ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಹಳ್ಳಿಗಳಲ್ಲಿ ರೈತರು ವಿಶೇಷವಾಗಿ ಸಿಂಗರಿಸಿದ ರಾಸುಗಳನ್ನು ಕರೆತಂದು ರಸ್ತೆಗಳಲ್ಲಿ ಹುಲ್ಲಿನ ಬೆಂಕಿ ಮೇಲೆ ಕಿಚ್ಚು ಹಾಯಿಸಿ ಆರತಿ ಬೆಳಗಿದರೆ, ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಹೊಸ ಬಟ್ಟೆಗಳನ್ನು ತೊಟ್ಟು ಸಂಬಂಧಿಕರು ಹಾಗೂ ಅಕ್ಕ-ಪಕ್ಕದ ನಿವಾಸಿಗಳಿಗೆ ಎಳ್ಳು-ಬೆಲ್ಲ ವಿತರಿಸಿ ಪರಸ್ಪರ ಶುಭ ಕೋರುವ ಮೂಲಕ ಸಂಕ್ರಾಂತಿಯ ಹಬ್ಬವನ್ನು ಸಡಗರದಿಂದ ಆಚರಿಸಿದರು.
ರೈತರು ಬೆಳಗ್ಗೆಯಿಂದಲೇ ರಾಸುಗಳಿಗೆ ಮೈತೊಳೆದು ಹುಲ್ಲು, ಮೇವುಗಳನ್ನು ಹಾಕಿ ಸಂತೈಸುವ ರೈತರು, ಸಂಜೆಯ ವೇಳೆಗೆ ರಾಸುಗಳನ್ನು ಬಗೆ ಬಗೆಯ ಬಣ್ಣ ಹಾಗೂ ಹೂವುಗಳಿಂದ ಸಿಂಗರಿಸಿ ಗ್ರಾಮದ ಹೆಬ್ಬಾಗಿಲಿನಲ್ಲಿ ಹಾಕಲಾಗುವ 3 ಸಾಲಿನ ಹುಲ್ಲಿನ ಬೆಂಕಿಯ ಮೇಲೆ ದೃಷ್ಟಿ ತಾಕದಂತೆ ಕಿಚ್ಚು ಹಾಯಿಸುವುದು ಸಂಪ್ರದಾಯ. ಬಳಿಕ ಮನೆಗೆ ಬರುವ ರಾಸುಗಳಿಗೆ ಕುಟುಂಬಸ್ಥರು ಆರತಿ ಎತ್ತಿ, ಮನೆಯಲ್ಲಿ ಮಾಡಲಾಗಿರುವ ಬಗೆ ಬಗೆಯ ಭಕ್ಷ್ಯವನ್ನು ಪ್ರಸಾದದ ರೂಪದಲ್ಲಿ ನೈವೇದ್ಯ ನೀಡಿ ರಾಸುಗಳ ಹಬ್ಬವನ್ನು ಆಚರಿಸಲಾಯಿತು.ಪಟ್ಟಣ ಸೇರಿದಂತೆ ತಾಲೂಕಿನ ಬಾಬುರಾಯನಕೊಪ್ಪಲು, ಕೆ.ಶೆಟ್ಟಹಳ್ಳಿ, ಕಿರಂಗೂರು, ದರಸಗುಪ್ಪೆ, ಗಂಜಾಂ , ಮರಳಾಗಾಲ, ದೊಡ್ಡಪಾಳ್ಯ, ಮಂಡ್ಯಕೊಪ್ಪಲು, ಪಾಲಹಳ್ಳಿ, ಬೆಳಗೊಳ, ಅರಕೆರೆ, ಗೆಂಡೆಹೊಸಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ರಾಸುಗಳನ್ನು ಕಿಚ್ಚು ಹಾಯಿಸುವ ಪ್ರಕ್ರಿಯೆ ನೋಡುಗರ ಗಮನ ಸೆಳೆಯಿತು.
ಬೆಂಗಳೂರು-ಮೈಸೂರು ಹೆದ್ದಾರಿ, ಮೈಸೂರು- ಪಾಂಡವಪುರ ಹೆದ್ದಾರಿ, ಶ್ರೀರಂಗಪಟ್ಟಣ ಕೆಆರ್‌ಎಸ್ ಹೆದ್ದಾರಿ, ಶ್ರೀರಂಗಪಟ್ಟಣ ಬನ್ನೂರು ಹಾಗೂ ಮಂಡ್ಯ ಹೆದ್ದಾರಿಗಳಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸಲಾಯಿತು. ಕಿಚ್ಚು ಹಾಯಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಗ್ರಾಮಸ್ಥರು ಹಾಗೂ ನೆಂಟರಿಷ್ಟರು ರಾಸುಗಳ ಕಿಚ್ಚಿನ ಸಂಭ್ರಮವನ್ನು ವೀಕ್ಷಿಸಿ ಕಣ್ತುಂಬಿಕೊಂಡರು.ಶಿವಲಿಂಗದ ಮೇಲೆ ಸೂರ್ಯರಶ್ಮಿ ಸ್ಪರ್ಶಶ್ರೀರಂಗಪಟ್ಟಣ:
ಪಟ್ಟಣದ ಹೊರವಲಯದ ಚಂದ್ರವನ ಆಶ್ರಮ ಬಳಿಯ ಕಾಶಿ ಚಂದ್ರಮೌಳೇಶ್ವರ ದೇವಾಲಯದ ಶಿವಲಿಂಗದ ಮೇಲೆ ಪ್ರಥಮ ಸೂರ್ಯ ರಶ್ಮಿ ಸ್ಪರ್ಶಿಸಿತು.ಪ್ರತಿ ವರ್ಷದಂತೆ ಮಕರ ಸಂಕ್ರಾಂತಿಯಂದು ಸೂರ್ಯ ತನ್ನ ಪಥವನ್ನು ಬದಲಾಯಿಸುವುದರಿಂದ ಚಂದ್ರಮೌಳೇಶ್ವರ ಸ್ವಾಮಿ ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ಬೀಳುವುದನ್ನು ನೋಡಲು ಭಕ್ತರು ದೇವಾಲಯದ ಮುಂದೆ ಹಾಜರಿದ್ದರು.
ಈ ಬಾರಿ 7:15ಕ್ಕೆ ಮಕರ ಶುಭ ಲಗ್ನದಲ್ಲಿ ಸೂರ್ಯ ರಶ್ಮಿ ಶಿವಲಿಂಗದ ಮೇಲೆ ಸ್ಪರ್ಶವಾಯಿತು. ಸೂರ್ಯ ರಶ್ಮಿ ಸ್ಪರ್ಶದ ಬಳಿಕ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದವು.