ವಕ್ಫ್ ತಿದ್ದುಪಡಿ ಕಾಯ್ದೆ- 2025 ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ

KannadaprabhaNewsNetwork | Published : May 4, 2025 1:35 AM

ಸಾರಾಂಶ

ವಕ್ಫ್‌ ಅಲ್ಲಾಹುಗೆ ಸೇರಿದ್ದು, ಅದರ ಮಾರ್ಪಾಡು ಸ್ವೀಕಾರಾರ್ಹವಲ್ಲ, ಕರಾಳ ಕಾನೂನು ವಾಪಸ್‌ ಪಡೆಯಿರಿ,

ಕನ್ನಡಪ್ರಭ ವಾರ್ತೆ ಮೈಸೂರುಕೇಂದ್ರ ಸರ್ಕಾರವು ಅಂಗೀಕರಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆ- 2025 ಅನ್ನು ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಈದ್ಗಾ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನೆರೆದಿದ್ದ ಸಾವಿರಾರು ಪ್ರತಿಭಟನಾಕಾರರು ತ್ರಿವರ್ಣ ಧ್ವಜ ಹಿಡಿದು, ಕಪ್ಪು ಪಟ್ಟಿ ಕಟ್ಟಿಕೊಂಡು, ಜೈ ಭೀಮ್‌ ಘೋಷಣೆ ಕೂಗಿದರು. ನಾವು ಸಂವಿಧಾನವನ್ನು ರಕ್ಷಿಸುತ್ತೇವೆ, ಭಾತೃತ್ವವನ್ನು ಬೆಳೆಸುತ್ತೇವೆ ಎಂದು ಸಾರಿದರು.ವಕ್ಫ್‌ ಅಲ್ಲಾಹುಗೆ ಸೇರಿದ್ದು, ಅದರ ಮಾರ್ಪಾಡು ಸ್ವೀಕಾರಾರ್ಹವಲ್ಲ, ಕರಾಳ ಕಾನೂನು ವಾಪಸ್‌ ಪಡೆಯಿರಿ, ಭಯೋತ್ಪಾದನೆ ಇಸ್ಲಾಮಿಕ್‌ ಆಚರಣೆಯಲ್ಲ, ಪೆಹಲ್ಗಾಂ ಭಯೋತ್ಪಾದಕ ಹತ್ಯಾಕಾಂಡ ಖಂಡಿಸುತ್ತೇವೆ ಮೊದಲಾದ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.ಜಾಗೃತ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಎಚ್‌.ವಿ. ವಾಸು ಸಂವಿಧಾನದ ಪೀಠಿಕೆ ಓದಿ, ಪ್ರಮಾಣವಚನ ಬೋಧಿಸಿದರು. ಪಹಲ್ಗಾಂನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.ಈ ವೇಳೆ ಮುಸ್ಲಿಂ ಸಮುದಾಯದ ಮುಖಂಡ ಅಕ್ಬರ್ ಅಲಿ ಉಡುಪಿ ಮಾತನಾಡಿ, ವಕ್ಫ್‌ ಆಸ್ತಿಯ ದುರಪಯೋಗ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಸರ್ಕಾರ, ಖಾಸಗಿ ವ್ಯಕ್ತಿಗಳು, ಮುಸ್ಲಿಂ ನಾಯಕರು ಒತ್ತುವರಿ ಮಾಡಿರುವ ಭೂಮಿಯನ್ನು ವಾಪಸ್‌ ಪಡೆಯುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.