- ಕೊಪ್ಪಳ ನಗರದಾದ್ಯಂತ ಬಣ್ಣದ ಸಂಭ್ರಮ
- ರೇನ್ ಡ್ಯಾನ್ಸ್ ಮಾಡಿದ ಮಕ್ಕಳು- ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಭಾಗಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆ ಕೊಪ್ಪಳ ಸೇರಿದಂತೆ ಹಲವೆಡೆ ಒಂದು ದಿನ ಮೊದಲೇ ಹೋಳಿ ಹಬ್ಬವನ್ನು ಆಚರಣೆ ಮಾಡಿ, ಬಣ್ಣದಾಟ ಆಚರಿಸಿ ಸಂಭ್ರಮಿಸಲಾಯಿತು.ಬಣ್ಣದಾಟ ಸಾಮಾನ್ಯವಾಗಿ ಹೋಳಿ ಹುಣ್ಣಿಮೆ ಮರುದಿನ ಇರುತ್ತದೆ. ಆದರೆ, ಸೋಮವಾರ ಹುಣ್ಣಿಮೆ ಇದ್ದರೂ ಸಹ ಹೋಳಿಯನ್ನು ಭಾನುವಾರವೇ ಆಚರಿಸಲಾಯಿತು.
ಈ ಬಾರಿ ಬಣ್ಣ ಆಚರಣೆ ಮಾಡುವ ಸಂಬಂಧ ಸ್ಪಷ್ಟತೆ ಇರಲಿಲ್ಲ. ಶನಿವಾರವೇ ಹೋಳಿ ಕಾಮನನ್ನು ಸುಡಲಾಯಿತು ಮತ್ತು ಭಾನುವಾರ ಹೋಳಿ ಆಚರಣೆ ಮಾಡಿ, ಬಣ್ಣ ಆಡಲಾಯಿತು.ಆದರೆ, ಕೆಲವೊಂದು ಕಡೆ ಆಚರಣೆ ಮಾಡದೆ ಹುಣ್ಣಿಮೆ ಆಚರಣೆ ಮಾಡಿದರಾಯಿತು ಎಂದುಕೊಂಡಿದ್ದಾರೆ. ಹೀಗಾಗಿ, ಈ ವರ್ಷ ಹೋಳಿಹಬ್ಬ ಅಕ್ಷರಶಃ ಗೊಂದಲವಾಗಿದ್ದಂತು ನಿಜ.
ಕೊಪ್ಪಳದಲ್ಲಿ ಸಂಭ್ರಮ:ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿಯಂತೂ ಭಾನುವಾರ ಹೋಳಿಯ ಸಂಭ್ರಮ ಮುಗಿಲುಮುಟ್ಟಿತ್ತು. ಮಹಿಳೆಯರು, ಮಕ್ಕಳು ಎನ್ನದೇ ಎಲ್ಲರೂ ಒಗ್ಗೂಡಿ ಬಣ್ಣ ಎರಚಾಡಿ ಹೋಳಿ ಹಬ್ಬ ಆಚರಣೆ ಮಾಡಿದರು.ಹಲಗೆ ಬಡಿಯುತ್ತಾ ಹೆಜ್ಜೆ ಹಾಕಿದ ಯುವಕರ ಪಡೆ ಮನೆ ಮನೆಗೆ ಹೋಗಿ ಹೋಳಿಯ ನಿಮಿತ್ತ ಬಣ್ಣ ಎರಚಿ ಆಡುತ್ತಿರುವುದು ಕಂಡು ಬಂದಿತು.ಮಿತಿಮೀರಿದ ಬಿಸಿಲು:
ಈ ವರ್ಷ ಪ್ರತಿ ವರ್ಷಕ್ಕಿಂತ ಅಧಿಕ ಬಿಸಿಲು ಇದ್ದಿದ್ದರಿಂದ ಹೋಳಿಯಾಡುವವರು ಉಸಿರು ಬಿಡುವಂತೆ ಮಾಡಿತು. ಬೆಳಗ್ಗೆಯೇ ತಾಪಮಾನ ಏರಿದ್ದರಿಂದ ಜನರು ಬಣ್ಣದಾಟ ಆಡುವುದರ ಜೊತೆ ರೇನ್ ಡ್ಯಾನ್ಸ್ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದರು. ಮನೆಯ ಮುಂದಿನ ನಲ್ಲಿಯ ಮೂಲಕ ಕಾರಂಜಿಯಂತೆ ಮಾಡಿಕೊಂಡು ಬಿಸಿಲಿನ ತಾಪ ತಗ್ಗಿಸಿಕೊಳ್ಳುತ್ತಿರುವುದು ಕಂಡು ಬಂದಿತು. ಇನ್ನು ಕೆಲ ಮಕ್ಕಳು ಮನೆಯ ಮುಂದೆ ನಲ್ಲಿಯ ನೀರಿನಲ್ಲಿಯೇ ಆಡುತ್ತಿರುವುದು ಕಂಡು ಬಂದಿತು.ಬರದ ಬಿಸಿ:
ಬರ ಇರುವುದರಿಂದ ಹನಿ ನೀರಿಗು ತತ್ವಾರ ಎನ್ನುವಂತೆ ಆಗಿದೆ. ಹೀಗಾಗಿ, ಹೋಳಿ ಆಚರಣೆಗೆ ಬರದ ಬಿಸಿಯೂ ತಟ್ಟಿರುವುದು ಕಂಡು ಬಂದಿತು. ಸಾಮಾನ್ಯವಾಗಿ ಹೋಳಿ ಆಚರಣೆ ಬಳಿಕ ನದಿ, ಹಳ್ಳ, ಕೊಳ್ಳಗಳಿಗೆ ಹೋಗಿ ಸ್ನಾನ ಮಾಡುತ್ತಿದ್ದರು. ಆದರೆ, ಈ ವರ್ಷ ಬಹುತೇಕ ಹಳ್ಳಕೊಳ್ಳಗಳು ಬತ್ತಿ ಹೋಗಿರುವುದರಿಂದ ಟ್ಯಾಂಕರ್ ನೀರೇ ಗತಿ ಎನ್ನುವಂತೆ ಆಗಿತ್ತು.ಟ್ಯಾಂಕರ್ ನೀರಿನಲ್ಲಿ ಸ್ನಾನ ಮಾಡಿದರು, ಹಳ್ಳಕೊಳ್ಳಗಳಿಗೆ ಹೋಗುವುದನ್ನು ಕೈಬಿಟ್ಟು, ಮನೆಯಲ್ಲಿಯೇ ಸ್ನಾನ ಮಾಡಿರುವುದು ಕಂಡು ಬಂದಿತು.
ಹೋಳಿ ಹಬ್ಬದ ನಿಮಿತ್ತ ಕೊಪ್ಪಳ ನಗರದಲ್ಲಿ ನಡೆದ ಬಣ್ಣದಾಟದಲ್ಲಿ ಬಿಜೆಪಿ ನಿಯೋಜಿತ ಅಭ್ಯರ್ಥಿ ಡಾ. ಬಸವರಾಜ ಬಣ್ಣ ಆಡಿದ್ದು ವಿಶೇಷ. ಅಭಿಮಾನಿಗಳು ಅವರನ್ನು ಕರೆದುಕೊಂಡು ಬಂದು ಬಣ್ಣ ಆಡಿದರು.