ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸರ್ವ ಸಮುದಾಯವರ ವಿರೋಧ

KannadaprabhaNewsNetwork | Published : Mar 3, 2025 1:46 AM

ಸಾರಾಂಶ

ಕರಾವಳಿಯ ಕಡಲ ತೀರಗಳಲ್ಲಿ ಹಲವಾರು ಯೋಜನೆಗಳು ಬಂದಿದ್ದು ಕೇಣಿ ವಾಣಿಜ್ಯ ಬಂದರು ವಿಷಯದಲ್ಲಿ ಸ್ಥಳೀಯರಿಗೆ ಸದಾ ಬೆಂಬಲವಿದೆ

ಅಂಕೋಲಾ: ತಾಲೂಕಿನ ಭಾವಿಕೇರಿ ಗ್ರಾಪಂ ವ್ಯಾಪ್ತಿಯ ಕೇಣಿಯಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಕಾನೂನಾತ್ಮಕ ಹೋರಾಟ ನಡೆಸಲು ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯಿಂದ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ನಡೆದ ಆಪ್ತ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಾಸಕ ಸತೀಶ ಸೈಲ್ ಮಾತನಾಡಿ, ಸರ್ವ ಸಮುದಾಯದವರು ಪಕ್ಷಾತೀತವಾಗಿ ಹೋರಾಟ ಸಮಿತಿ ರಚಿಸಿ ವಾಣಿಜ್ಯ ಬಂದರು ನಿರ್ಮಾಣದ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಮುಂದಿನ ಹೋರಾಟ ಕೈಗೊಳ್ಳಬೇಕು. ಜಿಲ್ಲೆಯ ಕರಾವಳಿಯ ಕಡಲ ತೀರಗಳಲ್ಲಿ ಹಲವಾರು ಯೋಜನೆಗಳು ಬಂದಿದ್ದು ಕೇಣಿ ವಾಣಿಜ್ಯ ಬಂದರು ವಿಷಯದಲ್ಲಿ ಸ್ಥಳೀಯರಿಗೆ ಸದಾ ಬೆಂಬಲವಿದೆ ಎಂದರು.

ವಿಪ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ವಾಣಿಜ್ಯ ಬಂದರು ಯೋಜನೆಯಲ್ಲಿ ಯಾವುದೇ ಮುನ್ಸೂಚನೆ ನೀಡದೇ ಬಂದರು ಇಲಾಖೆಯವರು ತನ್ನ ಸರ್ವೇ ಕಾರ್ಯ ಪ್ರಾರಂಭಿಸಿದೆ ಜಿಲ್ಲಾಡಳಿತಕ್ಕೆ ಸ್ಪಷ್ಟತೆ ಇಲ್ಲ ಜನ ಬಲದಿಂದ ಎಲ್ಲ ಸಾಧ್ಯ ಸರ್ವೆ ಕಾರ್ಯ ನಿಲ್ಲಿಸಿ ಯೋಜನೆಯನ್ನು ಕೈಬಿಡಿ ಪೊಲೀಸ್ ಶಕ್ತಿ ಪ್ರದರ್ಶನದಂತೆ ಮೀನುಗಾರರ ಶಕ್ತಿ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಡಬೇಡಿ ಎಂದರು.

