ಪಲ್ಸ್ ಪೋಲಿಯೋ ಲಸಿಕೆ ಹಾಕಲು ಸಕಲ ಸಿದ್ಧತೆ: ಡೀಸಿ ಮಾಹಿತಿ

KannadaprabhaNewsNetwork |  
Published : Feb 25, 2024, 01:48 AM IST
ಪಲ್ಸ್ ಪೋಲಿಯೋ ಲಸಿಕೆ ಹಾಕಲು ಸಕಲ ಸಿದ್ಧತೆ | Kannada Prabha

ಸಾರಾಂಶ

ಪಲ್ಸ್ ಪೋಲಿಯೊ ಲಸಿಕೆಯಿಂದ ಯಾವುದೇ ಅರ್ಹ ಮಕ್ಕಳು ವಂಚಿತರಾಗಬಾರದು, ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಲು ಮಾರ್ಚ್ 3 ರಿಂದ ನಾಲ್ಕು ದಿನಗಳು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಲ್ಸ್ ಪೋಲಿಯೋ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷೆ ಶುಭ ಕಲ್ಯಾಣ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಪಲ್ಸ್ ಪೋಲಿಯೊ ಲಸಿಕೆಯಿಂದ ಯಾವುದೇ ಅರ್ಹ ಮಕ್ಕಳು ವಂಚಿತರಾಗಬಾರದು, ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಲು ಮಾರ್ಚ್ 3 ರಿಂದ ನಾಲ್ಕು ದಿನಗಳು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಲ್ಸ್ ಪೋಲಿಯೋ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷೆ ಶುಭ ಕಲ್ಯಾಣ್ ತಿಳಿಸಿದರು.

ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಜಿಲ್ಲಾ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮೊದಲನೇ ದಿನ ಬೂತ್‌ಗಳಲ್ಲಿ ಮತ್ತು ಆನಂತರ ಮನೆಗಳಿಗೆ ಭೇಟಿ ನೀಡಿ ಜಿಲ್ಲೆಯಲ್ಲಿನ ಎಲ್ಲಾ 0-5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಮನೆಮನೆಗೆ ಭೇಟಿ ನೀಡಲು ವಿಶೇಷ ತಂಡಗಳ ರಚಿಸಲಾಗಿದೆ, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.

ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ನಿಗದಿತ ಗುರಿಯನ್ನು ತಲುಪಬೇಕು, ಜಿಲ್ಲಾದ್ಯಂತ 0-5 ವರ್ಷದೊಳಗಿನ ಒಟ್ಟು ೧,೯೫,೪೩೮ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ೧೨೧೩ ಲಸಿಕಾ ಕೇಂದ್ರಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಟೋಲ್‌ಗಳಲ್ಲಿ ೬೨ ಟ್ರಾನ್ಸಿಟ್ ಕೇಂದ್ರಗಳಲ್ಲಿ ಪೋಲಿಯೋ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿರುತ್ತದೆ. ಒಟ್ಟು ೫೧೦೨ ಲಸಿಕಾ ಸಿಬ್ಬಂದಿ, ೨೬೮ ಮೇಲ್ವಿಚಾರಕರು ಈ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಬಿತ್ತಿ ಪತ್ರಗಳು, ಕರಪತ್ರಗಳು ಮೂಲಕ ಹೆಚ್ಚಿನ ಪ್ರಚಾರವನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ನಗರ ವ್ಯಾಪ್ತಿಯಲ್ಲಿ ಕೊಳಚೆ ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ನೋಡಿ ಕೊಳ್ಳಬೇಕು. ಪೋಲಿಯೋ ಲಸಿಕೆ ಅಭಿಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಆರೋಗ್ಯ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಮೊದಲಾದ ಪಾಲ್ಗೊಳ್ಳಲಿವೆ ಎಂದು ವಿವರಿಸಿದರು.

ಲಸಿಕಾ ಗುಣಮಟ್ಟವನ್ನು ಕಾಪಾಡಲು ಮಾರ್ಚ್ ೨ರವರೆಗೆ ನಿರಂತರವಾಗಿ ವಿದ್ಯುತ್‌ಚ್ಛಕ್ತಿ ಸರಬರಾಜು ಮಾಡಬೇಕೆಂದು ಬೆಸ್ಕಾಂ ಅಧಿಕಾರಿಗೆ ನಿರ್ದೇಶನ ನೀಡಿದರು. ಮನೆ-ಮನೆಗೆ ಭೇಟಿ ನೀಡಿ ಐಇಸಿ ಕರಪತ್ರ, ಭಿತ್ತಿಪತ್ರಗಳನ್ನು ವಿತರಿಸಿ ಪೋಲಿಯೋ ಹನಿ ಹಾಕಿಸುವ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ ಅವರಿಗೆ ಸೂಚನೆ ನೀಡಿದರು.

ಲಸಿಕೆ ಹಾಕುವವರಿಗೆ ಊಟದ ವ್ಯವಸ್ಥೆ ಹಾಗೂ ಸ್ಥಳೀಯ ಸಾರಿಗೆ ವ್ಯವಸ್ಥೆ, ಪ್ರಚಾರ ಸಾಮಗ್ರಿಗಳ ವಿತರಣೆ ಹಾಗೂ ಪ್ರದರ್ಶನ ವ್ಯವಸ್ಥೆ, ಲಸಿಕಾ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೊದಲಾದ ಅಗತ್ಯ ಸಿದ್ಧತೆ ರೋಟರಿ ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳಿಗೆ ಸೂಚಿಸಿದರು.

ಲಸಿಕಾ ಕಾರ್ಯಕ್ರಮದ ಯಶಸ್ಸಿಗೆ ವಾಹನ ಒದಗಿಸಲು ಪ್ರಾದೇಶಿಕ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.

ರೈಲ್ವೇ ನಿಲ್ದಾಣ/ ಬಸ್ ನಿಲ್ದಾಣ/ಟೋಲ್‌ಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮದ ಚಾಲನೆಯನ್ನು ಸ್ಥಳೀಯ ಚುನಾಯಿನೆರವೇರಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಿ. ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ರವಿಕುಮಾರ್‌, ಡಾ. ಶ್ರಿನಿವಾಸ, ಡಾ. ಬಿಂದು ಮಾದವ, ಡಾ. ಲಕ್ಷ್ಮೀ ಕಾಂತ, ಡಾ. ಸಿದ್ದೇಶ್, ಡಾ. ರಂಗನಾಥ್, ಡಾ. ಮರಿಯಪ್ಪ, ಯೋಜನಾ ನಿರ್ದೇಶಕ ಆಂಜಿನಪ್ಪ ಮತ್ತಿತರ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

QUOTE

ವಿಶೇಷವಾಗಿ ವಲಸೆ ಬಂದಿರುವ ಸಮುದಾಯ, ಲಸಿಕಾ ವಂಚಿತ ಪ್ರದೇಶ, ಕೊಳಚೆ ಪ್ರದೇಶ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಆದ್ಯತೆ ಮೇರೆಗೆ ಪಲ್ಸ್ ಪೋಲಿಯೋ ಹನಿ ನೀಡಲು ಕ್ರಮ ವಹಿಸಲಾಗಿರುತ್ತದೆ. ಪಲ್ಸ್ ಪೋಲಿಯೋ ಹಮ್ಮಿಕೊಂಡಿರುವ ದಿನಾಂಕದ ಬಗ್ಗೆ ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ಮೊದಲೇ ನೀಡಿರುವಂತೆ ನೋಡಿಕೊಳ್ಳಬೇಕು.

ಶುಭಕಲ್ಯಾಣ್‌ ಜಿಲ್ಲಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