ಕನ್ನಡಪ್ರಭ ವಾರ್ತೆ ಸರಗೂರುತಾಲೂಕಿನ ಹುಸ್ಕೂರು ಹಾಡಿಗೆ ಬಸ್ ಸಂಪರ್ಕ ಕಲ್ಪಿಸಲು ಆಗ್ರಹಿಸಿ ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.ಸಮಿತಿಯ ಸಂಚಾಲಕ ಟಿ.ಆರ್. ಸುನಿಲ್ , ಹುಸ್ಕೂರು ಹಾಡಿಯ ಮುಖಂಡರಾದ ರತ್ನಮ್ಮ, ಬುಂಡಮ್ಮ, ಚಾಮ, ಬೈರ, ಅಪ್ಪು, ನೂರಾಳಯ್ಯ, ಕುಳ್ಳಯ್ಯ, ನಿಂಗಯ್ಯ, ಮಹೇಶ, ಸೋಮ, ತಿರುಪತಿ ಹಾಡಿಯ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಹಾಡಿಯ ಮುಖಂಡ ತಿರುಪತಿ ಮಾತನಾಡಿ, ಪ್ರತಿದಿನ ಆನೆ ಭಯದಿಂದ ನಡೆದುಕೊಂಡು ಬರುವುದು ಕಷ್ಟವಾಗುತ್ತಿದೆ. ಪ್ರತಿದಿನ ಆಟೋಗಳಿಗೆ ರು. 20 ಕ್ಕೂ ಹೆಚ್ಚು ಹಣ ತೆತ್ತು ಓಡಾಡಬೇಕು. ನಡೆದುಕೊಂಡು ಬರುವಾಗ ಅನೇಕ ಬಾರಿ ಆನೆಗಳು ಎದುರಾಗಿದ್ದು, ಹೆದರಿ ಓಡಲು ಪ್ರಯತ್ನಿಸಿ ಅಪಘಾತಗಳು ಆಗಿ ಕೈಕಾಲು ಮುರಿದುಕೊಂಡಿದ್ದಾರೆ. ನಾಲ್ಕೈದು ವರ್ಷಗಳಿಂದಲೂ ಸಹ ಬಸ್ ಬರದೇ ಪ್ರತಿದಿನ ಸಂಚಾರವೇ ಕಷ್ಟವಾಗಿದ್ದು, ಸಂಕಷ್ಟದಲ್ಲಿ ಬದುಕುವಂತಾಗಿದೆ ಎಂದು ದೂರಿದರು.ಮುಖಂಡರಾದ ಬೈರಾ, ಬುಂಡಮ್ಮ, ಸುನಿಲ್ ಮಾತನಾಡಿ, ಸಂಪೂರ್ಣವಾಗಿ ಅರಣ್ಯ ಒಳಗೆ ಇರುವ ಈ ಹಾಡಿಗೆ ಕನಿಷ್ಠ ಪಕ್ಷ ಬೆಳಗ್ಗೆ 8.30ಕ್ಕೆ ಹಾಡಿಯಿಂದ ಸರಗೂರಿಗೆ ಹೊರಡುವಂತೆ ಹಾಗೂ ಸಂಜೆ 4ಕ್ಕೆ ಸರಗೂರಿನಿಂದ ಹುಸ್ಕೂರು ಹಾಡಿಗೆ ಬರುವಂತೆ ಬಸ್ ವ್ಯವಸ್ಥೆ ಮಾಡಬೇಕು. ಈಗಾಗಲೇ ದಡದಹಳ್ಳಿ ಮಾರ್ಗವಾಗಿ ಹೋಗುವ ಬಸ್ ಇಲ್ಲಿಗೆ ಬಂದು ಹೋಗುವಂತೆ ಮಾಡಬೇಕು. ಈ ವಿಚಾರವಾಗಿ ಐಟಿಡಿಪಿ ಇಲಾಖೆ, ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಕಾರಣವಾಗಿದೆ, ಇದರಿಂದ ಬಡ ಆದಿವಾಸಿ ಜನರು ಹಾಗೂ ಅವರ ಮಕ್ಕಳು ಎಲ್ಲ ನಾಗರಿಕ ಸೌಲಭ್ಯ ಮತ್ತು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಈ ಕೂಡಲೇ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಹುಸ್ಕೂರು ಹಾಡಿ ಜನರು ಸೇರಿ ಅನಿರ್ದಿಷ್ಟಾವಧಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.