ಕನ್ನಡಪ್ರಭ ವಾರ್ತೆ ಕೊಲ್ಹಾರ
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಹಸೀಲ್ದಾರ್ ಎಸ್.ಎಸ್.ನಾಯಕಲಮಠ ಹೇಳಿದರು.ಇಲ್ಲಿನ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಗುರುವಾರ 75ನೇ ಗಣರಾಜ್ಯೋತ್ಸವ ಆಚರಣೆಯ ನಿಮಿತ್ತ ತಹಸೀಲ್ದಾರ್ ಎಸ್.ಎಸ್.ನಾಯಕಲಮಠ ನೇತೃತ್ವದಲ್ಲಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜ.26 ರಂದು ಬೆಳಗ್ಗೆ 9 ಗಂಟೆಗೆ ತಾಲೂಕಾಡಳಿತದಿಂದ ಹಮ್ಮಿಕೊಂಡ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮ ಜರಗುವುದು. ನಂತರ ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ಜರಗುವುದು. ಆಯ್ದು 5 ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುವವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲೂಕಿನ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು .ಪಟ್ಟಣದ ಸಂಗಮೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಕಾರ್ಯಕ್ರಮ ನಿರ್ವಹಣೆ ಮಾಡಲು ಸೂಚಿಸಿದರು. ಶಾಮಿಯಾನ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಕ್ಕಳಿಗೆ ಬಾಳೆಹಣ್ಣು ವಿತರಿಸಲು ತೀರ್ಮಾನಿಸಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು. ಒಂದು ವೇಳೆ ಗೈರಾದಲ್ಲಿ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ ಚಲವಾದಿ, ತಾಲೂಕು ವೈದ್ಯಾಧಿಕಾರಿ ಲಕ್ಷ್ಮೀ ತೆಲ್ಲೂರ, ಪಟ್ಟಣ ಪಂಚಾಯತಿ ಸದಸ್ಯರಾದ ಚನಮಲ್ಲಪ್ಪ ಗಿಡ್ಡಪ್ಪಗೋಳ, ವಿಜಯ ಮಹಾಂತೇಶ ಗಿಡ್ಡಪ್ಪಗೋಳ, ಬಾಬು ಭಜಂತ್ರಿ, ಶ್ರೀಶೈಲ ಮುಳವಾಡ,ಅಪ್ಪಾಸಿ ಮಟ್ಯಾಳ, ಮುಖಂಡರಾದ ಉಸ್ಮಾನ ಪಟೇಲ ಖಾನ್ನವರ, ಬನಪ್ಪ ಬಾಲಗೊಂಡ, ಅಶೋಕ ಜಿಡ್ಡಿಬಾಗಿಲು ಸೇರಿದಂತೆ ಪಪಂ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಶಾಲೆಗಳ ಮುಖ್ಯ ಗುರುಗಳು ಹಾಗೂ ದೈಹಿಕ ಶಿಕ್ಷಕರು ಇದ್ದರು.