ಮೂಡುಬಿದಿರೆ: ಕ್ರೀಡೆ ಯುವಜನರನ್ನು ಸತ್ಪ್ರಜೆಗಳನ್ನಾಗಿಸುವ, ಬಲಿಷ್ಠ ಭಾರತ ನಿರ್ಮಾಣದ ತಳಹದಿ ಎಂದು ವಿಧಾನಸಭೆ ಸಭಾಪತಿ ಯು.ಟಿ. ಖಾದರ್ ಫರೀದ್ ಹೇಳಿದ್ದಾರೆ.
ರಾಷ್ಟ್ರದ 300ಕ್ಕೂ ಅಧಿಕ ವಿವಿಗಳ ನಾಲ್ಕು ಸಾವಿರಕ್ಕೂ ಅಧಿಕ ದಾಖಲೆಯ ಕ್ರೀಡಾಪಟುಗಳನ್ನು ಕಲೆ ಹಾಕಿ ನಡೆದಿರುವ
85ನೇ ಅಖಿಲ ಭಾರತ ಅಂತರ್ ವಿ.ವಿ. ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಯುವ ಸಮೂಹವನ್ನು ದೇಶದ ಶಿಲ್ಪಿಗಳನ್ನಾಗಿಸಲಿದೆ ಎಂದರು. ಆಳ್ವಾಸ್ ಅತಿಥೇಯತ್ವದಲ್ಲಿ ನಡೆಯುವ ಈ ಕ್ರೀಡಾಕೂಟವು ಜಾಗತಿಕ ಕೂಟದ ಮಾದರಿ. ದೇಶದ ಎಲ್ಲ ಕ್ರೀಡಾಕೂಟಗಳಿಗೂ ಹೆಗ್ಗುರುತು ಎಂದು ಶ್ಲಾಘಿಸಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಿಸೀನ್ ಮಾತನಾಡಿ, ಕ್ರೀಡೆ ನಮ್ಮ ಏಕತೆಯ ಸಂಕೇತ. ಕ್ರೀಡಾ ಸ್ಫೂರ್ತಿಯ ಗೆಲುವು ನಮ್ಮದಾಗಬೇಕು. ಆಳ್ವಾಸ್ ಉತ್ತಮ ಶಿಕ್ಷಣ ನೀಡುವ ಸಂಸ್ಥೆಯಾಗಿದೆ. ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಹಾರೈಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಭಗವಾನ್ ಬಿ.ಸಿ. ಮಾತನಾಡಿ, ಅತ್ಯುತ್ತಮ ಆತಿಥ್ಯ, ಸಂಘಟನೆ ಹಾಗೂ ಅಚ್ಚುಕಟ್ಟುತನದ ಸಾಕ್ಷಾತ್ಕಾರದಂತೆ ಡಾ.ಎಂ.ಮೋಹನ ಆಳ್ವ ಕ್ರೀಡಾಕೂಟ ಸಂಘಟಿಸಿದ್ದಾರೆ ಎಂದು ಅಭಿನಂದಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಅರ್ಜುನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ , ಇಫ್ತಿಕರ್ ಅಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ.ವಿನಯ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.ಮಹಿಳಾ ಕಬಡ್ಡಿ ವಿಶ್ವಕಪ್ ವಿಜೇತ ಭಾರತೀಯ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ಕ್ರೀಡಾ ಸಾಧಕಿ ಧನಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಉದ್ಘಾಟನಾ ಸಂಕೇತವಾಗಿ ತ್ರಿವರ್ಣ ಬೆಲೂನುಗಳ ಗುಚ್ಛವನ್ನು ಗಣ್ಯರು ಆಗಸಕ್ಕೆ ತೇಲಿ ಬಿಟ್ಟರು. ಕ್ರೀಡಾಜ್ಯೋತಿ ಬೆಳಗಿದ ಬಳಿಕ, ಕ್ರೀಡಾಪಟು ದೀಕ್ಷಿತಾ ರಾಮಕೃಷ್ಣ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜೇಶ್ ಡಿಸೋಜ, ವೇಣುಗೋಪಾಲ್ ಶೆಟ್ಟಿ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿ ಎ.ಎಲ್, ಮುತ್ತು ವಂದಿಸಿದರು.ಗಮನ ಸೆಳೆದ ಕ್ರೀಡಾ ಕೂಟ:ಸತತ ಆರನೇ ಬಾರಿಗೆ ಆಳ್ವಾಸ್ ಈ ಬಾರಿ 85 ನೇ ಕ್ರೀಡಾ ಕೂಟ ಆಯೋಜಿಸಿ ಗಮನ ಸೆಳೆದಿದೆ. ಕ್ರೀಡಾಕೂಟದಲ್ಲಿ ದೇಶದ 304ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ನಾಲ್ಕು ಸಾವಿರಕ್ಕೂ ಅಧಿಕ ಅಥ್ಲೀಟ್‍ಗಳು ಹಾಗೂ ಸುಮಾರು 1000 ಕ್ರೀಡಾಧಿಕಾರಿಗಳು ಪಾಲ್ಗೊಂಡಿರುವುದು ಈ ಕ್ರೀಡಾ ಕೂಟದ ವಿಶೇಷತೆ. ದೇಶೀಯ ಅದರಲ್ಲೂ ವಿಶೇಷವಾಗಿ ಕರಾವಳಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸಿದ ಸಾಂಸ್ಕೃತಿಕ ಮೆರವಣಿಗೆ ಕೀಡಾಕೂಟಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡಿತು. ಉದ್ಘಾಟನಾ ಸಮಾರಂಭದ ಬಳಿಕ ಬಾನಂಗಳದಲ್ಲಿ ಸುಡುಮದ್ದಿನ ಚಿತ್ತಾರ ಸೇರಿದ ಕ್ರೀಡಾಪಟುಗಳ ಹರ್ಷೊದ್ಘಾರಕ್ಕೆ ಕಾರಣವಾಯಿತು. ಮಹಿಳೆಯರ ಮೊದಲ ಚಿನ್ನ ಮುಡಿಗೇರಿಸಿದ ‘ಆಳ್ವಾಸ್’ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2025-26’ರ ಮೊದಲ ದಿನದ ಮಹಿಳೆಯರ ವಿಭಾಗದ ಮೊದಲ ಸ್ಪರ್ಧೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ ವಿದ್ಯಾರ್ಥಿನಿ ನಿರ್ಮಲಾ ಚಿನ್ನಕ್ಕೆ ಮುತ್ತಿಕ್ಕಿದರು. ಆಳ್ವಾಸ್ ಸ್ವಾಯತ್ತ ಕಾಲೇಜಿನ ವಿದ್ಯಾರ್ಥಿನಿ ನಿರ್ಮಲಾ 10 ಸಾವಿರ ಮೀಟರ್ಸ್ ಓಟದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದು, ಮೊದಲಿಗರಾದರು.