ಶ್ರೀರಾಮೋತ್ಸವಕ್ಕೆ ಗದಗ ಜಿಲ್ಲೆಯಾದ್ಯಂತ ಸಕಲ ಸಿದ್ಧತೆ

KannadaprabhaNewsNetwork | Published : Jan 22, 2024 2:18 AM

ಸಾರಾಂಶ

ಅಯೋಧ್ಯೆಯಲ್ಲಿ ಸೋಮವಾರ ಜರುಗುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಜಿಲ್ಲೆಯಾದ್ಯಂತ ಸಂಭ್ರಮದ ಸಿದ್ಧತೆ ಪೂರ್ಣಗೊಂಡಿದೆ. ಪ್ರತಿಯೊಂದು ಗ್ರಾಮಗಳು, ನಗರಗಳಲ್ಲಿ ರಾಮಧ್ವಜ, ಕೇಸರಿ ಶಾಲುಗಳು ರಾರಾಜಿಸುತ್ತಿವೆ.

ಗದಗ: ಅಯೋಧ್ಯೆಯಲ್ಲಿ ಸೋಮವಾರ ಜರುಗುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಜಿಲ್ಲೆಯಾದ್ಯಂತ ಸಂಭ್ರಮದ ಸಿದ್ಧತೆ ಪೂರ್ಣಗೊಂಡಿದೆ. ಪ್ರತಿಯೊಂದು ಗ್ರಾಮಗಳು, ನಗರಗಳಲ್ಲಿ ರಾಮಧ್ವಜ, ಕೇಸರಿ ಶಾಲುಗಳು ರಾರಾಜಿಸುತ್ತಿವೆ. ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್​, ಎಬಿವಿಪಿ ಹಾಗೂ ವಿವಿಧ ಹಿಂದೂ ಸಂಘಟನೆಗಳ ಆಶ್ರಯದಲ್ಲಿ 50ಕ್ಕೂ ಹೆಚ್ಚು ದೇವಸ್ಥಾನಗಳ ಸ್ವಚ್ಛತಾ ಕಾರ್ಯ ಮುಗಿದಿದ್ದು, ಎಲ್ಲ ದೇವಸ್ಥಾನಗಳಲ್ಲೂ ಸೋಮವಾರ ಬೆಳಗ್ಗೆ ವಿಶೇಷ ಪೂಜೆ ಮತ್ತು ಸಂಜೆ ದೀಪೋತ್ಸವ ಜರುಗಲಿವೆ. ವಾರ್ಡ್​ ನಂ.11 ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ಮೂರು ದೇವಸ್ಥಾನ ಅಭಿಷೇಕ, ಹುನುಮಾನ ಚಾಲಿಸಾ ಪಠಣ, ಶ್ರೀರಾಮ ಸೇನೆ ವತಿಯಿಂದ ಜೋಡು ಮಾರುತಿ ದೇವಸ್ಥಾನ ಹತ್ತಿರ 8 ಅಡಿ ಎತ್ತರದ ವಾಲ್ಮೀಕಿ ಮಹರ್ಷಿ ಮೂರ್ತಿ ಸ್ಥಾಪನೆ ಮತ್ತು ಭಜನೆ ಕಾರ್ಯಕ್ರಮ, ಪೂಜೆ ಜರುಗುವುದು. ನಗರದ ಆಟೋ ಸೇನಾ ವತಿಯಿಂದ ಹಳೆ ಬಸ್​ ನಿಲ್ದಾಣದಲ್ಲಿ ಸಂಜೆ 4 ರವರೆಗೂ ಉಪಾಹಾರ ವ್ಯವಸ್ಥೆ ಮತ್ತು ವೀರನಾರಾಯಣ, ಸೋಮೇಶ್ವರ ಹಾಗೂ ತ್ರಿಕೂಟೇಶ್ವರ ದೇವಸ್ಥಾನ ಒಳಗೊಂಡು 13 ದೇವಸ್ಥಾನಗಳಲ್ಲಿ ಆಟೋಸೇನಾ ವತಿಯಿಂದ ಬೆಳಗ್ಗೆ ಪೂಜೆ ಜರುಗಲಿದೆ. ವಾರ್ಡ್​ ನಂ 28ರಲ್ಲಿ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರಿಂದ ಪೂಜೆ ಜರುಗಲಿದೆ. ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನೇರ ಪ್ರಸಾರಕ್ಕಾಗಿ ವಿವಿಧ ವಾರ್ಡ್​ಗಳಲ್ಲಿ ಎಲ್​.ಇ.ಡಿ ಟಿವಿ ವ್ಯವಸ್ಥೆ ಮಾಡಲಾಗಿದೆ. ವಾರ್ಡ್​ ನಂ11ರ ರಾಮ ಮಂದಿರದಲ್ಲಿ ಹನುಮಾನ ಚಾಲೀಸಾ, ರಾಮ ನಾಮ ಜಪ ಪಠಣ, ಪಲ್ಲಕ್ಕಿ ಉತ್ಸವ ಹಾಗೂ ವಾರ್ಡ್​ ನಂ 7ರ ಆಂಜನೇಯ ಸದ್ಭಕ್ತ ಮಂಡಳಿ ವತಿಯಿಂದ ಹಬೀಬ್​ ಗಲ್ಲಿ, ಹಕಾರಿ ಗಲ್ಲಿಯಲ್ಲಿ ಪೂಜೆ, ಉಂಕಿಗೇರಿಯ ಬೇವಿನಮರದಮ್ಮ ದೇವಸ್ಥಾನ ಹಾಗೂ ಬಚ್ಚಲಕ್ಕಮ್ಮ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಜರುಗುವುದು. ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗುವುದು.ಗದಗ-ಬೆಟಗೇರಿ ಅವಳಿ ನಗರದ 200 ದೇವಸ್ಥಾನಗಳು ಸೇರಿ ಜಿಲ್ಲೆಯ 750ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. 500ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಅಭಿಷೇಕ, ರಾಮನಾಮ ಜಪ, ರಾಮತಾರಕ ಹೋಮ, ಪ್ರತ್ಯಂಗಿ ಹೋಮ, ಹನುಮಾನ್ ಚಾಲೀಸ್ ಪಠಣ, ಪಲ್ಲಕ್ಕಿ ಪ್ರದಕ್ಷಿಣೆ, ಪುಣ್ಯವಾಚನ, ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ 343 ಗ್ರಾಮಗಳಲ್ಲಿಯೂ ಶ್ರೀರಾಮ ಮಂದಿರ ಉದ್ಘಾಟನೆ ಕುರಿತಾದ ಬೃಹತ್ ಬ್ಯಾನರ್‌ಗಳು, ಪರದೆಗಳನ್ನು ಅಳವಡಿಸಲಾಗಿದೆ.

Share this article