6384 ಪೊಲೀಸರಿಂದ ಬಿಗಿ ಬಂದೋಬಸ್ತ್

KannadaprabhaNewsNetwork |  
Published : Sep 20, 2025, 01:00 AM IST
2 | Kannada Prabha

ಸಾರಾಂಶ

11 ದಿನದಲ್ಲಿ 15 ಹೆಚ್ಚು ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ, 6384 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಈ ಬಾರಿಯ ದಸರಾ ಮಹೋತ್ಸವ ಭದ್ರತೆಗಾಗಿ 6384 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.

ದಸರಾಗೆ ನಗರ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದೆ.

11 ದಿನದಲ್ಲಿ 15 ಹೆಚ್ಚು ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ, 6384 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೆಎಸ್ಆರ್ ಪಿ 35 ತುಕಡಿ, ಸಿಎಆರ್, ಡಿಎಆರ್ 15 ತುಕಡಿ, ಎಎಸ್ಸಿ ತಂಡ 29, ಗರುಡ ಫೋರ್ಸ್ 1, ಆರ್ ಎಎಫ್ ಪಡೆ 1, ಗೃಹರಕ್ಷಕರು 1200 ಸಿಬ್ಬಂದಿ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದರು.

ದಸರಾ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಅವಶ್ಯಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಸೆ. 22 ರಿಂದ 29 ರವರೆಗೆ 1ನೇ ಹಂತ ಹಾಗೂ ಸೆ.30 ರಿಂದ ಅ.2 ರವರಗೆ 2ನೇ ಹಂತದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ, ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ದಸರಾ ವಸ್ತುಪ್ರದರ್ಶನ, ಕುಸ್ತಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಪುಸ್ತಕ ಮೇಳ ದೀಪಾಲಂಕಾರ, ಯುವ ದಸರಾ, ಏರ್ ಶೋ, ಜಂಬೂಸವಾರಿ ಮೆರವಣಿಗೆ, ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ನಡೆಯುವ ಇತರೆ ಕಾರ್ಯಕ್ರಮಗಳ ಬಂದೋಬಸ್ತ್ ಹಾಗೂ ಸುಗಮ ಸಂಚಾರ ವ್ಯವಸ್ಥೆ ಸೇರಿದಂತೆ ನಗರ ಸೇರಿದಂತೆ ಹೊರ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳು ನಡೆಯುವ ಸ್ಥಳಗಳು ಸೇರಿದಂತೆ ಜಂಬೂಸವಾರಿ ದಿನ ಅರಮನೆ, ಜಂಬೂ ಸವಾರಿ ಮಾರ್ಗದ ಪ್ರಮುಖ ಸ್ಥಳಗಳು, ಬನ್ನಿಮಂಟಪದ ಮೈದಾನದ ಆವರಣ ಮತ್ತು ಹೊರಭಾಗದ ಗೇಟ್‌ ಗಳು ಹಾಗೂ ಇತರೇ ಪ್ರಮುಖ ಸ್ಥಳಗಳಲ್ಲಿ 26 ಆಂಬುಲೆನ್ಸ್ ಮತ್ತು 32 ಅಗ್ನಿ ಶಾಮಕ ದಳಗಳನ್ನು ನಿಯೋಜಿಸಲಾಗಿದೆ ಎಂದರು.

ವಾಚ್ ಟವರ್ ವ್ಯವಸ್ಥೆ

ದಸರಾ ಸಮಯದಲ್ಲಿ ಸಂಚಾರ ನಿಯಂತ್ರಣ ಸಂಚಾರ ವಿಭಾಗದಿಂದ ಸೆ.22 ರಿಂದ ಅ.1 ರವರಗೆ ನಗರದ ಎಲ್ಲಾ ಪ್ರಮುಖ ಜಂಕ್ಷನ್ ಗಳು ಹಾಗೂ ಪ್ರವಾಸಿ ಸ್ಥಳಗಳಲ್ಲಿ 43 ಸಂಚಾರ ಮಾಹಿತಿ ವಾಚ್ ಟವರ್ ವ್ಯವಸ್ಥೆಯೊಂದಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.

