ಮುಂಡರಗಿ: ಮುಂಡರಗಿ ಪಟ್ಟಣದಲ್ಲಿ ಸುಸಜ್ಜಿತ ಸರ್ಕಾರಿ ಪ್ರೌಢಶಾಲೆ ನಿರ್ಮಾಣವಾಗಬೇಕೆನ್ನುವುದು ಬಹುವರ್ಷಗಳ ಬೇಡಿಕೆಯಾಗಿತ್ತು. ಇತ್ತೀಚೆಗೆ ಗದಗ ನಗರಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗಮಿಸಿದ ಸಂದರ್ಭದಲ್ಲಿ ಶೀಘ್ರದಲ್ಲಿಯೇ ಮುಂಡರಗಿ ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರಾತಿಗೆ ಆದೇಶ ನೀಡುವ ಭರವಸೆ ನೀಡಿದ್ದಾರೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಪಟ್ಟಣದ ಇನ್ನೆರಡು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿ ಪ್ರಾರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಮುಂಡರಗಿ ತಾಲೂಕಿಗೆ ತನ್ನದೇಯಾದ ಸ್ಥಾನಮಾನವಿದೆ. ಇದೀಗ ನಮ್ಮ ಮಕ್ಕಳು ಎಐ ( ಆರ್ಟಿಪಿಶಲ್ ಇಂಟಲ್ ಜೆನ್ಸಿ) ಕಾಲದಲ್ಲಿದ್ದು, ಅವರಿಗೆ ಅನೇಕ ರೀತಿಯ ಪ್ರಶ್ನೆಗಳು ಹುಟ್ಟುತ್ತಿವೆ. ಅವರ ಬುದ್ಧಿಮಟ್ಟಕ್ಕೆ ತಲುಪುವಂತೆ ಪಾಠ ಮಾಡುವಲ್ಲಿ ನಮ್ಮ ಶಿಕ್ಷಕರು ಮುಂದಾಗಬೇಕು ಎಂದರು.
ಧಾರವಾಡ ಬಾಲಬಳಗದ ಕಾರ್ಯಾಧ್ಯಕ್ಷ ಡಾ. ಸಂಜೀವ್ ಕುಲಕರ್ಣಿ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿ, ಇಂದು ಮಕ್ಕಳನ್ನು ಶಹರದಲ್ಲಿರುವ ಆಂಗ್ಲಮಾಧ್ಯಮ ಶಾಲೆಗಳಿಗೆ ಕಳಿಸುತ್ತಿರುವುದರಿಂದ ಅವರು ಗ್ರಾಮೀಣ ಪ್ರದೇಶದ ಸರ್ಕಾರಿ ಕನ್ನಡ ಶಾಲೆಯಲ್ಲಿ ಕಲಿಯುವ ಮಗುವಿನಂತೆ ನೈಜವಾಗಿ ಸಂತೋಷದ ಬಾಲ್ಯ ಕಳೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಮಕ್ಕಳಿಗೆ ಇಂದು ಪರಿಸರ ಸ್ನೇಹಿ ಪಾಠ ಕಲಿಸುವುದು ಅವಶ್ಯ ಎಂದರು.ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಜಗತ್ತಿನಲ್ಲಿ ಯಾವುದೇ ವ್ಯಕ್ತಿ ಎಷ್ಟೇ ದೊಡ್ಡ ಹುದ್ದೆ ಅಲಂಕರಿಸಿದರೂ ಅದಕ್ಕೆ ಪ್ರಮುಖ ಕಾರಣವೇ ನಮಗೆ ವಿದ್ಯ ಕಲಿಸಿದ ಶಿಕ್ಷಕರು. ಶಿಕ್ಷಕರು ಇರದಿದ್ದರೆ ನಾವು ಸಾಧನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಕರಿಗೆ ಇರುವ ಗೌರವ ಬೇರೆ ಯಾವುದೇ ನೌಕರರಿಗಿಲ್ಲ. ಇಂದಿನ ಕಂಪ್ಯೂಟರ್ ಯುಗದಲ್ಲಿ ಶಿಕ್ಷಕರೂ ಸಹ ಕಾಲಕ್ಕೆ ತಕ್ಕಂತೆ ಬದಲಾಗಿ ಪಾಠ ಮಾಡಬೇಕು. ಶಿಕ್ಷಕರು ಶಾಲಾ ಅವಧಿ ಹೊರತು ಪಡಿಸಿ ಎಸ್.