ಇಂದಿನಿಂದ ಶಿರಿಡಿ ಸಾಯಿ ಸೇವಾ ಸತ್ಸಂಗ್ ಟ್ರಸ್ಟ್‌ನ ವಾರ್ಷಿಕೋತ್ಸವ

KannadaprabhaNewsNetwork | Published : Jan 19, 2024 1:49 AM

ಸಾರಾಂಶ

ಸತ್ಸಂಗ್‌ ಟ್ರಸ್ಟ್‌ನ ವಾರ್ಷಿಕೋತ್ಸವ ಅಂಗವಾಗಿ ಜ. 19ರಂದು ಬೆಳಗ್ಗೆ 8 ಗಂಟೆಗೆ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿದೆ

ಬಳ್ಳಾರಿ: ಶ್ರೀ ಶಿರಿಡಿ ಸಾಯಿ ಸೇವಾ ಸತ್ಸಂಗ್ ಟ್ರಸ್ಟ್‌ನ 23ನೇ ವರ್ಷದ ಸತ್ಸಂಗ್ ವಾರ್ಷಿಕೋತ್ಸವ ಸಮಾರಂಭ ಜ. 19ರಿಂದ 3 ದಿನಗಳ ಕಾಲ ನಗರದ ಬಾಲಾಜಿರಾವ್ ರಸ್ತೆಯಲ್ಲಿರುವ ಬಲಿಜ ಭವನ ಕಲ್ಯಾಣಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಆರ್‌. ಗೋಪಾಲಕೃಷ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಸಂಗ್‌ ಟ್ರಸ್ಟ್‌ನ ವಾರ್ಷಿಕೋತ್ಸವ ಅಂಗವಾಗಿ ಜ. 19ರಂದು ಬೆಳಗ್ಗೆ 8 ಗಂಟೆಗೆ ನೇತ್ರ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ವೈಜ್ಯ ಎಜ್ಯುಕೇಷನ್ ಫಂಡ್‌ನ ಕಾರ್ಯದರ್ಶಿ ಪತ್ತಿ ಗೋಪಾಲಕೃಷ್ಣ ಅವರು ಉದ್ಘಾಟಿಸುವರು. ನೇತ್ರತಜ್ಞ ಡಾ. ವಿಜಯಕುಮಾರ್ ಹಾಗೂ ವೈದ್ಯಕೀಯ ತಂಡದವರು ಕಣ್ಣಿನ ತಪಾಸಣೆ ನಡೆಸುವರು.

ಜ. 20ರಂದು ಬೆಳಗ್ಗೆ 8 ಗಂಟೆಗೆ ಉಚಿತ ಸಾಮೂಹಿಕ ಶ್ರೀಸಾಯಿ ವ್ರತ, ಸಾಯಿಬಾಬಾ ಮೂರ್ತಿಗೆ ಕ್ಷೀರಾಭಿಷೇಕ, ಮಹಾಮಂಗಳಾರತಿ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ. ಸಂಜೆ 6 ಗಂಟೆಗೆ ಸತ್ಸಂಗ್ ಟ್ರಸ್ಟ್‌ನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ನೃತ್ಯಪ್ರದರ್ಶನ ಇರಲಿದೆ. ಜ. 21ರಂದು ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಹಾರಿಕಾ ಮಂಜುನಾಥ ಅವರಿಂದ ಅಯೋಧ್ಯೆ ರಾಮಮಂದಿರ ಮತ್ತು ಸ್ವಾಮಿ ವಿವೇಕಾನಂದರ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಮಾಜಿ ಸಂಸದ ಕೆ.ಸಿ. ಕೊಂಡಯ್ಯ, ಡಾ. ಎಸ್‌.ಜೆ. ವೆಂಕಟ ಮಹಿಪಾಲ್‌ ಹಾಗೂ ಮಾಜಿ ಬುಡಾ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಂಜೆ 6 ಗಂಟೆಗೆ ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಶ್ರೀರಾಮ ಪೂಜಾ ಹಾಗೂ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ ಎಂದರು. ಬಡಜನರ ಅನುಕೂಲಕ್ಕಾಗಿ ಪ್ರತಿ ಭಾನುವಾರ ಸತ್ಸಂಗ್‌ ಟ್ರಸ್ಟ್‌ ಕಚೇರಿ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ಬೆಳಗ್ಗೆ 10.30ರಿಂದ 12.30ರ ವರೆಗೆ ನುರಿತ ವೈದ್ಯರು ಆರೋಗ್ಯ ತಪಾಸಣೆ ಮಾಡುವರು ಎಂದರು.

ಟ್ರಸ್ಟ್‌ನ ಉಪಾಧ್ಯಕ್ಷ ಡಿ. ಶ್ರೀನಿವಾಸ್, ಉಪಾಧ್ಯಕ್ಷ ಕೆ.ಎಚ್. ರಮೇಶ್, ಕಾರ್ಯದರ್ಶಿ ಎಂ. ಅಶ್ವತ್ಥ ನಾರಾಯಣ, ಸಹ ಕಾರ್ಯದರ್ಶಿ ಕಂಡಯ್ಯ, ಎಂ. ರಮೇಶ್‌, ಕೆ. ಗೋವಿಂದರಾಜುಲು, ಜೆ. ಕಿಶೋರ್ ಕುಮಾರ್, ಆರ್‌. ದತ್ತಾತ್ರೇಯ, ಸೋಂತ ಗಿರಿಧರ್ ಹಾಗೂ ಟ್ರಸ್ಟ್‌ನ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

Share this article