ಅ.2 ರಂದು ಜಂಬೂಸವಾರಿ ದಿನ ಜನಸಂದಣಿ ನಿಯಂತ್ರಣ ಹಾಗೂ ಸಾರ್ವಜನಿಕರಿಗೆ ಸೂಚನೆ ನೀಡಲು ಅರಮನೆಯ ಎಲ್ಲಾ ದ್ವಾರಗಳು, ಜಂಬೂಸವಾರಿ ಮಾರ್ಗದಲ್ಲಿ ಕೆ.ಆರ್. ವೃತ್ತ, ಆರ್ಯುವೇದಿಕ್ ವೃತ್ತ, ಆರ್.ಎಂ.ಸಿ ಸರ್ಕಲ್, ಹೈವೇ ಸರ್ಕಲ್, ಬನ್ನಿಮಂಟಪ ಮೈದಾನದ ಎಲ್ಲಾ ದ್ವಾರಗಳು ಹಾಗೂ ಇತರೆ ಪ್ರಮುಖ ಸ್ಥಳಗಳಲ್ಲಿ 33 ಸಾರ್ವಜನಿಕ ಮಾಹಿತಿ ಕೇಂದ್ರ ತೆರದು ಸಿವಿಲ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ದಸರಾ ಮತ್ತು ಪ್ರವಾಸಿ ಮಾಹಿತಿ ನೀಡಲು ಹಾಗೂ ಅಗತ್ಯವಿರುವವರಿಗೆ ಪೊಲೀಸ್ ಸಹಾಯ ನೀಡಲು 2 ಹಂತಗಳಲ್ಲಿ ಪೊಲೀಸ್ ಸಹಾಯ ಕೇಂದ್ರಗಳನ್ನು ನಗರದ ಪ್ರಮುಖ ಸ್ಥಳಗಳಲ್ಲಿ ತೆರೆಯಲಾಗುವುದು. ಸೆ.22 ರಿಂದ ಅ.1 ರವರೆಗೆ ಮೊದಲ ಹಂತದಲ್ಲಿ 12 ಹಾಗೂ ಎರಡನೇ ಹಂತದಲ್ಲಿ ಅ.2 ರಂದು 10 ಸಹಾಯ ಕೇಂದ್ರಗಳಲ್ಲಿ

ಸಿಬ್ಬಂದಿ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ದಸರಾ ಕಾರ್ಯಕ್ರಮಗಳು, ಸಂಚಾರ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ವಿವರಿಸಿದರು.

ಸಾರ್ವಜನಿಕರು ತಮ್ಮ ಸುರಕ್ಷತೆ ಮತ್ತು ಭದ್ರತೆಗಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿವುಳ್ಳ ಕಿರು ಹೊತ್ತಿಗೆಯನ್ನು ಸಾರ್ವಜನಿಕರಿಗೆ ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ವಾಹನ ಸಂಚಾರ ನಿರ್ಬಂಧ

ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಅರಮನೆ ಸುತ್ತಮುತ್ತ ರಸ್ತೆಗಳು ಹಾಗೂ ಇತರೇ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಸದರಿ ರಸ್ತೆಗಳ ಬದಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿಷೇಧಿಸಲಾಗಿದೆ.

ಕೆ.ಎಸ್.ಆರ್.ಟಿ.ಸಿ. ಗ್ರಾಮಾಂತರ ಬಸ್‌ ಗಳು. ನಗರ ಸಾರಿಗೆ ಬಸ್ ಗಳು, ಖಾಸಗಿ ಬಸ್‌ಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ದಸರಾ ಸಂಬಂಧ ನಡೆಯುವ ವಿವಿಧ ಕಾರ್ಯಕ್ರಮಗಳ ಸ್ಥಳದ ಬಳಿಯೇ ಸಾಧ್ಯವಾದಷ್ಟು ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅ.2 ರಂದು ಬಸ್ ಗಳಿಗೆ ನಗರದ ಹೊರ ಭಾಗದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್ ಇದ್ದರು.

----

ಬಾಕ್ಸ್...

ಡ್ರೋಣ್, ಸಿಸಿಟಿವಿ ಕ್ಯಾಮರಾಗಳ ಕಣ್ಗಾವಲು

ಪ್ರಮುಖ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಡ್ರೋಣ್ ಕ್ಯಾಮರಾಗಳಿಂದ ಕಣ್ಗಾವಲು ಇಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.

