ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತೋಟಗಾರಿಕೆ ಉದ್ಯಾನಗಿರಿಯ ಮುಖ್ಯ ಆವರಣದಲ್ಲಿ ಡಿ.21ರಿಂದ 23ರವರೆಗೆ ನಡೆಯಲಿರುವ ತೋಟಗಾರಿಕೆ ಮೇಳಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತೋವಿವಿ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.ತೋವಿವಿಯ ಆವರಣದಲ್ಲಿನ ರೈತ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಮೇಳದಲ್ಲಿ 100 ಸುಸಜ್ಜಿತ, 100 ಸಾಮಾನ್ಯ, 15 ಯಂತ್ರೋಪಕರಣಗಳ ಹಾಗೂ 15 ಆಹಾರ ಮಳಿಗೆ ನಿರ್ಮಿಸಲಾಗಿದೆ. ತೋಟಗಾರಿಕೆಯಲ್ಲಿ ಬಳಸಬಹುದಾದ ವಿವಿಧ ಕೃಷಿ ಪರಿಕರಗಳಾದ ಬೀಜಗಳು, ಸಸಿಗಳು, ಕೀಟನಾಶಕಗಳು, ಗೊಬ್ಬರಗಳು, ಯಂತ್ರೋಪಕರಣಗಳ ಮಾರಾಟ ಹಾಗೂ ಪ್ರದರ್ಶನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಡಿ.21ರಂದು ಬೆಳಗ್ಗೆ 11 ಗಂಟೆಗೆ ಜರಗುವ ತೋಟಗಾರಿಕೆ ಮೇಳಕ್ಕೆ ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ ನೀಡಲಿದ್ದು, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉಪಸ್ಥಿತರಿರುವರು. ಅಧ್ಯಕ್ಷತೆ ಶಾಸಕ ಎಚ್.ವಾಯ್.ಮೇಟಿ ವಹಿಸಲಿದ್ದು, ಜಿಲ್ಲೆಯ ಇತರೆ ಶಾಸಕರು, ವಿಧಾನ ಪರಿಷತ್ ಶಾಸಕರು ಹಾಗೂ ಇತರೆ ಗಣ್ಯರು ಆಗಮಿಸಲಿದ್ದಾರೆ. ಮೊದಲ ದಿನ 24 ಜಿಲ್ಲೆಯ ಪೈಕಿ 8 ಶ್ರೇಷ್ಠ ತೋಟಗಾರಿಕೆ ರೈತರನ್ನು ಸನ್ಮಾನಿಸಲಾಗುತ್ತಿದೆ. ಇದರ ಜೊತೆಗೆ ಫಲಪುಷ್ಪ ಪ್ರದರ್ಶನ, ಮಳಿಗೆ, ವಿವಿಧ ಪ್ರಾತ್ಯಕ್ಷಿಕೆಗಳನ್ನು ಉದ್ಘಾಟನೆ, ಮಧ್ಯಾಹ್ನ ವಿಚಾರ ಗೋಷ್ಠಿಗಳು ಜರುಗಲಿವೆ ಎಂದರು.2ನೇ ದಿನ ಡಿ.22ರಂದು 8 ಜಿಲ್ಲೆಗಳ ಫಲಶ್ರೇಷ್ಠ ರೈತರನ್ನುಗೌರವಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಜವಳಿ, ಸಹಕಾರ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಆಗಮಿಸಲಿದ್ದಾರೆ. ನಂತರ ತಾಂತ್ರಿಕ ಗೋಷ್ಠಿ ನಡೆಯಲಿವೆ. ಡಿ.23ರಂದು ಮಧ್ಯಾಹ್ನ 2 ಗಂಟೆಗೆ ರಾಷ್ಟ್ರೀಯ ರೈತ ದಿನಾಚರಣೆಯೊಂದಿಗೆ 8 ಜಿಲ್ಲೆಯ ಫಲಶ್ರೇಷ್ಠ ರೈತರಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಘನ ಉಪಸ್ಥಿತಿಯಲ್ಲಿ ನಡೆಯಲಿದೆ. ತೋಟಗಾರಿಕೆ ಸಚಿವರು, ಬಾಗಲಕೋಟೆ ಶಾಸಕರು ಸೇರಿದಂತೆ ಇತರೆ ಗಣ್ಯರು ಆಗಮಿಸಲಿದ್ದಾರೆ ಎಂದರು.
ಮೇಳದಲ್ಲಿ ವಿಶ್ವವಿದ್ಯಾಲಯ ಹಾಗೂ ಇನ್ನಿತರೆ ಸಂಸ್ಥೆಗಳಿಂದ ಅಭಿವೃದ್ಧಿಪಡಿಸಲಾದ ತಳಿಗಳು ಹಾಗೂ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆಗಳು, ರೈತರಿಗಾಗಿ ತಾಂತ್ರಿಕ ಸಲಹಾ ಕೇಂದ್ರ ಹಾಗೂ ಶ್ವಾನ ಮತ್ತು ಮತ್ಸ್ಯ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ತೋಟಗಾರಿಕೆ ಬೆಳೆಗಳ ಉತ್ಪಾದಕತೆ ಮತ್ತು ಗುಣಮಟ್ಟ ಹೆಚ್ಚಿಸುವಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ. ವಿಶೇಷವಾಗಿ ಕ್ಷೇತ್ರ ಪ್ರಾತ್ಯಕ್ಷಿಕೆಗಳು, ವಿಷಯಾಧಾರಿತ ಸಮುಚ್ಛಯಗಳು, ಒಳಾಂಗಣ ಪ್ರದರ್ಶನ, ವಿಶೇಷ ಮಾರಾಟ ಮಳಿಗೆಗಳನ್ನು ಒಂದೇ ಸೂರಿನಡಿಯಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೇಳಕ್ಕೆ ಬರುವ ರೈತರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.ಪ್ರಾರಂಭದಲ್ಲಿ ತೋವಿವಿ ಆವರಣದಲ್ಲಿ ಬೆಳೆದ ವಿವಿಧ ತರಹದ ಪುಷ್ಪ, ಹೊಸ ತಳಿಗಳ ತರಕಾರಿ ತಾಕುಗಳ ಪ್ರಾತ್ಯಕ್ಷಿಕೆಗಳನ್ನು ತೋರಿಸಿದರು. ಸುದ್ದಿಗೊಷ್ಠಿಯಲ್ಲಿ ತೋವಿವಿ ವಿಸ್ತರಣಾ ನಿರ್ದೇಶಕ ಡಾ.ಟಿ.ಬಿ.ಅಳ್ಳೊಳ್ಳಿ, ಶಿಕ್ಷನ ನಿರ್ದೇಶಕ ಡಾ.ಎನ್.ಕೆ.ಹೆಗಡೆ, ಸಂಶೋಧನಾ ನಿರ್ದೇಶಕ ಡಾ.ಬಿ.ಫಕ್ರುದ್ದಿನ, ಡೀನ್ ವಿದ್ಯಾರ್ಥಿ ಕಲ್ಯಾಣ, ಡಾ.ರಾಮಚಂದ್ರ ನಾಯ್ಕ ಸೇರಿ ಇತರರಿದ್ದರು.