ಮೂಲ್ಕಿ: ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿ ಹಾಗೂ ಯುವಶಕ್ತಿಗೆ ಹೊಸ ಚೈತನ್ಯ ತುಂಬಿದ ಮಹಾನ್ ಚೇತನ. ಅವರಂತೆಯೇ ಯುವಕರು ಶಿಸ್ತು, ಆತ್ಮವಿಶ್ವಾಸ ಮತ್ತು ಪರಿಶ್ರಮವನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರೌಢಶಾಲಾ ಸಹ ಶಿಕ್ಷಕ ಉಮೇಶ್ ನೀಲಾವರ ಹೇಳಿದರು.ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನವಿಕಾಸ ಸಮಿತಿ ಮೂಲ್ಕಿಯ ಸಹಕಾರದಲ್ಲಿ ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನಲ್ಲಿ ಸ್ವಾಮಿ ವಿವೇಕಾನಂದರ ಜನ್ಮತಿಥಿಯ ಅಂಗವಾಗಿ ಜರಗಿದ ವಿವೇಕ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ, ಧರ್ಮ ಎಂದರೆ ಕೇವಲ ಆಚರಣೆ ಅಲ್ಲ, ಮಾನವೀಯತೆ ಮತ್ತು ಸೇವಾಭಾವನೆಯೇ ನಿಜವಾದ ಧರ್ಮ ಎಂದು ವಿವೇಕಾನಂದರು ತಿಳಿಸಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ ವಿವೇಕಾನಂದರ ಸಂದೇಶವು ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾರ್ಗದರ್ಶಕವಾಗಬೇಕೆಂದು ಹೇಳಿದರು.
ಮೂಲ್ಕಿ ಜನವಿಕಾಸ ಸಮಿತಿ ಅಧ್ಯಕ್ಷ ಸುರೇಶ್ ಪಿ. ಎಸ್, ಉಪಾಧ್ಯಕ್ಷೆ ಗೀತಾ ಶೆಟ್ಟಿ, ಕಾರ್ಯದರ್ಶಿ ಶೋಭಾ ರಾವ್, ಸದಸ್ಯರಾದ ಶಶಿಕರ ಕೆರೆಕಾಡು, ಪ್ರಾಣೇಶ್ ಭಟ್ ದೇಂದಡ್ಕ, ಅಕ್ಷತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಜನವಿಕಾಸ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೀವನ್ ಶೆಟ್ಟಿ ವಂದಿಸಿದರು, ಶಾಲಾ ಪ್ರಾಚಾರ್ಯ ಜಿತೇಂದ್ರ ವಿ ರಾವ್ ಹೆಜಮಾಡಿ ನಿರೂಪಿಸಿದರು.