರ್ಶಿ ರಾಜು ಬಿರಜೆನವರ, ಸಹ ಕಾರ್ಯದರ್ಶಿ ಮಲ್ಲೇಶಪ್ಪ ಶಿಂಧೆ, ನಿರ್ದೇಶಕ ಈಶ್ವರ ಪಾಟೀಲ, ಶಿವಾಜಿ ಸೂರ್ಯವಂಶಿ, ಸುಭಾಷ ಪವಾರ, ಗಣೇಶ ಕದಂ, ದತ್ತಾತ್ರೇಯ ಮೋಟೆ, ಅನಿಲ ಭೋಸಲೆ, ಮಹೇಶ ಶಿಂಧೆ, ಪುರುಷೋತ್ತಮ ಜಾಧವ, ರಾಜು ಕಾಳೆ, ಸುನೀಲ ಮೋರೆ, ಪ್ರಸಾದ ಹಂಗಳಕಿ ಇದ್ದರು.