ಚಿತ್ರದುರ್ಗ: ಜೀವನದಲ್ಲಿ ಯಾರು ಎಷ್ಟೆ ಉನ್ನತ ಹುದ್ದೆ ಪಡೆದುಕೊಂಡರೂ ಅದರ ಹಿಂದೆ ಶಿಕ್ಷಕರ ಮಾರ್ಗದರ್ಶನ, ಪರಿಶ್ರಮವಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದರು.
ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಮತ್ತು ತಾಲೂಕು ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ಕ್ಲಬ್ ಸಹಯೋಗದಲ್ಲಿ ತರಾಸು ರಂಗಮಂದಿರದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ್ದದ್ದು, ಮಕ್ಕಳಿಗೆ ಪಾಠ ಹೇಳಿಕೊಡುವ ಜೊತೆಗೆ ಶಿಕ್ಷಕರು ಕೆಲವೊಮ್ಮೆ ಅನೇಕ ಜವಾಬ್ದಾರಿವಹಿಸಲಾಗುತ್ತದೆ. ಹಾಗಾಗಿ ಒತ್ತಡದ ನಡುವೆ ಶಿಕ್ಷಕರುಗಳು ಕೆಲಸ ಮಾಡಬೇಕಾಗುತ್ತದೆ. ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ನಿರ್ಮಿಸಿ ಸದೃಢ ಸಮಾಜ ಕಟ್ಟುವ ಹೊಣೆಗಾರಿಕೆಯೂ ನಿಮ್ಮ ಮೇಲಿದೆ ಎಂದು ತಿಳಿಸಿದರು.
2022-23ನೇ ಸಾಲಿನಲ್ಲಿ ಚಿತ್ರದುರ್ಗ ಜಿಲ್ಲೆ ಹತ್ತನೆ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿ ಕೀರ್ತಿ ತಂದಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ ಅವರಲ್ಲಿ ಬದ್ಧತೆಯಿದೆ. ಮಕ್ಕಳ ಹಿತದೃಷ್ಟಿಯಿಂದ ಒಮ್ಮೆ ನಡುರಾತ್ರಿ 12 ಗಂಟೆಯಲ್ಲಿ ಮನೆಗೆ ಬಂದು ಕಡತಕ್ಕೆ ಸಹಿ ಮಾಡಿಸಿಕೊಂಡು ಹೋದರು ಎನ್ನುವುದನ್ನು ನೆನಪಿಸಿಕೊಂಡು ಅವರ ಬದ್ಧತೆ ಬಗ್ಗೆ ಹೆಮ್ಮೆ ಸೂಚಿಸಿದರು.ವಿಜ್ಞಾನ ಶೈಕ್ಷಣಿಕ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಉಪನ್ಯಾಸ ಗಮನಕೊಟ್ಟು ಕೇಳಿ, ನಿಮ್ಮಲ್ಲಿ ಏನಾದರು ಗೊಂದಲಗಳಿದ್ದರೆ ಪರಿಹರಿಸಿಕೊಂಡು ವಿಜ್ಞಾನ ಸರಳೀಕರಣಗೊಳಿಸಿಕೊಂಡು ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಬೋಧಿಸಿ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕ ರೆಡ್ಡಿ ಮಾತನಾಡಿ, ಅಧಿಕಾರವಧಿಯಲ್ಲಿ ಶಿಕ್ಷಕರ ಯಾವುದೇ ಸಮಸ್ಯೆಗಳಿದ್ದರು ಸ್ಪಂದಿಸಿರುವೆ. ಶಿಕ್ಷಕ ಸಮುದಾಯದಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆನ್ನುವುದು ನನ್ನ ಉದ್ದೇಶ. ಕಳೆದ ಸಾಲಿನಲ್ಲಿ ಜಿಲ್ಲೆ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿರುವುದರ ಹಿಂದೆ ಅನೇಕ ಅಧಿಕಾರಿಗಳ ಹಾಗೂ ಶಿಕ್ಷಕರ ಶ್ರಮವಿದೆ ಎಂದರು.ಶಿಕ್ಷಣಾಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ, ಸಿದ್ದಪ್ಪ, ವಿಷಯ ಪರಿವೀಕ್ಷಕ ಗೋವಿಂದಪ್ಪ, ಸವಿತ, ಚಂದ್ರಣ್ಣ, ಬಸವರಾಜ್ ಓಲೇಕಾರ್, ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಭಟ್, ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ನಾಗೇಂದ್ರಪ್ಪ, ಚಿತ್ರದುರ್ಗ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ಜಿಲ್ಲಾ ವಿಜ್ಞಾನ ಶಿಕ್ಷಕರ ಕ್ಲಬ್ ಅಧ್ಯಕ್ಷ ಬಿ.ವಿ.ನಾಥ ವೇದಿಕೆಯಲ್ಲಿದ್ದರು.
ಶಿಕ್ಷಕ ಡಾ.ಕೆ.ಮಹೇಶ್ ಸೇರಿದಂತೆ ಜಿಲ್ಲೆಯ ವಿಜ್ಞಾನ ಶಿಕ್ಷಕರುಗಳು ಶೈಕ್ಷಣಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.ಕಳೆದ ಸಾಲಿನಲ್ಲಿ ಹತ್ತನೆ ತರಗತಿ ಪರೀಕ್ಷೆ ವಿಜ್ಞಾನದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳು, ಪಿಎಚ್‌ಡಿ ಪಡೆದಿರುವ ವಿಜ್ಞಾನ ಸಹ ಶಿಕ್ಷಕರು, ರಾಜ್ಯ ಮತ್ತು ಜಿಲ್ಲಾ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ವಿಜ್ಞಾನ ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು.