ಗದಗ: ಜಿಲ್ಲಾದ್ಯಂತ ಮಾ.25ರ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಪರೀಕ್ಷಾ ಆಕ್ರಮ, ಅನಗತ್ಯ ಗೊಂದಲ, ಅನಾನೂಕೂಲತೆ ಉಂಟಾಗದಂತೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಿ ಸುಗಮ ಪರೀಕ್ಷೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ.ಎಂ. ಎಲ್ ಹೇಳಿದರು.
200 ಮೀಟರ್ ಸಮೀಪದ ಝರಾಕ್ಸ್ ಕೇಂದ್ರಗಳನ್ನು ಮುಚ್ಚಲಾಗಿದ್ದು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಹಾಗೂ ಇತರೆ ಬಾಹ್ಯ ವ್ಯಕ್ತಿಗಳು ಸುತ್ತಾಡದಂತೆ ನಿಗಾ ವಹಿಸಲು ಸಿಸಿ ಕ್ಯಾಮೇರಾ ಅಳವಡಿಸಲಾಗಿದೆ.ಈ ವರ್ಷ ಸಿಸಿ ಕ್ಯಾಮೆರಾಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪಾರದರ್ಶಕ ಹಾಗೂ ಶಿಸ್ತಿನಿಂದ ಪರೀಕ್ಷೆ ನಡೆಸಲು ಸಿಸಿ ಕ್ಯಾಮೆರಾ ನಿಗಾ ವ್ಯವಸ್ಥೆ ಮಾಡಲಾಗಿದೆ. ಹೋಳಿ ಹಬ್ಬದ ಹಿನ್ನೆಲೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಮಾಡದಂತೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅವಕಾಶ ಮಾಡಿಕೊಡಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.
ಪರೀಕ್ಷಾರ್ಥಿಗಳಿಗೆ ಬಸ್ ವ್ಯವಸ್ಥೆ:ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕರಾರ ಸಂಸ್ಥೆ ನಿಗಮವು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ದಿನಾಂಕಗಳಂದು ಮಾ. 25 ರಿಂದ ಏ.6ರ ವರೆಗೆ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು ತಮ್ಮ ವಾಸ ಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ಮತ್ತು ವಾಸ ಸ್ಥಳಕ್ಕೆ ಹಿಂದಿರುಗುವಾಗ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ನಿಗಮದ ನಗರ ಹೊರವಲಯ, ಸಾಮಾನ್ಯ ಹಾಗೂ ವೇಗಧೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯ 60 ಪರೀಕ್ಷಾ ಕೇಂದ್ರಗಳಲ್ಲಿ ಮಾ. 25 ರಿಂದ ಏ.6ರ ವರೆಗೆ ಬೆಳಗ್ಗೆ 9.30 ರಿಂದ ಮಧ್ಯಾಹ್ನ 2.30ರ ವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.
ಈ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಝೆರಾಕ್ಸ್ ಅಂಗಡಿ, ಬುಕ್‍ಸ್ಟಾಲ್, ಫೋಟೋ ಕಾಪಿಯರ್‌ಗಳನ್ನು ಬಂದ ಮಾಡಲು ಆದೇಶಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಮತ್ತು ಇತರೇ ಸಂಪರ್ಕ ಸಲಕರಣೆಗಳನು ತರುವುದನ್ನು ನಿಷೇಧಿಸಲಾಗಿದೆ.
ಗದಗ ಜಿಲ್ಲೆಯಲ್ಲಿ ಪರೀಕ್ಷಾ ಕಾರ್ಯವು ಸುಗಮವಾಗಿ ನಡೆಯಲು ಅಗತ್ಯವಿರುವ ಸಕಲ ಸಿದ್ಧತೆ ಜಿಲ್ಲಾಡಳಿತದಿಂದ ಮಾಡಲಾಗಿದೆ. ಪರೀಕ್ಷಾ ಅಕ್ರಮ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.