ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಗೆ ಸಕಲ ಸಿದ್ಧತೆ

KannadaprabhaNewsNetwork | Published : Oct 29, 2024 1:05 AM

ಸಾರಾಂಶ

ಮಲೆ ಮಹದೇಶ್ವರ ಬೆಟ್ಟದಲ್ಲಿ ಅ.29 ರಿಂದ ನ.2 ರವರೆಗೆ 5 ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ ಜರುಗಲಿದ್ದು, ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಹನೂರು ಜಿ ದೇವರಾಜ ನಾಯ್ಡು

ಮಲೆ ಮಹದೇಶ್ವರ ಬೆಟ್ಟದಲ್ಲಿ ಅ.29 ರಿಂದ ನ.2 ರವರೆಗೆ 5 ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ ಜರುಗಲಿದ್ದು, ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ದೀಪಾವಳಿ ಜಾತ್ರಾ ಮಹೋತ್ಸವ ಅ.29ರಿಂದ ಪ್ರಾರಂಭವಾಗಲಿದ್ದು, ಅಂದು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. 30ರಂದು ದೀಪಾವಳಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಎಣ್ಣೆ ಮಜ್ಜನ ಸೇವೆ ವಿವಿಧ ಉತ್ಸವಗಳು ನಡೆಯಲಿದೆ. 31ರಂದು ಸ್ವಾಮಿಗೆ ವಿಶೇಷ ಸೇವೆ ಉತ್ಸವಗಳು ನಡೆಯಲಿದ್ದು, ನ.1 ಅಮಾವಾಸ್ಯೆ ವಿಶೇಷ ಪೂಜೆ ಹಾಗೂ ಉತ್ಸವಗಳು ಜರುಗಲಿದೆ. ನ.2 ರಂದು ಬೆಳಗ್ಗೆ ಮಹಾರಥೋತ್ಸವ ಜರುಗಲಿದ್ದು ಅದೇ ದಿನ ರಾತ್ರಿ ಅಭಿಷೇಕದ ಪೂಜೆ ಮುಗಿದ ನಂತರ ಕೊಂಡೋತ್ಸವ ಜರುಗಲಿದೆ.

ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರಿಗೆ ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದ ಮಾರ್ಗ ಮಧ್ಯ10 ಕಡೆ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಬೆಟ್ಟದ ಎರಡು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಜನರಿಗೆ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ದಾಸೋಹ ಭವನದಲ್ಲಿ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದ್ದು ಒಂದು ಬಾರಿಗೆ 1.5 ಸಾವಿರ ಜನರು ಪ್ರಸಾದ ಸ್ವೀಕರಿಸಬಹುದಾಗಿದೆ. ಇದಲ್ಲದೆ ಹಳೆ ದಾಸೋಹ ಭವನದ ಬಳಿ ವಿಶೇಷ ದಾಸೋಹ ಕೇಂದ್ರ ತೆರೆದು ದಿನದ 24 ಗಂಟೆಯೂ ದಾಸೋಹ ಏರ್ಪಡಿಸಲಾಗುತ್ತದೆ.

ಶ್ರೀಗಳಿಂದ ರಥೋತ್ಸವ ಸಿದ್ಧತೆಗೆ ಚಾಲನೆ:

ಮ.ಬೆಟ್ಟದಲ್ಲಿ ನ.2ರಂದು ನಡೆಯುವ ಮಹಾರಥೋತ್ಸವಕ್ಕೆ ರಥ ಕಟ್ಟುವ ಕಾರ್ಯಕ್ರಮಕ್ಕೆ ಸಾಲೂರು ಶ್ರೀ ವಿಶೇಷ ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ಇದೇ ವೇಳೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಮತ್ತು ಬೇಡಗಂಪಣ ಸರದಿ ಅರ್ಚಕರ ತಂಡದ ಉಪಸ್ಥಿತಿಯಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿತು. ದೀಪಾವಳಿ ಜಾತ್ರಾಗೆ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ 6-7 ಲಕ್ಷದವರೆಗೆ ಲಾಡು ತಯಾರು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಸುಮಾರು ಮೂರುವರೆ ಲಕ್ಷ ಲಾಡು ತಯಾರು ಮಾಡಿ ಸಂಗ್ರಹ ಮಾಡಲಾಗಿದೆ.

ರಾಜಗೋಪುರದ ಎಡ ಹಾಗೂ ಬಲಭಾಗದಲ್ಲಿ ನೆರಳಿನ ವ್ಯವಸ್ಥೆ ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಳದಲ್ಲಿ ಹಾಗೂ ದಾಸೋಹ ಮುಂಭಾಗದಲ್ಲಿ ಶಾಮಿಯಾನ ಅಳವಡಿಸಲಾಗಿದೆ. ಮಲೆಮಹದೇಶ್ವರ ಬೆಟ್ಟದಲ್ಲಿರುವ ಶೌಚಾಲಯದ ಜೊತೆಗೆ ತಾಳು ಬೆಟ್ಟದಲ್ಲಿ 5 ಹಾಗೂ ಮ.ಮಹದೇಶ್ವರ ಬೆಟ್ಟದಲ್ಲಿ ತಾತ್ಕಾಲಿಕ ಮೊಬೈಲ್ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ದೇವಸ್ಥಾನದ ಆವರಣ ಹಾಗೂ ಜನಸಂದಣಿ ಇರುವ ಕಡೆ ಟ್ಯಾಂಕ್ ಮೂಲಕ ಶುದ್ಧ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲಾಗಿದೆ.

