ತುಮ್ಕೋಸ್‌ ಸೂಪರ್‌ ಮಾರ್ಕೆಟ್‌ನಲ್ಲಿ ಎಲ್ಲ ವಸ್ತುಗಳು ಲಭ್ಯ

KannadaprabhaNewsNetwork | Published : Aug 22, 2024 12:48 AM

ಸಾರಾಂಶ

ತೋಟಗಾರಿಕೆ ಉತ್ಪನ್ನಗಳ ಮಾರಾಟ ಸಹಕಾರ ಸಂಘ (ತುಮ್ಕೋಸ್‌) ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಪ್ರಗತಿ ಹೊಂದುತ್ತಿದೆ. ಅಡಕೆ ಮಾರಾಟದ ವಹಿವಾಟಿನ ಜೊತೆಯಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಬೇಕಾಗುವ ಎಲ್ಲ ವಸ್ತುಗಳು ಒಂದೇ ಸೂರಿನಡಿ ಸಿಗುವಂತಹ ಸೂಪರ್ ಮಾರ್ಕೆಟ್ ಅನ್ನು ತುಮ್ಕೋಸ್‌ ಸಂಸ್ಥೆಯಿಂದ ಆರಂಭಿಸಿದ್ದು, ಲಾಭ ದಾಯಕವಾಗಿ ಮುನ್ನಡೆದಿದೆ ಎಂದು ತುಮ್ಕೋಸ್‌ ಅಧ್ಯಕ್ಷ ಆರ್.ಎಂ. ರವಿ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಚನ್ನಗಿರಿಯಲ್ಲಿ ₹48 ಲಕ್ಷ ವೆಚ್ಚದಲ್ಲಿ ಸೌರ ವಿದ್ಯುತ್‌ ಘಟಕ ಉದ್ಘಾಟಿಸಿ ಅಧ್ಯಕ್ಷ ರವಿ ಹೇಳಿಕೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ತೋಟಗಾರಿಕೆ ಉತ್ಪನ್ನಗಳ ಮಾರಾಟ ಸಹಕಾರ ಸಂಘ (ತುಮ್ಕೋಸ್‌) ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಪ್ರಗತಿ ಹೊಂದುತ್ತಿದೆ. ಅಡಕೆ ಮಾರಾಟದ ವಹಿವಾಟಿನ ಜೊತೆಯಲ್ಲಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಬೇಕಾಗುವ ಎಲ್ಲ ವಸ್ತುಗಳು ಒಂದೇ ಸೂರಿನಡಿ ಸಿಗುವಂತಹ ಸೂಪರ್ ಮಾರ್ಕೆಟ್ ಅನ್ನು ತುಮ್ಕೋಸ್‌ ಸಂಸ್ಥೆಯಿಂದ ಆರಂಭಿಸಿದ್ದು, ಲಾಭ ದಾಯಕವಾಗಿ ಮುನ್ನಡೆದಿದೆ ಎಂದು ತುಮ್ಕೋಸ್‌ ಅಧ್ಯಕ್ಷ ಆರ್.ಎಂ. ರವಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣ ಬಳಿಯ ಸಂಸ್ಥೆಯ ಸೂಪರ್ ಮಾರ್ಕೆಟ್ ಮೇಲ್ಭಾಗದಲ್ಲಿ ಬುಧವಾರ ಮಾರ್ಕೆಟ್ ಬಳಕೆಗಾಗಿ ₹48 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವ 127 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸೌರ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಈ ಹಿಂದೆ ಸೂಪರ್ ಮಾರ್ಕೆಟ್ ವಿದ್ಯುತ್ ಬಿಲ್ ₹1.50 ಲಕ್ಷದಿಂದ ₹2 ಲಕ್ಷವರೆಗೆ ಬೆಸ್ಕಾಂಗೆ ಸಂದಾಯ ಮಾಡಬೇಕಾಗಿತ್ತು. ಆದರೆ ಈಗ ಸೂಪರ್ ಮಾರ್ಕೆಟ್‌ಗೆ ಬೇಕಾದ ವಿದ್ಯುತ್ ಅನ್ನು ಸೋಲಾರ್ ಪ್ಲಾಂಟ್ ಮೂಲಕ ಉತ್ಪಾದಿಸಲಾಗುತ್ತಿದೆ. ಇದರಿಂದ ಮುಂದಿನ ಎರಡು ವರ್ಷಗಳಲ್ಲಿಯೇ ಸೋಲಾರ್ ವಿದ್ಯುತ್ ಘಟಕಕ್ಕೆ ವೆಚ್ಚ ಮಾಡಿದ ಹಣ ಬರಲಿದೆ. ಇದರಿಂದ ಸಂಸ್ಥೆಗೆ ಲಾಭದಾಯಕವಾಗಲಿದೆ. ಈ ಸೋಲಾರ್ ಘಟಕಕ್ಕೆ 25 ವರ್ಷಗಳ ಕಾಲ ಗ್ಯಾರಂಟಿಯನ್ನು ಏಜೆನ್ಸಿಯವರು ನೀಡಿದ್ದಾರೆ ಎಂದರು.

