ಕನ್ನಡಪ್ರಭ ವಾರ್ತೆ ಬೆಂಗಳೂರು
ಶನಿವಾರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಸಂಪ್ರದಾಯಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ದೇವಾಲಯದ ಕರಗ ಮಹೋತ್ಸವದಲ್ಲಿ ವಿವಿಧ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿರುವ ಕುಟುಂಬಗಳು ಮತ್ತು ಜನಾಂಗದ ಮುಖಂಡರ ಸಹಕಾರದೊಂದಿಗೆ ನಡೆಸಲು ಎಲ್ಲರಿಗೂ ಸೂಚಿಸಲಾಗಿದೆ ಎಂದರು.
ಸರ್ಕಾರದ ಮಾರ್ಗಸೂಚಿ ಅನ್ವಯ ಕರಗ ಉತ್ಸವದ ಪ್ರಾರಂಭದಿಂದ ಮುಕ್ತಾಯದವರೆಗೆ ಪ್ರತಿದಿನ ನಡೆಯುವ ಕಾರ್ಯಕ್ರಮಗಳ ವಿವರಗಳನ್ನು ಅಂತಿಮಗೊಳಿಸಿ ಪೊಲೀಸ್ ಇಲಾಖೆಗೆ ಒದಗಿಸಬೇಕು. ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ಕ್ರಮ ವಹಿಸಬೇಕು ಎಂದು ಸಚಿವರು ಹೇಳಿದರು.ಈ ವೇಳೆ ಶಾಸಕ ಉದಯ ಗರುಡಾಚಾರ್, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಲಕರಿ ನಾರಾಯಣಸ್ವಾಮಿ, ಮುಜರಾಯಿ ಇಲಾಖೆ ಆಯುಕ್ತ ಶರತ್ ಬಿ., ಧಲ್ಜಿತ್ ಕುಮಾರ್ ಸೇರಿ ವಿವಿಧ ಇಲಾಖೆಗಳ ಅಧಿಕಾರಗಳು ಹಾಜರಿದ್ದರು.
ಹೊರ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರೂ ಬೆಂಗಳೂರು ಕರಗವನ್ನು ನೋಡಬೇಕು. ಈ ನಿಟ್ಟಿನಲ್ಲಿ ಈ ಬಾರಿ ಕರಗ ಸಾಗುವ ರಸ್ತೆಗಳಲ್ಲಿ ವಿಶೇಷವಾಗಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. 800ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 200ಕ್ಕೂ ಹೆಚ್ಚು ಸಂಚಾರ ಪೊಲೀಸರೊಂದಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕರಗಕ್ಕೆ ದೇವಾಲಯದ ಒಳಾಂಗಣದ ಎಲ್ಲ ಕೆಲಸ ಕಾರ್ಯಗಳನ್ನು ಮುಜರಾಯಿ ಇಲಾಖೆಯಿಂದ ನಿರ್ವಹಿಸಲಾಗುತ್ತಿದ್ದು, ಇದಕ್ಕಾಗಿ ಸುಮಾರು 70-80 ಲಕ್ಷ ರು. ಖರ್ಚನ್ನು ಅಂದಾಜಿಸಲಾಗಿದೆ. ಹೊರಭಾಗದ ಕೆಲಸಗಳನ್ನು ಜಿಬಿಎ ವಹಿಸಿಕೊಂಡಿದ್ದು, ಮೈಸೂರು ದಸರಾ ಮಾದರಿಯಲ್ಲಿ ವಿದ್ಯುದ್ದೀಪಗಳನ್ನು ಅಳವಡಿಸುವುದು ಸೇರಿದಂತೆ ನಾನಾ ಕೆಲಸಗಳಿಗಾಗಿ ಸುಮಾರು 1 ಕೋಟಿ ರು. ಖರ್ಚನ್ನು ಅಂದಾಜಿಸಲಾಗಿದೆ. ಈ ಬಾರಿ ಲೈಟಿಂಗ್ಸ್ ವಿಶೇಷವಾಗಿರಲಿದೆ ಎಂದು ಸಚಿವರು ವಿವರಿಸಿದರು.