ಹಿಂದುತ್ವ ಎಂದಿಗೂ ಬಹುತ್ವದ ವಿರೋಧಿಯಲ್ಲ: ಗೋಪಾಲ ಬಳ್ಳಾರಿ

KannadaprabhaNewsNetwork |  
Published : Oct 29, 2024, 01:05 AM IST
ಕಾರ್ಯಕ್ರಮದಲ್ಲಿ ಉತ್ತರ ಪ್ರಾಂತ ಸಂಚಾಲಕ ಗೋಪಾಲ ಬಳ್ಳಾರಿ ಮಾತನಾಡಿದರು. | Kannada Prabha

ಸಾರಾಂಶ

ನಮ್ಮ ಹಿಂದುತ್ವ ಎಂದಿಗೂ ಬಹುತ್ವದ ವಿರೋಧಿಯಲ್ಲ, ನಮ್ಮದು ಬಹುತ್ವದ ಧರ್ಮವಾಗಿದೆ. ನಾವು ಯಾವತ್ತೂ ಮತಾಂತರವನ್ನು ಮಾಡಿಲ್ಲ.

ಭಟ್ಕಳ: ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಅಖಂಡ ಭಾರತದ ಕಲ್ಪನೆ ರಾಷ್ಟ್ರೀಯ ಸ್ವಯಂಸಂಘದ್ದಾಗಿದೆ. ಸಂಘದ ಉದ್ದೇಶವೇ ಜಗತ್ತಿನಲ್ಲಿ ಶಾಂತಿ, ನೆಮ್ಮದಿಯನ್ನು ಬಯಸುವುದಾಗಿದೆ. ಸಂಘ ಯಾರ ವಿರೋಧಿಯೂ ಅಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಸಂಚಾಲಕ ಗೋಪಾಲ ಬಳ್ಳಾರಿ ತಿಳಿಸಿದರು.

ಆರ್‌ಎಸ್ಎಸ್‌ ವತಿಯಿಂದ 100 ವರ್ಷ ಪರಿಪೂರ್ಣ ಮತ್ತು ವಿಜಯದಶಮಿಯ ಅಂಗವಾಗಿ ಏರ್ಪಡಿಸಿದ್ದ ಗಣವೇಷಧಾರಿಗಳ ಪಥಸಂಚಲನದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಹಿಂದುತ್ವ ಎಂದಿಗೂ ಬಹುತ್ವದ ವಿರೋಧಿಯಲ್ಲ, ನಮ್ಮದು ಬಹುತ್ವದ ಧರ್ಮವಾಗಿದೆ. ನಾವು ಯಾವತ್ತೂ ಮತಾಂತರವನ್ನು ಮಾಡಿಲ್ಲ. ಜಗತ್ತಿಗೆ ಭಯೋತ್ಪಾದಕರನ್ನು ಕೂಡಾ ಕೊಟ್ಟಿಲ್ಲ. ಜಗತ್ತಿಗೆ ಉತ್ತಮ ಶ್ರೇಷ್ಠ ಗ್ರಂಥಗಳನ್ನು ನೀಡಿದ ನಮ್ಮ ದೇಶ, ಹಿಮಾಲಯದ ರಚನೆಗೂ ಪೂರ್ವ ವೇದಗಳನ್ನು ರಚನೆ ಮಾಡಿದೆ ಎಂದರೆ ನಮ್ಮ ವೇದ ಎಷ್ಟು ಹಳೆಯದು ಎನ್ನುವುದನ್ನು ಊಹಿಸಲೂ ಅಸಾಧ್ಯ ಎಂದ ಅವರು, ಇಂದು ಜಗತ್ತಿನ ಅಶಾಂತಿಗೆ ಅಮೆರಿಕ ಸೇರಿದಂತೆ ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಹೊಂದಿದ ರಾಷ್ಟ್ರ ಕಾರಣವಾಗಿವೆ ಎಂದು ಆರೋಪಿಸಿದ ಅವರು, ಇಂದಿಗೂ ಭಾರತಕ್ಕೆ ಕಾಯಂ ಸದಸ್ಯತ್ವ ಪಡೆಯಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಅವರ ಪಿತೂರಿಯೇ ಕಾರಣವಾಗಿದೆ.

ನಾವು ಎಂದೂ ತಾಳ್ಮೆ ಕಳೆದುಕೊಂಡವರಲ್ಲ. ರಾಮಮಂದಿರ ನಿರ್ಮಾಣಕ್ಕೆ ೫೦ ವರ್ಷಗಳ ಕಾಲ ತಾಳ್ಮೆಯಿಂದ ಕಾನೂನಾತ್ಮಕ ಹೋರಾಟ ಮಾಡಿದ್ದೇವೆ. ಕಾಶಿಯನ್ನು ಕಾನೂನಾತ್ಮಕ ಹೋರಾಟದಿಂದಲೇ ಪಡೆಯುತ್ತೇವೆ ಎಂದ ಅವರು, ದೇಶದ ಬಗ್ಗೆ ಪ್ರತಿಯೊಬ್ಬರೂ ಯೋಚನೆ ಮಾಡಬೇಕಾಗಿದೆ. ಆರ್‌ಎಸ್‌ಎಸ್ ಸದಾ ದೇಶದ ಒಳಿತಿಗಾಗಿ ಯೋಚನೆ ಮಾಡುತ್ತಿದ್ದು, ನಮ್ಮ ಪಥಸಂಚಲನ ಯಾವುದೇ ಶಕ್ತಿ ಪ್ರದರ್ಶನವಲ್ಲ, ಸ್ವಯಂಸೇವಕರನ್ನು ಜಾಗೃತಗೊಳಿಸುವುದಕ್ಕೆ ಮಾತ್ರ ಪಥಸಂಚಲನ ಹಮ್ಮಿಕೊಳ್ಳುತ್ತೇವೆ ಎಂದರು.

ಚೌತನಿಯ ಭಾಸ್ಕರ ಆಚಾರ್ಯ ಮಾತನಾಡಿ, ಸಂಘದ ಶಾಖೆಗಳಿಗೆ ಹೋಗಿರುವುದರಿಂದ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು. ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಟ್ಟು ಅವರಲ್ಲಿ ಅಶಿಸ್ತನ್ನು ಕಲಿಸುವುದಕ್ಕಿಂತ ಕನಿಷ್ಠ ವಾರಕ್ಕೊಮ್ಮೆ ನಡೆಯುವ ಸಂಘದ ಶಾಖೆಗೆ ಕಳುಹಿಸಿ ಜೀವನದಲ್ಲಿ ಶಿಸ್ತನ್ನು ಕಲಿಸಲು ಮುಂದಾಗಬೇಕು. ಸಂಘದ ಶಾಖೆಗೆ ಹೋಗುವುದೆಂದರೆ ದೇಶಸೇವೆ ಮಾಡಿದಂತೆ ಎಂದ ಅವರು, ಇದೊಂದು ನಮಗೆ ದೇಶ ಸೇವೆಗೆ ಇರುವ ಅವಕಾಶವಾಗಿದೆ ಎಂದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?