ಕನ್ನಡಪ್ರಭ ವಾರ್ತೆ ಬೀದರ್
ಜೀವನೋಪಾಯದ ಸುಭದ್ರತೆಗಾಗಿ ಪಶುಸಂಗೋಪನೆ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕೆಂದು ತೆಲಂಗಾಣದ ಪಟಂಚೇರುನಲ್ಲಿರುವ ಇಕ್ರಿಸ್ಯಾಟ್‌ನ ಪ್ರಧಾನ ವಿಜ್ಞಾನಿ ಮತ್ತು ಕಾರ್ಯತಂತ್ರದ ಸಲಹೆಗಾರರಾದ ಡಾ. ಶ್ರೀನಾಥ ದಿಕ್ಷಿತ್ ಕರೆ ನೀಡಿದರು.ನಗರದ ನಂದಿ ನಗರದಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಇದರ 19ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಸಿ.ವೀರಣ್ಣ ಮಾತನಾಡಿ, ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ಹೆಚ್ಚು ಒತ್ತು ಕೊಡುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಶಿವಮೊಗ್ಗ ಕಾಲೇಜಿನ ಡಾ. ಎನ್.ಬಿ. ಶ್ರೀಧರಗೆ ನೀಡಿ ಸನ್ಮಾನಿಸಲಾಯಿತು. ಅತ್ಯುತ್ತಮ ಶಿಕ್ಷಕೇತರ ಸಿಬ್ಬಂದಿ ಪ್ರಶಸ್ತಿಯನ್ನು ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ಟೆಲಿಫೋನ್ ಆಪರೇಟರ್ ಪ್ರಭಾಕರ್ ಎಸ್.ವಿ. ಇವರಿಗೆ ಪ್ರದಾನ ಮಾಡಲಾಯಿತು.
ಅತ್ಯುತ್ತಮ ಕೃಷಿಕ ಪ್ರಶಸ್ತಿಯನ್ನು ಚಿದ್ರಿ ಗ್ರಾಮದ ಸಂತೋಷ ಉಮಾಕಾಂತ ಪಾಟೀಲ್‌ಗೆ ನೀಡಿದರೆ, ಅತ್ಯುತ್ತಮ ಕೃಷಿಕ ಮಹಿಳೆ ಪ್ರಶಸ್ತಿಯನ್ನು ಖಾಶೆಂಪೂರ ಗ್ರಾಮದ ಗೀತಾ ಮಾರುತಿ ಖಾಶೆಂಪೂರ ಅವರಿಗೆ ನೀಡಿ ಗೌರವಿಸಲಾಯಿತು.ಬಾಹ್ಯ ಸಂಸ್ಥೆಗಳಿಂದ ಪಡೆದ ಅನುದಾನಕ್ಕಾಗಿ ಹಾಗೂ ಅವರ ಗಮನಾರ್ಹ ಕೊಡುಗೆ ಗುರುತಿಸಿ ವಿಶ್ವವಿದ್ಯಾಲಯದ ಒಟ್ಟು 8 ಪ್ರಧಾನ ಸಂಶೋಧಕರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ರೈತರು ಮತ್ತು ಪಶುವೈದ್ಯಾಧಿಕಾರಿಗಳಿಗಾಗಿ ಬರಗಾಲ ನಿರ್ವಹಣೆ ಕುರಿತು ಎರಡು ದಿನಗಳ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನ ಜರುಗಿತು.
ಈ ಸಂದರ್ಭದಲ್ಲಿ ಜಿಲಾಧಿಕಾರಿ ಗೋವಿಂದ ರೆಡ್ಡಿ, ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಸದಸ್ಯರಾದ ಭೋಜ್ಯಾನಾಯ್ಕ್, ವಸಂತ ಬಿರಾದಾರ, ಲತಾ, ಡಿಎಚ್. ಮತ್ತು ಡಾ. ವೆಂಕಟಾಚಲ, ವಿ.ಎಸ್. ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ಅಧಿಕಾರಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಅಹ್ವಾನಿತರು ಹಾಗೂ ರೈತ ಬಾಂಧವರು ಭಾಗವಹಿಸಿದರು.