ವಕ್ಫ್‌ ಸಂಪತ್ತನ್ನು ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡಲು ಬಳಸಲಾಗುತ್ತದೆ. ಆದರೆ, ಕೇಂದ್ರ ಸರ್ಕಾರ ಇವುಗಳನ್ನು ತಿಳಿಸದೆ ಜನರ ಮುಂದೆ ಸುಳ್ಳು ಹೇಳಿ, ವಕ್ಫ್‌ ಕಾಯ್ದೆಗೆ ತಿದ್ದುಪಡಿ ಮಾಡಿ ಮುಸ್ಲಿಂ ಸಮುದಾಯದವರನ್ನು ಹಗಲು ದರೋಡೆ ಮಾಡಲು ಹೊರಟಿದೆ. ಇದು ಸಂವಿಧಾನದ ವಿರುದ್ಧದ ಸರ್ಕಾರದ ಯುದ್ಧ ಘೋಷಣೆ ಎಂದು ಅವರು ಆರೋಪಿಸಿದರು.ವಕ್ಫ್‌ ಗಿಂತ ಹೆಚ್ಚಿನ ಭೂಮಿ, ಕ್ರಿಶ್ಚಿಯನ್‌ ಹಾಗೂ ಹಿಂದೂ ಸಮುದಾಯದ ಧಾರ್ಮಿಕ ಸಂಸ್ಥೆಗಳಲ್ಲಿವೆ. ನಿಧಾನಕ್ಕೆ ಅವುಗಳನ್ನೂ ಕಸಿದು, ತಮ್ಮ ಮಿತ್ರರಿಗೆ ಒದಗಿಸಲು ಮೋದಿ ಸರ್ಕಾರ ಷಡ್ಯಂತ್ರ ನಡೆಸಿದೆ. ದೇಶದ ಕಾನೂನಿನಲ್ಲಿ ವಕ್ಫ್ ಭೂಮಿ ಒಪ್ಪಿಕೊಳ್ಳಲಾಗಿದೆ. ಹಿಂದೂ ದೇವಾಲಯ ಅಥವಾ ಧಾರ್ಮಿಕ ದತ್ತಿ ಇಲಾಖೆಗೆ ಹಿಂದೂಗಳನ್ನೇ ನೇಮಿಸಬೇಕು ಎಂದು ನಿಯಮವಿದೆ. ಅದನ್ನು ನಾವೂ ಸ್ವಾಗತಿಸುತ್ತೇವೆ. ಆದರೆ, ನಮ್ಮ ವಕ್ಫ್‌ ಬೋರ್ಡ್‌ ನಲ್ಲಿ ಮುಸ್ಲಿಂಯೇತರರ ಸೇರ್ಪಡೆ ಯಾಕೆ ಎಂದು ಅವರು ಪ್ರಶ್ನಿಸಿದರು.ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್‌ ಗೌಡ, ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ,ದಸಂಸ ಮುಖಂಡ ಬೆಟ್ಟಯ್ಯ ಕೋಟೆ, ಮೌಲಾನ ಉಸ್ಮಾನ್ ಷರೀಫ್, ಮಪ್ತಿ ತಾಜುದ್ದೀನ್, ಹಾಫೀಸ್ ಹರ್ಷದ್, ಜಹೀರ್, ಜಫಾವುಲ್ಲಾ, ಅಕ್ಬರ್ ಅಲಿ, ಅಯೂಬ್ ಅನ್ಸಾರಿ, ಫಾರೂಕ್ ನಷ್ಟರ್, ಉಗ್ರ ನರಸಿಂಹೇಗೌಡ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಶೌಕತ್ ಪಾಷ, ಸುಹೇಲ್ ಅಹಮದ್ ಮೊದಲಾದವರು ಇದ್ದರು.-----ಬಾಕ್ಸ್...ಈದ್ಗಾ ಮೈದಾನ ಸುತ್ತ ಬಿಗಿ ಭದ್ರತೆಪ್ರತಿಭಟನಾ ಸಮಾವೇಶ ನಡೆಯುತ್ತಿದ್ದ ಈದ್ಗಾ ಮೈದಾನ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗಾಗಿ ನೀಯೋಜಿಸಲಾಗಿತ್ತು. ಸಂಚಾರ ದಟ್ಟನೆ ತಡೆಗಟ್ಟಲು ಮೈದಾನದ ಸುತ್ತಾ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದರಿಂದ ಅಲ್ಲಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು.ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಎಂ. ಮುತ್ತುರಾಜು, ಸುಂದರ್ ರಾಜು, ಎಸಿಪಿಗಳು ಭದ್ರತೆಯ ನೇತೃತ್ವ ವಹಿಸಿದ್ದರು.

Share this article