ಮೀನುಗಾರರ ಮುಖಂಡ ಗಣಪತಿ ಮಾಂಗ್ರೆ ಮಾತನಾಡಿ, ಜಿಲ್ಲೆಯಾದ್ಯಂತ ಮೀನುಗಾರರು ಕಡಲ ತೀರಗಳನ್ನು ಕಳೆದುಕೊಂಡು ನಿರಾಶ್ರಿತರಾಗುತ್ತಿದ್ದಾರೆ. ವಿವಿಧ ಯೋಜನೆಗಳ ಹೆಸರಿನಲ್ಲಿ ಸಮುದ್ರ ತೀರಗಳು ಕಳೆದು ಹೋಗುತ್ತಿದ್ದು ವಾಣಿಜ್ಯ ಬಂದರು ನಿರ್ಮಾಣವಾದರೆ ಅಲ್ಲಿ ಸ್ಥಳೀಯರಿಗೆ ಮತ್ತು ಮೀನುಗಾರರಿಗೆ ನಿಷೇಧ ಹೇರಲಾಗುತ್ತದೆ. ಮುಖ್ಯ ಮಂತ್ರಿಗಳ ಬಳಿ ನಿಯೋಗ ತೆರಳಿ ಕೇಣಿ ಬಂದರನ್ನು ಕೈ ಬಿಡುವಂತೆ ಒತ್ತಾಯಿಸುವ ಕೆಲಸ ಆಗಬೇಕು ಎಂದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮಾತನಾಡಿ, ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣವಾದರೆ ಮೀನುಗಾರರು ಮಾತ್ರವಲ್ಲದೆ ಸುತ್ತಮುತ್ತಲಿನ ಎಲ್ಲ ಸಮುದಾಯದ ಜನರು ತಮ್ಮ ಜಮೀನನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವ ಸಂಭವ ಇದೆ. ಎಲ್ಲರೂ ಒಗ್ಗಟ್ಟಾಗಿ ಬಂದರು ನಿರ್ಮಾಣವಾಗದಂತೆ ಹೋರಾಟ ಮಾಡಬೇಕು ಎಂದರು.

ಜಿಲ್ಲಾ ಬಿಜೆಪಿ ಮೋರ್ಚಾ ಅಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿ, ಅಧಿಕಾರಿಗಳು ಬಡ ಮೀನುಗಾರರ ಮೇಲೆ ಅಧಿಕಾರ ಪ್ರಯೋಗಿಸಿ ದಬ್ಬಾಳಿಕೆ ಮಾಡುತ್ತಿರುವುದು ಸರಿಯಲ್ಲ. ಮುಂದಿನ ಮೀನುಗಾರ, ಎಲ್ಲ ಸಮುದಾಯದವರ ಒಳಿತಿಗಾಗಿ ಕೆಣಿ ಸಮುದ್ರದಿಂದ ಕಾರವಾರದವರೆಗೆ ಪಾದ ಯಾತ್ರೆ ಮಾಡುವ ಮುಖಾಂತರ ವಾಣಿಜ್ಯ ಬಂದರು ಕಾಮಗಾರಿ ನಿಲ್ಲಿಸುವ ಕೆಲಸ ಮಾಡಲಾಗುವುದು ಎಂದರು,

ಮೀನುಗಾರ ಮುಖಂಡ ಶ್ರೀಕಾಂತ ದುರ್ಗೇಕರ, ಪುರಸಭೆಯ ಮಾಜಿ ಅಧ್ಯಕ್ಷ ಭಾಸ್ಕರ ನಾರ್ವೇಕರ್, ಡಾ. ವಿ.ಎಂ. ನಾಯಕ, ಉದಯ ನಾಯಕ, ಸುಜಾತ ಗಾಂವಕರ, ಮಹೇಶ್ ಗೌಡ, ಮಂಜರ್ ಸೈಯದ್, ದೀಪಾ ನಾಯಕ, ವೆಂಕಟೇಶ ತಾಂಡೇಲ್, ಹೂವಾ ಖಂಡೆಕರ್, ಸಂಜು ಬಲೆಗಾರ, ತೋಕು ಹರಿಕಂತ್ರ, ಮಂಜುನಾಥ್ ಮುದ್ಗೆಕರ್, ಚೇತನ್ ಹರಿಕಂತ್ರ, ರಾಜು ಹರಿಕಂತ್ರ, ಚಂದ್ರಕಾಂತ್ ಹರಿಕಂತ್ರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮೀನುಗಾರರು ಮತ್ತು ಇತರ ಸಮುದಾಯಗಳ ಜನರು ಸಮಾಲೋಚನಾ ಸಭೆಯಲ್ಲಿ ಉಪಸ್ಥಿತರದ್ದರು.

Share this article