ತುಮ್ ಕೋಸ್ ನ ಆಡಳಿತ ಕಛೇರಿ ಮತ್ತು ತಾವರೆಕೆರೆ ಗೋದಾಮು ಕಛೇರಿಯಲ್ಲಿಯೋ ಸೋಲಾರ್ ವಿದ್ಯುತ್ ಸ್ಥಾವರವನ್ನು ಅಳವಡಿಸಿರುವುದರಿಂದ ನಿರಂತರವಿದ್ಯುತ್ ದೊರೆಯುವ ಜೋತೆಗೆ ಕಡಿಮೆ ವೆಚ್ಚದಲ್ಲಿ ಬೆಳಕು ಬೆಳಗುವಂತೆ ಮಾಡಲಾಗಿದೆ ಎಂದರು.ತುಮ್ಕೋಸ್‌ ಸಂಸ್ಥೆಯಿಂದ ಆರಂಭಗೊಂಡ ಸೂಪರ್ ಮಾರ್ಕೆಟ್ ಆರಂಭಗೊಂಡು ಆಗಸ್ಟ್ 21ಕ್ಕೆ ಒಂದು ವರ್ಷ ವಾಗಿದೆ. ಕಳೆದ ಒಂದು ವರ್ಷದಿಂದ ₹12.57 ಕೋಟಿಯಷ್ಟು ವಹಿವಾಟು ನಡೆಸಿ, ಎಲ್ಲ ರೀತಿಯ ಖರ್ಚು ವೆಚ್ಚಗಳನ್ನು ಕಳೆದು ₹55 ಲಕ್ಷ ಲಾಭಾಂಶ ಬಂದಿದೆ ಎಂದು ಸೂಪರ್ ಮಾರ್ಕೆಟ್ ವ್ಯಾಪಾರ ಮತ್ತು ವಹಿವಾಟಿನ ಬಗ್ಗೆ ವಿವರ ನೀಡಿದರು.

ಮಾರ್ಕೆಟ್‌ನ ಎರಡನೇ ಅಂತಸ್ತಿನಲ್ಲಿ ವಿಶಾಲವಾದ ಜಾಗವನ್ನು ಶಿವಮೊಗ್ಗದ ಚಂದ್ರಗಿರಿ ಮಲ್ಟಿ ಸ್ಪೆಷಾಲಿಟಿ ಆಸ್ಫತ್ರೆ ನಡೆಸಲು ನೀಡಿದ್ದು, ಈ ಆಸ್ಪತ್ರೆಯಲ್ಲಿ ತುಮ್ಕೋಸ್‌ ಸಂಸ್ಥೆ ಷೇರುದಾರರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಒಪ್ಪಂದ ವಾಗಿದೆ ಎಂದರು.

ಸೂಪರ್ ಮಾರ್ಕೆಟ್ ಆರಂಭಗೊಂಡು ಒಂದು ವರ್ಷ ಕಳೆದ ಹಿನ್ನೆಲೆ ಕೇಕ್ ಕತ್ತರಿಸುವ ಮೂಲಕ ವಾರ್ಷಿಕೋತ್ಸವ ಸಂಭ್ರಮಿಸಲಾಯಿತು. ಇದೇ ಸಂದರ್ಭದಲ್ಲಿ ತುಮ್ಕೋಸ್‌ ಸಂಸ್ಥಾಪಕ ಅಜ್ಜಿಹಳ್ಳಿ ಮರುಳಪ್ಪ ಅವರ ಭಾವಚಿತ್ರಕ್ಕೆ ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರು ಪುಷ್ಪನಮನ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ನಿರ್ದೇಶಕರಾದ ಟಿ.ವಿ.ರಾಜು ಪಟೇಲ್, ಜಿ.ಬಿ.ಸಂತೋಷ್, ಎಂ.ಸಿ. ದೇವರಾಜ್, ಜಿ.ಸಿ. ಶಿವಕುಮಾರ್, ಜಿ.ಆರ್. ಶಿವಕುಮಾರ್, ಎಚ್.ಸುರೇಶ್, ಎ.ಎಂ. ಚಂದ್ರಶೇಖರಪ್ಪ, ಆರ್.ಕೆಂಚಪ್ಪ, ಎನ್.ಗಂಗಾಧರಪ್ಪ, ಎಂ.ಎಸ್. ರಮೇಶ್ ನಾಯಕ್, ಎಂ.ಎಸ್. ದೇವೆಂದ್ರಪ್ಪ, ಆರ್.ಪಾರ್ವತಮ್ಮ, ಜಿ.ಆರ್. ಪ್ರೇಮಾ ಲೋಕೇಶಪ್ಪ, ವ್ಯವಸ್ಥಾಪಕ ನಿರ್ದೇಶಕ ಮಧು, ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.

- - - -21ಕೆಸಿಎನ್‌ಜಿ1:

ಚನ್ನಗಿರಿ ಪಟ್ಟಣದ ಬಸ್ ನಿಲ್ದಾಣ ಸಮೀಪದ ತುಮ್ಕೋಸ್‌ ಸೂಪರ್ ಮಾರ್ಕೆಟ್ ಮೇಲ್ಭಾಗದಲ್ಲಿ ₹48 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವ 127 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸೌರ ಘಟಕ ಉದ್ಘಾಟನೆಯನ್ನು ಅಧ್ಯಕ್ಷ ಆರ್.ಎಂ.ರವಿ ನೆರವೇರಿಸಿದರು.

Share this article