ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ತಾಲೂಕು ಕಚೇರಿ ಸಮೀಪ ಶನಿವಾರ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಎನ್.ಆರ್.ಪುರ ಹಾಗೂ ಕೊಪ್ಪ ಕಚೇರಿಗಳನ್ನು ಉದ್ಘಾಟಿಸಿದ ನಂತರ ಎಲ್.ಎಫ್.ಚರ್ಚ್ ಸಮುದಾಯಭವನದಲ್ಲಿ ನಡೆದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ರೈತರ ಸಮಸ್ಯೆಗಳಿಗೆ ಹಲವಾರು ಸಂಘ, ಸಂಸ್ಥೆಗಳು, ರೈತ ಸಂಘಗಳು ಹೋರಾಟ ಮಾಡುತ್ತಿದ್ದು ರೈತ ಒಕ್ಕೂಟ ಅವುಗಳಿಗೆ ಬೆಂಬಲವಾಗಿ ನಿಲ್ಲಲಿದೆ. ಈ ನಿಟ್ಟಿನಲ್ಲಿ ಒಕ್ಕೂಟ ಕಾನೂನು ಸಲಹೆ ಜತೆಗೆ ಸಹಾಯ ಮಾಡಲಿದೆ ಎಂದರು.
ಅರಣ್ಯ ಒತ್ತುವರಿ, ರೈತರ ಜಮೀನಿಗೆ ಹಕ್ಕುಪತ್ರಕೊಟ್ಟಿದ್ದರೂ ಪಕ್ಕಾ ಪೋಡಿಯಾಗದ ಸಮಸ್ಯೆ ಬಗ್ಗೆ ಹೋರಾಟ ರೂಪಿಸ ಲಾಗುವುದು. ರೈತರು ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ.ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ರಸ್ತೆ ಮತ್ತು ಸಾರಿಗೆ ಸಮಸ್ಯೆಯಿದ್ದು ತಾಲೂಕು ಮಟ್ಟದಲ್ಲಿಯೇ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು. ಕಾಡುಪ್ರಾಣಿಗಳ ಹಾವಳಿ, ಅತಿವೃಷ್ಟಿ, ಅನಾವೃಷ್ಟಿ, ಹವಾಮಾನ ವೈಪರಿತ್ಯದಿಂದ ಬೆಳೆಹಾನಿ, ಕ್ಷೇತ್ರದ ವ್ಯಾಪ್ತಿಯಲ್ಲಿ ನದಿಗಳು, ಹಳ್ಳಗಳು ತುಂಬಿ ಹರಿದರೂ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಇಲ್ಲದಾಗಿದೆ. ಭದ್ರಾ ಸಂತ್ರಸ್ತರಿಗೆ ಈವರೆಗೂ ಸೂಕ್ತ ಪರಿಹಾರ ಲಭಿಸಿಲ್ಲ. ಭದ್ರಾ ಅಣೆಕಟ್ಟು ನಿರ್ಮಿಸಲು ಜಮೀನು ತ್ಯಾಗ ಮಾಡಿದ ತಾಲೂಕಿನ ಜನರಿಗೆ ನೀರಾವರಿ ಸೌಲಭ್ಯವಿಲ್ಲ. ಚೆಕ್ ಡ್ಯಾಂ ನಿರ್ಮಿಸಿ ಏತನೀರಾವರಿ ಒದಗಿಸಲು ಮನವಿ ಸಲ್ಲಿಸಲಾಗುವುದು ಎಂದರು.ಅರಣ್ಯ ಕಾಯ್ದೆ ಅನ್ವಯ ರೈತರ ಮೇಲೆ ದಾಖಲಾದ ದೂರುಗಳ ಬಗ್ಗೆ, ರೈತರ ಜಮೀನಿನ ದಾಖಲೆ ಕಳೆದುಹೋಗಿರುವ ಬಗ್ಗೆ, ಮೀಸಲು ಅರಣ್ಯ, ಡಿಮ್ಡ್ ಫಾರೆಸ್ಟ್ ಸಮಸ್ಯೆ, ಸೆಕ್ಷನ್ 4 ಬಗ್ಗೆ ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಿ ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.
ಕ್ಷೇತ್ರದ ರೈತರ ಸಮಸ್ಯೆಗಳಿಗೆ ಕಾನೂನು ಹೋರಾಟ ಮಾಡಲು ಒಕ್ಕೂಟದಿಂದ ವಕೀಲರ ನೇಮಿಸಿ ವಕೀಲರಿಗೆ ತಗಲುವ ವೆಚ್ಚವನ್ನು ಒಕ್ಕೂಟವೇ ಭರಿಸಲಿದೆ. ರೈತರು ಸೂಕ್ತದಾಖಲೆ ನೀಡಬೇಕು. ಅವರ ಸಮಸ್ಯೆ ಬಗೆಹರಿಸಲು ಹೈಕೋರ್ಟ್, ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿ ಹಾಗೂ ಹಸಿರು ಪೀಠದಲ್ಲೂ ವಾದ ಮಂಡಿಸಲಾವುದು.ಶೃಂಗೇರಿ ರೈತ ಒಕ್ಕೂಟದ ಗೌರವಾಧ್ಯಕ್ಷ ಎಸ್.ಎನ್.ರಾಮಸ್ವಾಮಿ ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ ರೈತ ಸಂಘಗಳು ಸಮಸ್ಯೆ ಬಗೆಹರಿಸಲು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿವೆ. ಆದರೂ ಪರಿಹಾರ ಸಿಗುತ್ತಿಲ್ಲ ಎಂದರು.
ಅಳೇಹಳ್ಳಿಯ ಹೆನ್ನಂಗಿ ಹಿರಿಯ ರೈತ ರಾಯಪ್ಪಣ್ಣ ಚಾಲನೆ ನೀಡಿದರು. ಶೃಂಗೇರಿ ರೈತ ಒಕ್ಕೂಟ ಸಮಿತಿ, ವಿವಿಧ ತಾಲೂಕು ಹಾಗೂ ಹೋಬಳಿ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ರೈತ ಒಕ್ಕೂಟದ ವೆಬ್ ಸೈಟನ್ನು ಹಿರಿಯ ರೈತ ಎಲ್.ಎಂ.ಸತೀಶ್ ಉದ್ಘಾಟಿಸಿದರು.ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಾರ್ಯಾಧ್ಯಕ್ಷ ಎಂ.ಎನ್.ನಾಗೇಶ್, ವಕೀಲ ಕೆ.ಪಿ.ಸುರೇಶ್ ಕುಮಾರ್, ಎಸ್.ಎಸ್. ಶಾಂತಕುಮಾರ್ ,ಶಿಲ್ಪರವಿ, ಭಾಗ್ಯಶ್ರೀ ಗದ್ದೆಮನೆ, ಅಶ್ವಿನಿ ಸಾರಗೋಡು, ರಾಘವೇಂದ್ರ ಹಂಚಿನಮನೆ, ಪ್ರಣಿತಾ ಇದ್ದರು.