ನ್ಯಾಯಸಮ್ಮತ ಚುನಾವಣೆಗೆ ಸಕಲ ಸಿದ್ಧತೆ

KannadaprabhaNewsNetwork | Published : Mar 20, 2024 1:18 AM

ಸಾರಾಂಶ

ಹುಕ್ಕೇರಿ: ಲೋಕಸಭೆ ಚುನಾವಣೆಗೆ ಚಿಕ್ಕೋಡಿ ಕ್ಷೇತ್ರಕ್ಕೆ ಮೇ.7 ರಂದು ನಡೆಯಲಿರುವ ಮತದಾನ ಪ್ರಕ್ರಿಯೆಗೆ ಹುಕ್ಕೇರಿ ತಾಲೂಕು ಆಡಳಿತ ಸರ್ವ ಸನ್ನದ್ಧವಾಗಿದೆ ಎಂದು ಬೆಳಗಾವಿ ಉಪವಿಭಾಗಾಧಿಕಾರಿ ಹಾಗೂ ಯಮಕನಮರಡಿ ಸಹಾಯಕ ಚುನಾವಣಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಲೋಕಸಭೆ ಚುನಾವಣೆಗೆ ಚಿಕ್ಕೋಡಿ ಕ್ಷೇತ್ರಕ್ಕೆ ಮೇ.7 ರಂದು ನಡೆಯಲಿರುವ ಮತದಾನ ಪ್ರಕ್ರಿಯೆಗೆ ಹುಕ್ಕೇರಿ ತಾಲೂಕು ಆಡಳಿತ ಸರ್ವ ಸನ್ನದ್ಧವಾಗಿದೆ ಎಂದು ಬೆಳಗಾವಿ ಉಪವಿಭಾಗಾಧಿಕಾರಿ ಹಾಗೂ ಯಮಕನಮರಡಿ ಸಹಾಯಕ ಚುನಾವಣಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮಂಗಳವಾರ ಮಾಹಿತಿ ನೀಡಿರುವ ಅವರು, ಏ.12 ರಂದು ಅಧಿಸೂಚನೆ ಹೊರಡಿಸಲಾಗುವುದು. ಏ.19 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಏ.20 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.22 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಬಳಿಕ ಮೇ.7 ರಂದು ಮತದಾನ ನಡೆಯಲಿದ್ದು, ಬಳಿಕ ಜೂ.4 ರಂದು ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲೂಕಿನ ವಿವಿಧ ಕಡೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಅಕ್ರಮವಾಗಿ ಹಣ, ಮದ್ಯ ಸಾಗಣೆ ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಧಾರ್ಮಿಕ ಸ್ಥಳ, ಶಾಲಾ-ಕಾಲೇಜುಗಳಲ್ಲಿ ಚುನಾವಣಾ ಪ್ರಚಾರ ನಿರ್ಬಂಧಿಸಲಾಗಿದೆ. ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಪೋಸ್ಟರ್, ಬ್ಯಾನರ್, ಗೋಡೆ ಬರಹ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಹಾಗೂ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ರೇಖಾ ಡೊಳ್ಳಿನ ಮಾತನಾಡಿ, ಮತದಾನದ ಕುರಿತು ಅರಿವು, ಜಾಗೃತಿ ಮೂಡಿಸಲು ಸ್ವೀಪ್ ಸಮಿತಿ ಮೂಲಕ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದವರು ಸಭೆ, ರ್ಯಾಲಿ, ವಾಹನಗಳಿಗೆ, ತಾತ್ಕಾಲಿಕ ಪಕ್ಷದ ಕಚೇರಿಗೆ ಧ್ವನಿವರ್ಧಕಗಳಿಗೆ, ಹೆಲಿಪ್ಯಾಡ್ ಹಾಗೂ ಹೆಲಿಪ್ಯಾಡ್ ಪರವಾನಗಿ ಕೋರಿ ಸುವಿಧಾ ಅಡಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ತಹಸೀಲ್ದಾರ್ ಕಚೇರಿಯಲ್ಲಿ ದೂರು ನಿರ್ವಹಣಾ ಕೇಂದ್ರ ತೆರೆಯಲಾಗಿದೆ ಎಂದರು.

ತಹಸೀಲ್ದಾರ್ ಬಲರಾಮ ಕಟ್ಟಿಮನಿ, ತಾಪಂ ಇಒ ಟಿ.ಆರ್.ಮಲ್ಲಾಡದ, ಗ್ರೇಡ್-2 ತಹಸೀಲ್ದಾರ್ ಪ್ರಕಾಶ ಕಲ್ಲೋಳಿ, ಶಿರಸ್ತೇದಾರ ಅನಿತಾ ಏಶಿ, ಚುನಾವಣಾ ಸಿಬ್ಬಂದಿ ಪಿ.ಆರ್.ಸಂತೋಷ ಮತ್ತಿತರರು ಉಪಸ್ಥಿತರಿದ್ದರು.

Share this article