350 ಬಸ್ ವ್ಯವಸ್ಥೆ: ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಕೆಎಸ್ಆರ್‌ಟಿಸಿ ವತಿಯಿಂದ 350 ಬಸ್ ವ್ಯವಸ್ಥೆ ಮಾಡಲಾಗಿದೆ. ವಾಹನಗಳು ಕೆಟ್ಟು ನಿಂತರೆ ದುರಸ್ತಿ ಪಡಿಸಲು 50 ಜನ ತಾಂತ್ರಿಕ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ತಿಳಿಸಿದ್ದಾರೆ. ಪಾದಯಾತ್ರೆಯ ಮೂಲಕ ಮ.ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ ರಾಜಗೋಪುರದ ಮಹಾದ್ವಾರದ ಬಳಿ ಪ್ರತ್ಯೇಕ ಕ್ಯೂ ಲೈನ್, 60 ವರ್ಷ ಮೇಲ್ಪಟ್ಟವರಿಗೆ ಆಲಂಬಾಡಿ ಬಸವೇಶ್ವರ ಸ್ವಾಮಿಯ ಸಮೀಪ ಪ್ರತ್ಯೇಕ ಕ್ಯೂ ಲೈನ್, ಅತಿಥಿ ಗಣ್ಯರಿಗೆ ಗೇಟ್ ನಂಬರ್ ನಾಲ್ಕರಲ್ಲಿ ದರ್ಶನಕ್ಕೆ ಅವಕಾಶವನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವ್ಯವಸ್ಥೆ ಕಲ್ಪಿಸಲಾಗಿದೆ.

ದ್ವಿಚಕ್ರ ವಾಹನಗಳ ನಿರ್ಬಂಧ:

ಮ.ಬೆಟ್ಟದಲ್ಲಿ ದೀಪಾವಳಿ ಜಾತ್ರೆಗೆ ಹೆಚ್ಚಿನ ಭಕ್ತರು ದ್ವಿಚಕ್ರ ವಾಹನದಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ. ಈ ನಿಟ್ಟಿನಲ್ಲಿ ಟ್ರಾಫಿಕ್ ಜಾಮ್ ತಡೆಗಟ್ಟಲು ಅ.29ರ ಬೆಳಗ್ಗೆ 6 ಗಂಟೆಯಿಂದ ನ.2ರ ಸಂಜೆ 6 ಗಂಟೆವರೆಗೆ ಶ್ರೀ ಕ್ಷೇತ್ರಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುವುದನ್ನು ನಿರ್ಬಂಧ ವಿಧಿಸಲಾಗಿದೆ. ಕೆಎಸ್ಆರ್‌ಟಿಸಿ ಬಸ್ ಮುಖಾಂತರ ಶ್ರೀ ಕ್ಷೇತ್ರಕ್ಕೆ ತೆರಳಲು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಾರ್ಯದರ್ಶಿ ರಘು ತಿಳಿಸಿದ್ದಾರೆ.

ಬಿಗಿ ಪೊಲೀಸ್ ಪಹರೆ:

ಲಕ್ಷಾಂತರ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಡಿವೈಎಸ್ಪಿ 7 ಇನ್ಸ್‌ಪೆಕ್ಟರ್ 34 ಎಸ್ಐ 52 ಎ ಎಸ್ ಐ, 227 ಪೇದೆಗಳು 38 ಮಹಿಳಾ ಪೇದೆಗಳು 238 ಗೃಹ ರಕ್ಷಕ ದಳದ ಸಿಬ್ಬಂದಿ 3 ಡಿಆರ್, 1 ಕೆಎಸ್ಆರ್ ಪಿ ವಾಹನದ ಸಿಬ್ಬಂದಿಗ ನಿಯೋಜಿಸಲಾಗಿದೆ.ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ 5ದಿನಗಳ ದೀಪಾವಳಿ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ಲೋಪದೋಷ ಇಲ್ಲದಂತೆ ಕ್ರಮವಹಿಸಲು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ವಿಶೇಷ ದಾಸೋಹ ಮತ್ತು ವಿಶೇಷ ಶೌಚಾಲಯಗಳು ಸೇರಿದಂತೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ಭಕ್ತಾದಿಗಳಿಗೆ ಲಾಡು ಪ್ರಸಾದ ಸಹ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷ ಪೂಜೆ, ಉತ್ಸವ ವಿಧಿ ವಿಧಾನಗಳೊಂದಿಗೆ ನಡೆಸಲು ಎಲ್ಲಾ ಸಿದ್ಧತೆಗಳಿಗೆ ಕ್ರಮವಹಿಸಲಾಗಿದೆ.

- ಎ.ಇ.ರಘು, ಕಾರ್ಯದರ್ಶಿ, ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

Share this article