ಕುಮಟಾ: ನೂರಾರು ಸಂಖ್ಯೆಯಲ್ಲಿ ಭಾರತೀಯ ಗೋತಳಿಗಳ ಸಂರಕ್ಷಣೆ, ಅನಾಥ, ಅಪಘಾತಕ್ಕೀಡಾದ, ಕಸಾಯಿಖಾನೆ ಸೇರಲಿದ್ದ ಗೋವುಗಳನ್ನು ಕಾಪಾಡುತ್ತಿರುವ ತಾಲೂಕಿನ ಮೂರೂರಿನ ಹೊಸಾಡಿನಲ್ಲಿರುವ ಅಮೃತಧಾರಾ ಗೋ ಶಾಲೆ ಆವಾರದಲ್ಲಿ ಫೆ.೨೭ರಿಂದ ಮಾ.೨ರವರೆಗೆ ಗೋಸಂಧ್ಯಾ, ಆಲೆಮನೆ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಗೋಶಾಲೆಯ ಕಾಮಧೇನು ಮಂದಿರದ ಸುಂದರ ಪರಿಸರದಲ್ಲಿ ಎರಡು ಕಬ್ಬಿನ ಗಾಣಗಳ ನಡುವೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ೪ರಿಂದ ಆಲೆಮನೆ ಶುರುವಾದರೆ ೫ ರ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಪ್ರತಿಯೊಂದು ದಿನವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದು, ಫೆ.೨೭ಕ್ಕೆ ಗೋಪ್ರೇಮಿ ಮಾತೆಯರ ದಿನ, ೨೮ಕ್ಕೆ ಗೋಪ್ರೇಮಿ ಮಕ್ಕಳ ದಿನ, ಮಾ.೧ಕ್ಕೆ ಭಾರತೀಯ ಗೋ ಬ್ಯಾಂಕ್ ವಾಟ್ಸ್‌ಆ್ಯಪ್ ಬಳಗದ ದಿನ, ೨ಕ್ಕೆ ಗೋಪ್ರೇಮಿ ಹಿರಿಯ ನಾಗರಿಕರ ದಿನವಾಗಿ ಆಚರಿಸಲಾಗುವುದು.ಗೋಗ್ರಾಸ ಸೇವೆ, ಗವ್ಯೋತ್ಪನ್ನ ಮಾರಾಟ, ಗೋ ಸಂತರ್ಪಣೆ, ವಾರ್ಷಿಕ ಸಭೆ, ಗೋಸಂಧ್ಯಾ, ಗೋಪಾಲ ಗೌರವ, ದೇಶೀ ಗೋತಳಿ ವೈಭವ, ಗೋಪೂಜೆ, ಗೋದಾನ, ಪ್ರತಿದಿನ ಕಾಮಧೇನು ಯಾಗ, ಗೋ ಆರತಿ ಇರಲಿದೆ. ಮಳಿಗೆಗಳಲ್ಲಿ ಕೃಷಿ ಉಪಕರಣಗಳು, ಗವ್ಯೋತ್ಪನ್ನಗಳು, ಕರಕುಶಲ ವಸ್ತುಗಳು, ಕಬ್ಬಿನ ಹಾಲು ಮತ್ತು ಅದರಿಂದ ತಯಾರಿಸಿದ ತರಾವರಿ ತಿಂಡಿಗಳು ಸಿಗಲಿದೆ.
ಗೋ ಸಂಧ್ಯಾ ಕಾರ್ಯಕ್ರಮ:ಮಾ.೧ರಂದು ಗೋ ಸಂಧ್ಯಾ ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ, ಎಸ್ಪಿ ಎಂ.ನಾರಾಯಣ, ಡಿಎಫ್‌ಒ ಯೋಗೀಶ್ ಸಿ.ಕೆ., ಮೈಸೂರು ಡೆವಲಪ್‌ಮೆಂಟ್ ಸೆಂಟರ್ ನ ಪ್ರಮುಖ ವಿನಾಯಕ ಪಿ. ಹೆಗಡೆ, ನಿವೃತ್ತ ವಿಜ್ಞಾನಿ ಪ್ರಭಾಕರ ಜೆ. ಭಟ್ಟ, ಜಿಪಂ ಮಾಜಿ ಸದಸ್ಯ ಪ್ರದೀಪ ನಾಯಕ ಪಾಲ್ಗೊಳ್ಳಲಿದ್ದಾರೆ.
ಗೋಶಾಲೆಯ ನಿರ್ವಹಣೆಗೆ ಯಾವುದೇ ನಿರ್ದಿಷ್ಟ ಆದಾಯವಿಲ್ಲದೇ ಇರುವುದರಿಂದ ಕಾರ್ಯಕ್ರಮದ ಸಂಪೂರ್ಣ ಆದಾಯವನ್ನು ಗೋಶಾಲೆಯ ನಿರ್ವಹಣೆಗೆ ವಿನಿಯೋಗಿಸಲಾಗುವುದು. ಆರೋಗ್ಯದಲ್ಲಿ ಗವ್ಯೋತ್ಪನ್ನಗಳ ಮಹತ್ವವನ್ನು ಜಾಗೃತಿ ಮೂಡಿಸುವ ಉದ್ದೇಶವೂ ಅಡಕವಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಿಶೇಷ ಪಂಚಗವ್ಯ ಚಿಕಿತ್ಸೆ ಶಿಬಿರ:
ಮಾ.೨ರಂದು ಬೆಳಿಗ್ಗೆ ೯ರಿಂದ ಪಂಚಗವ್ಯ ಚಿಕಿತ್ಸೆಯ ಮೂಲಕ ನೂರಾರು ಕ್ಯಾನ್ಸರ್ ಪೀಡಿತರನ್ನು ಗುಣಪಡಿಸಿದ ಖ್ಯಾತಿಯ ಆಯುರ್ವೇದ ಸಂಶೋಧಕ ಡಾ. ಡಿ.ಪಿ. ರಮೇಶ್ ಅವರಿಂದ ವಿಶೇಷ ಪಂಚಗವ್ಯ ಚಿಕಿತ್ಸಾ ಶಿಬಿರ ಮತ್ತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.