ಡಿ.ಎಂ.ಸಿ.ಸಭೆ ನಡೆಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಜ. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳು ಪ್ರಕೃತಿಯೊಂದಿಗೆ ಶಿಕ್ಷಣ ಪಡೆಯುವುದರಿಂದ ಅವರಿಗೆ ಪಠ್ಯದ ಪಾಠದ ಜತೆಗೆ ಜೀವನಾನುಭವದ ಪಾಠ ಕಲಿಯುತ್ತಾರೆ. ಗುಣಮಟ್ಟದ ಶಿಕ್ಷಣ ನೀಡಬೇಕೆನ್ನುವ ಸರ್ಕಾರ ಶಿಕ್ಷಕರ ಕೊರತೆಯನ್ನರಿತು ನೇಮಕಾತಿಗೆ ಮುಂದಾಗಬೇಕು. ಗುತ್ತಿಗೆಯಾಧರದ ಮೇಲೆ ಶಿಕ್ಷಕರನ್ನು ತಂದು ಪಾಠ ಮಾಡಿಸಿದರೆ ಸಂಸ್ಥೆಯಿಂದ ಪ್ರತಿ ತಿಂಗಳು ₹10 ರಿಂದ 12 ಲಕ್ಷ ಹಣ ಕೈಯಿಂದ ಕೊಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಡಿ.ಡಿ. ಮೋರನಾಳ, ಕರಬಸಪ್ಪ ಹಂಚಿನಾಳ, ಹೇಮಂತಗೌಡ ಪಾಟೀಲ, ಕೊಟ್ರೇಶ ಅಂಗಡಿ, ಶೋಭಾ ಮೇಟಿ, ಎಸ್.ವಿ. ಪಾಟೀಲ, ಗೋಣಿಬಸಪ್ಪ ಕೊರ್ಲಹಳ್ಳಿ, ವೀರಣ್ಣ ನಾಡಗೌಡ್ರ, ವಿ.ಎಸ್. ಗಟ್ಟಿ, ದುರಗಪ್ಪ ಹರಿಜನ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ, ಪವನ್ ಮೇಟಿ, ರಾಜಾಭಕ್ಷಿ ಬೆಟಗೇರಿ, ಸಂತೋಷ ಹಿರೇಮನಿ, ನಾಗರಾಜ ಹಳ್ಳಿಕೇರಿ, ಶಿವಕುಮಾರ ಸಜ್ಜನರ, ಎ.ಡಿ. ಬಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಂತೋಷ ಅಂಗಡಿ ಹಾಗೂ ಶರಣು ಕಲಾಲ, ಹನುಮರಡ್ಡಿ ಇಟಗಿ ನಿರೂಪಿಸಿದರು.
ಭಾನುವಾರ ಜರುಗಿದ ತಾಲೂಕು ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ವಿತರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಗೊಂದಲದಿಂದ ಕೂಡಿತ್ತು. ಸನ್ಮಾನಿತರು ವೇದಿಕೆಗೆ ಬರಲು ನೂಕು ನುಗ್ಗಲು ಉಂಟಾಗುವ ಸ್ಥಿತಿಯಲ್ಲಿ ಅನೇಕರು ಕೈಯಲ್ಲಿ ಮೊಬೈಲ್ ಹಿಡಿದು ಫೋಟೊ ತೆಗೆಯಲು ಮುಂದಾಗಿದ್ದರು. ಹೀಗಾಗಿ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಶಿಕ್ಷಕರು ವೇದಿಕೆಗೆ ತೆರಳಿ ಸನ್ಮಾನ ಪಡೆದು ಮರಳಿ ಕೆಳಗಿಳಿಯಲು ಹರಸಾಹಸ ಪಟ್ಟಿದ್ದು ಕಂಡು ಬಂದಿತು.