ನಾಲ್ಕೂ ವಿಪ ಸದಸ್ಯ ಸ್ಥಾನ ವೀರಶೈವ ಲಿಂಗಾಯತಕ್ಕೆ ಕೊಡಿ

KannadaprabhaNewsNetwork | Published : Jan 29, 2025 1:34 AM

ಸಾರಾಂಶ

2025ರ ವಿಧಾನ ಪರಿಷತ್ತು ಚುನಾವಣೆಗೆ 4 ಸ್ಥಾನಗಳು ಖಾಲಿ ಇವೆ. ಆ ಸ್ಥಾನಗಳಿಗೆ ವೀರಶೈವ ಲಿಂಗಾಯತ ಮುಖಂಡರನ್ನು ಕಾಂಗ್ರೆಸ್ ವರಿಷ್ಠರು ಪರಿಗಣಿಸಿ, ಅವಕಾಶ ನೀಡುವಂತೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ವಿ. ಅಶೋಕ ಗೋಪನಾಳ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ಸಿಎಂ, ಡಿಸಿಎಂ, ಅಭಾವೀಮ ಅಧ್ಯಕ್ಷರು ಮನವಿಗೆ ಸ್ಪಂದಿಸಲು ಅಶೋಕ ಗೋಪನಾಳ್ ಆಗ್ರಹ - ಸ್ವಉದ್ಯೋಗ, ಕೈಗಾರಿಕೆ ಸ್ಥಾಪನೆ, ಕೊಳವೆಬಾವಿ ಇನ್ನಿತರ ಸೌಲಭ್ಯಗಳಿಂದ ಸಮಾಜ ವಂಚಿತ- - - ಕನ್ನಡಪ್ರಭ ವಾರ್ತೆ ದಾವಣಗೆರೆ

2025ರ ವಿಧಾನ ಪರಿಷತ್ತು ಚುನಾವಣೆಗೆ 4 ಸ್ಥಾನಗಳು ಖಾಲಿ ಇವೆ. ಆ ಸ್ಥಾನಗಳಿಗೆ ವೀರಶೈವ ಲಿಂಗಾಯತ ಮುಖಂಡರನ್ನು ಕಾಂಗ್ರೆಸ್ ವರಿಷ್ಠರು ಪರಿಗಣಿಸಿ, ಅವಕಾಶ ನೀಡುವಂತೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ವಿ. ಅಶೋಕ ಗೋಪನಾಳ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು ₹1 ಕೋಟಿಗೂ ಅಧಿಕ ಜನಸಂಖ್ಯೆಯ ವೀರಶೈವ ಲಿಂಗಾಯತ ಸಮಾಜವು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಿಕೊಂಡೇ ಬಂದಿದೆ. ಆದರೂ, ಸಮಾಜದ ಮುಖಂಡರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ, ಅವಕಾಶ ನೀಡದೇ ಕಡೆಗಣಿಸಲಾಗಿದೆ ಎಂದರು.

ಕಾಂಗ್ರೆಸ್ ಬಲವರ್ಧನೆಗೆ ವೀರಶೈವ ಲಿಂಗಾಯತ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕಳೆದ ವಿಧಾನ ಪರಿಷತ್ತು ಚುನಾವಣೆಯಲ್ಲಿ ಸಮಾಜಕ್ಕೆ ಯಾವುದೇ ಅವಕಾಶ ಕಲ್ಪಿಸದಿರುವುದು ದುರದೃಷ್ಟಕರ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಜನಸಂಖ್ಯೆ ಆಧಾರಿತವಾಗಿ ಅನುದಾನ ನೀಡಿಲ್ಲ. ಹಾಗಾಗಿ, ಸ್ವಉದ್ಯೋಗ, ಕೈಗಾರಿಕೆ ಸ್ಥಾಪನೆ, ಕೊಳವೆಬಾವಿ ಸೇರಿದಂತೆ ಸೌಲಭ್ಯಗಳಿಂದ ಸಮಾಜ ವಂಚಿತವಾಗುತ್ತಿದೆ ಎಂದು ದೂರಿದರು.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಪ್ರತಿ ವರ್ಷ ಕನಿಷ್ಠ ₹1 ಸಾವಿರ ಕೋಟಿ ಅನುದಾನ ನೀಡಬೇಕು. ಈ ಮೂಲಕ ಸಮಾಜವನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು. 2025ರ ವಿಧಾನ ಪರಿಷತ್ತು ಚುನಾವಣೆಗೆ 4 ಸ್ಥಾನಗಳು ಖಾಲಿ ಇವೆ. ಆ ಸ್ಥಾನಗಳಿಗೆ ವೀರಶೈವ ಲಿಂಗಾಯತ ಮುಖಂಡರನ್ನು ಕಾಂಗ್ರೆಸ್ ವರಿಷ್ಠರು ಪರಿಗಣಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿನಯ ಕುಲಕರ್ಣಿ ಅವರಿಗೆ ಮನವಿ ಅರ್ಪಿಸಲಾಗುವುದು ಎಂದು ತಿಳಿಸಿದರು.

ಸಮಾಜದ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಲಕ್ಷ್ಮೀ ಹೆಬ್ಬಾಳ್ಕರ್, ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಈಶ್ವರ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ಶರಣಪ್ರಕಾಶ ಪಾಟೀಲ ಹಾಗೂ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಬಳಿಯೂ ಸಮಾಜದ ಪರವಾಗಿ ಒತ್ತಾಯಿಸುತ್ತೇವೆ ಎಂದು ಅಶೋಕ ಗೋಪನಾಳ್ ಹೇಳಿದರು.

ಸಮಾಜದ ಮುಖಂಡರಾದ ಅಭಿ ಕಾಟನ್ಸ್‌ ಮಾಲೀಕ ಎನ್.ಬಕ್ಕೇಶ ನ್ಯಾಮತಿ, ನಾಗರಾಜ ಸುಲ್ತಾನಿಪುರ, ಡೋಲಿ ಚಂದ್ರು, ಶಂಕರ, ನವೀನ ಹಾಸಬಾವಿ, ಮಹಾಂತೇಶ ಕರಡಗಿ, ಎಪಿಎಂಸಿ ಶಂಕರಣ್ಣ ಹಿರೇಮೇಗಳಗೆರೆ ಇತರರು ಇದ್ದರು.

- - - -27ಕೆಡಿವಿಜಿ6.ಜೆಪಿಜಿ:

ದಾವಣಗೆರೆಯಲ್ಲಿ ಸೋಮವಾರ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ವಿ. ಅಶೋಕ ಗೋಪನಾಳ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article