ದೀಪಾವಳಿಗೆ ಎಲ್ಲ ಕೆರೆಗಳು ಭರ್ತಿ: ತಂಗಡಗಿ

KannadaprabhaNewsNetwork |  
Published : Sep 15, 2025, 01:01 AM IST
ಕನಕಗಿರಿ ತಾಲೂಕಿನ ದೇವಲಾಪುರ ಕೆರೆಗೆ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್ ಭೇಟಿ ನೀಡಿ ವೀಕ್ಷಿಸಿದರು. | Kannada Prabha

ಸಾರಾಂಶ

ಕೃಷ್ಣಾ ಬಿ ಸ್ಕೀಂ ಯೋಜನೆಯಡಿ ಕನಕಗಿರಿ ತಾಲೂಕಿನ ದೇವಲಾಪುರ ಕೆರೆಗೆ ನೀರು ಹರಿಯುವುದನ್ನು ಭಾನುವಾರ ಸಚಿವ ಶಿವರಾಜ ತಂಗಡಗಿ ವೀಕ್ಷಣೆ ಮಾಡಿದರು.

ಕನಕಗಿರಿ: ದೀಪಾವಳಿ ಹಬ್ಬದೊಳಗೆ ಕನಕಗಿರಿ ತಾಲೂಕು ವ್ಯಾಪ್ತಿಯ ಕೆರೆಗಳನ್ನು ತುಂಬಿಸಿ ಕೆರೆಯ ಕೋಡಿ ಹರಿಸುವ ಇಚ್ಛೆ ಹೊಂದಿರುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕೃಷ್ಣಾ ಬಿ ಸ್ಕೀಂ ಯೋಜನೆಯಡಿ ತಾಲೂಕಿನ ದೇವಲಾಪುರ ಕೆರೆಗೆ ನೀರು ಹರಿಯುವುದನ್ನು ಭಾನುವಾರ ವೀಕ್ಷಣೆ ಮಾಡಿ ನಂತರ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದರು. ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಸಣ್ಣ ನೀರಾವರಿ ಇಲಾಖೆಯಡಿ ತಾಲೂಕು ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಈ ಮೂರು ವಿಭಾಗಗಳಿಂದ ಯಾವ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಈಗಾಗಲೇ ವರ್ಗೀಕರಣ ಮಾಡಿಕೊಂಡಿದ್ದರಿಂದ 2ನೇ ಬಾರಿಗೆ ಕೆರೆಗಳ ವೀಕ್ಷಣೆಗೆ ಮುಂದಾಗಿದ್ದೇನೆ ಎಂದರು.

ಇನ್ನೂ ಹುಲಿಹೈದರ ಗ್ರಾಪಂ ವ್ಯಾಪ್ತಿಯ ಲಾಯದುಣಸಿ ಕೆರೆಗೆ ನೀರು ಹರಿಸಲು ಪ್ರಯತ್ನಿಸಿದ್ದು, ಕಳೆದ ಮೂರು ದಿನಗಳಿಂದ ಸತತವಾಗಿ ಪೈಪ್‌ಲೈನ್ ಒಡೆಯುತ್ತಿದೆ. ಈ ಬಗ್ಗೆ ಪರಿಶೀಲಿಸಿ ಲಾಯದುಣಸಿ ಕೆರೆಗೂ ನೀರು ತುಂಬಿಸಲು ಕ್ರಮ ಕೈಗೊಳ್ಳುವೆ ಎಂದರಲ್ಲದೆ, ಈಗಾಗಲೇ ಕೆ. ಕಾಟಾಪುರ, ಇಂಗಳದಾಳ, ದೇವಲಾಪುರ ಕೆರೆಗಳು ತುಂಬುವ ಹಂತದಲ್ಲಿವೆ ಎಂದರು.

ವಾಲ್ಮೀಕಿ ಹಾಗೂ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ತಲಾ ₹೨ ಕೋಟಿ ಮೀಸಲಿಡಲಾಗಿದೆ. ಕನಕ ಭವನ ನಿರ್ಮಾಣಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ. ₹೨ ಕೋಟಿ ಅನುದಾನ ಮೀಸಲಿರಿಸಲಾಗುವುದು. ದೇವಸ್ಥಾನ ಹಾಗೂ ಮಸೀದಿಗಳ ಅಭಿವೃದ್ಧಿಗೆ ₹೨.೫ ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ನ್ಯಾಯಾಲಯ, ನೋಂದಣಿ ಕಚೇರಿ ಆರಂಭಕ್ಕೆ ಕ್ರಮ: ತಾಂತ್ರಿಕ ತೊಂದರೆಯಿಂದ ನೋಂದಣಿ ಕಚೇರಿ ಆರಂಭವಾಗಿಲ್ಲ. ಕಟ್ಟಡದ ಬಾಡಿಗೆ ನಿಗದಿಯಾದ ಬಳಿಕ ನೋಂದಣಿ ಕಚೇರಿ ಆರಂಭಿಸಲಾಗುವುದು. ನ್ಯಾಯಾಲಯ ಆರಂಭಕ್ಕೆ ಎಪಿಎಂಸಿಯಲ್ಲಿನ ಶ್ರಮಿಕ ಭವನವನ್ನು ಗುರುತಿಸಲಾಗಿದ್ದು, ಕಚೇರಿಗೆ ಅವಶ್ಯವಾದ ಪರಿಕರಗಳ ಖರೀದಿಗೆ ಅನುದಾನ ನೀಡಿ ನ್ಯಾಯಾಲಯ ಆರಂಭಿಸಲಾಗುವುದು ಎಂದರು.

ತಾಲೂಕಿನ ಬಹುತೇಕ ಕೆರೆಗಳಿಗೆ ತುಂಗಭದ್ರಾ ಹಾಗೂ ಕೃಷ್ಣೆ ಬಂದಿದ್ದರಿಂದ ಒಣಭೂಮಿ ಪ್ರದೇಶದ ರೈತರಿಗೆ ಅನುಕೂಲವಾಗಿದೆ. ಈ ಬಾರಿಯ ದೀಪಾವಳಿ ರೈತರಲ್ಲಿ ಬೆಳಕು ತಂದು ಸಮೃದ್ಧವಾಗಿ ಬಾಳಲಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