ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಬಿಜೆಪಿ ಪಟ್ಟಿಯಲ್ಲಿ ಶೆಟ್ಟರ್ ಹೆಸರು ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು ಶೆಟ್ಟರ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶೆಟ್ಟರ್, ಬೆಳಗಾವಿ ಲೋಕಸಭಾ ಟಿಕೆಟ್ ನೀಡುವ ಮೂಲಕ ಹೆಚ್ಚಿನ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಯಡಿಯೂರಪ್ಪ, ವಿಜಯೇಂದ್ರ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅದರಲ್ಲೂ ವಿಶೇಷವಾಗಿ ಬೆಳಗಾವಿ ಮುಖಂಡರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಅವರ ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನ ಮಾಡುವೆ. ಸುರೇಶ್ ಅಂಗಡಿ ಅವರು ರೈಲ್ವೆ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುವೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನೂ ಕೂಡಿಸಿಕೊಂಡು ಬೆಳಗಾವಿ ಅಭಿವೃದ್ಧಿ ಮಾಡಬೇಕಿದೆ. ನನಗೆ ಇನ್ನೂ ಹುಮ್ಮಸ್ಸು ಬಂದಿದೆ ಎಂದರು.ನಾನು ಬೆಳಗಾವಿ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಬೆಳಗಾವಿಯಲ್ಲಿ ಯಾವುದೇ ವಿರುದ್ಧ ವಾತಾವರಣ ಇದ್ದರೂ ಅದನ್ನು ಶಮನ ಮಾಡುತ್ತೇನೆ. ಲೋಕಸಭಾ ಚುನಾವಣೆ ಹೊಸದಿರಬಹುದು. ಆದರೆ, ಅಪಾರ ರಾಜಕೀಯ ಅನುಭವ ಇದೆ. ಯಾವುದೇ ಪದವಿಗೆ, ಸಚಿವ ಸ್ಥಾನಕ್ಕೆ ಆಸೆ ಪಡುವುದಿಲ್ಲ. ತಾನಾಗಿಯೇ ಒಲಿದು ಬರಬೇಕು ಎಂದರು.
ಹಣದ ಮೇಲೆ ಚುನಾವಣೆ ನಡೆಯುವುದಿಲ್ಲ. ಇದು ರಾಷ್ಟ್ರೀಯ ಚುನಾವಣೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಚುನಾವಣೆ ನಡೆಯುತ್ತಿದೆ ಎಂದರು.