ಈಗಾಗಲೇ ಅಳವಡಿಸಿರುವ ಕಾಯಂ ಸಿಸಿಟಿವಿ ಕ್ಯಾಮರಾಗಳು ಮತ್ತು ಕರ್ನಾಟಕ ಪಬ್ಲಿಕ್ ಸೇಫ್ಟಿ (ಮೆಜರ್ಸ್) ಎನ್‌ ಫೋರ್ಸ್‌ ಮೆಂಟ್ ಆಕ್ಟ್-2017 ಅಡಿ ನಗರದ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರು ಅಳವಡಿಸಿಕೊಂಡಿರುವ ಸುಮಾರು 30614 ಸಿಸಿಟಿವಿ ಕ್ಯಾಮರಾಗಳು ಸೇರಿದಂತೆ ದಸರಾ ಸಮಯದಲ್ಲಿ ಹೆಚ್ಚುವರಿಯಾಗಿ ಮೈಸೂರು ಅರಮನೆ, ಬನ್ನಿಮಂಟಪ ಮೈದಾನ, ಮೆರವಣಿಗೆ ಮಾರ್ಗ ಮತ್ತು ಇತರೇ ಪ್ರಮುಖ ಸ್ಥಳಗಳಲ್ಲಿ ಒಟ್ಟು 200 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದರು.

ನಗರದ ಲಾಡ್ಜ್‌ ಗಳನ್ನು ಅನಿರೀಕ್ಷಿತ ತಪಾಸಣೆ ನಡೆಸಿ ಅನುಮಾನ್ಪದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗುತ್ತದೆ. ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ದಿನದ 24 ಗಂಟೆಯು ನುರಿತ ಅಪರಾಧ ವಿಭಾಗದ ಸಿಬ್ಬಂದಿ ಗಸ್ತಿನಲ್ಲಿದ್ದು, ಅನುಮಾನ್ಪದ ವ್ಯಕ್ತಿಗಳನ್ನು ವಿಚಾರಣೆ ಮಾಡಲಾಗುತ್ತದೆ. ದಸರಾ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಕ್ಷಣ ಪೊಲೀಸ್ ವ್ಯವಸ್ಥೆ ಸ್ಥಳಕ್ಕೆ ತೆರಳಲು ಗಸ್ತು ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ರೌಡಿ ಪರೇಡ್ ಮಾಡಿ, ರೌಡಿಗಳಿಗೆ ದಸರಾ ವೇಳೆ ಯಾವುದೇ ಅಹಿತಕರ ಚಟುವಟಿಕೆಯಲ್ಲಿ ತೊಡಗದಂತೆ ಕಟ್ಟೆಚ್ಚರಿಕೆ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸಭೆ ನಡೆಸಿ ದಸರಾ ಸಮಯದಲ್ಲಿ ವೈದ್ಯರು, ಸಿಬ್ಬಂದಿ, ವೈಧ್ಯಕೀಯ ಸೌಲಭ್ಯಗಳು ಲಭ್ಯವಿರುವಂತೆ ಹಾಗೂ ತುರ್ತು ಪರಿಸ್ಥಿತಿಗಳಿಗೆ ಹಾಸಿಗೆಗಳನ್ನು ಕಾಯ್ದಿರಿಸುವಂತೆ ಸೂಚಿಸಲಾಗಿದೆ ಎಂದರು.

ಜಂಬೂಸವಾರಿ ತೆರಳುವ ಮಾರ್ಗದ ರಸ್ತೆಯ ಎರಡೂ ಕಡೆಗಳಲ್ಲಿ ಹಳೆಯ ಕಟ್ಟಡಗಳು, ನಿರ್ಮಾಣ ಹಂತದ ಕಟ್ಟಡಗಳು, ಶಿಥಿಲ ಕಟ್ಟಡಗಳನ್ನು ಗುರ್ತಿಸಿದ್ದು, ಈ ಕಟ್ಟಡಗಳ ಮೇಲೆ ಹತ್ತಿ ಜಂಬೂಸವಾರಿ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡದಂತೆ ಸಂಬಂಧಪಟ್ಟ ಕಟ್ಟಡಗಳ ಮಾಲೀಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

----

ಕೋಟ್...

ದಸರಾ ಮಹೋತ್ಸವದ ಬಗ್ಗೆ ಮತ್ತು ಇತರೇ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸಾರ್ವಜನಿಕರಲ್ಲಿ ಆಂತಕ ಸೃಷ್ಠಿಸುವವರ ಮೇಲೆ ನಿಗಾ ವಹಿಸಲು ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ ಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದ್ದು, ಈ ರೀತಿಯ ಕೃತ್ಯಗಳನ್ನು ಎಸಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