ಪ್ರಥಮ ಪೂಜಿತನ ಸ್ವಾಗತಕ್ಕೆ ಸಕಲ ಸಿದ್ಧತೆ

KannadaprabhaNewsNetwork |  
Published : Sep 07, 2024, 01:33 AM IST
xcxcvvcx | Kannada Prabha

ಸಾರಾಂಶ

ಮಹಾನಗರದಲ್ಲಿ ಬರೋಬ್ಬರಿ 940ಕ್ಕೂ ಅಧಿಕ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಗಣೇಶನ ಪ್ರತಿಷ್ಠಾಪನೆ ಮಾಡಲಿದ್ದು, ಇದಕ್ಕಾಗಿ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

ಹುಬ್ಬಳ್ಳಿ: ಪ್ರಥಮ ಪೂಜಿತ ಗಣೇಶನ ಪ್ರತಿಷ್ಠಾಪನೆಗೆ ಹುಬ್ಬಳ್ಳಿ-ಧಾರವಾಡ ಸಜ್ಜುಗೊಂಡಿದೆ. ಮಹಾನಗರದಲ್ಲಿ ಬರೋಬ್ಬರಿ 940ಕ್ಕೂ ಅಧಿಕ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಗಣೇಶನ ಪ್ರತಿಷ್ಠಾಪನೆ ಮಾಡಲಿದ್ದು, ಇದಕ್ಕಾಗಿ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಈ ನಡುವೆ ಈದ್ಗಾ ಮೈದಾನದಲ್ಲಿ 3ನೇ ವರ್ಷದ ಗಣೇಶೋತ್ಸವಕ್ಕೆ ಬೆಳಗ್ಗಿನಿಂದಲೇ ಭರದಿಂದ ತಯಾರಿ ನಡೆಯುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಇಲಾಖೆಯೂ ಹೆಚ್ಚುವರಿ ಬಿಗಿ ಬಂದೋಬಸ್ತ್‌ ಏರ್ಪಡಿಸಿದೆ. ನಗರದಲ್ಲಿ ಖಾಕಿ ಸರ್ಪಗಾವಲು ಹಾಕಿದಂತಾಗಿದೆ.

ಎಲ್ಲಿ ಎಷ್ಟೆಷ್ಟು?

ಸಾಮಾನ್ಯ ಪ್ರದೇಶದಲ್ಲಿ 875 ಹಾಗೂ 65 ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.

ಮುಂಬೈ, ಬೆಳಗಾವಿ ಹೊರತುಪಡಿಸಿದರೆ ಹುಬ್ಬಳ್ಳಿಯಲ್ಲಿ ಗಣೇಶೋತ್ಸವ ಅದ್ಧೂರಿಯಾಗಿ ನಡೆಯುತ್ತದೆ. ಸುತ್ತಮುತ್ತ ಜಿಲ್ಲೆಗಳಿಂದ ಲಕ್ಷಾಂತರ ಜನರು ಬಂದು ವೀಕ್ಷಣೆ ಮಾಡುವುದರಿಂದ ಗಣೇಶ ಮೂರ್ತಿ ವಿಭಿನ್ನವಾಗಿ ಪ್ರತಿಷ್ಠಾಪಿಸಲು ಮಹಾಮಂಡಳಿಗಳು ನಿರ್ಧರಿಸಿವೆ. ಅಯೋಧ್ಯೆಯ ಶ್ರೀರಾಮ, ಕೃಷ್ಣ, ಹನುಮ, ಶಿವ ಹಾಗೂ ಕೃಷ್ಣನ ದಶಾವತಾರಗಳ ಗಣೇಶಮೂರ್ತಿಯನ್ನು ತಯಾರಿಸಿ ಭಕ್ತರನ್ನು ಸೆಳೆಯಲಾಗುತ್ತದೆ. ಪೆಂಡಾಲ್‌ಗಳಲ್ಲಿ ವೈವಿಧ್ಯಮಯ ರೂಪಕ ಮಾಡಿ ಹಬ್ಬಕ್ಕೆ ಮೆರಗು ಹಚ್ಚಲಾಗುತ್ತದೆ.

23 ಅಡಿ ಎತ್ತರದ ದಾಜೀಬಾನ್ ಪೇಟೆಯ‘ಹುಬ್ಬಳ್ಳಿ ಕಾ ರಾಜಾ’ಮತ್ತು ಮರಾಠಗಲ್ಲಿಯ ‘ಹುಬ್ಬಳ್ಳಿ ಕಾ ಮಹಾರಾಜ’ ಗಣಪನ ದರ್ಶನಕ್ಕೆ ಭಕ್ತರಲ್ಲಿ ಕಾತುರ ಹೆಚ್ಚಾಗಿದೆ. ಎಂ.ಜಿ. ಮಾರುಕಟ್ಟೆ, ಕೋಯಿನ್ ರಸ್ತೆ, ಸ್ಟೇಷನ್ ರಸ್ತೆಗಳಲ್ಲೂ 15 ಅಡಿಯಿಂದ 20 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.

ಖರೀದಿ ಭರಾಟೆ ಜೋರು:ಗಣೇಶ ಹಬ್ಬದ ಹಿನ್ನೆಲೆ ನಗರದ ಪ್ರಮುಖ ಮಾರುಕಟ್ಟೆಗಳು ಶುಕ್ರವಾರ ಜನಜಂಗುಳಿಯಿಂದ ಕೂಡಿದ್ದವು. ನಗರದ ದುರ್ಗದ ಬೈಲ್, ಜನತಾ ಬಜಾರ್, ಕೇಶ್ವಾಪುರ, ಹಳೇಹುಬ್ಬಳ್ಳಿ, ಗೋಕುಲ ರಸ್ತೆ, ಉಣಕಲ್ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಸಂಜೆಯಾಗುತ್ತಿದ್ದಂತೆ ಮಾರುಕಟ್ಟೆ ಪ್ರದೇಶ ಗ್ರಾಹಕರಿಂದ ತುಂಬಿ, ಸಂಚಾರ ದಟ್ಟಣೆ ಏರ್ಪಟ್ಟಿತ್ತು. ದುರ್ಗದಬೈಲ್‌, ಚೆನ್ನಮ್ಮ ಸರ್ಕಲ್‌, ಹಳೇಹುಬ್ಬಳ್ಳಿ ಸೇರಿದಂತೆ ಹಲವೆಡೆ ಟ್ರಾಫಿಕ ಜಾಮ್‌ ಉಂಟಾಗಿತ್ತು.

ಸಾಮಾನ್ಯ ದಿನಗಳಲ್ಲಿ ಕೆ.ಜಿ.ಗೆ ₹80 ರಿಂದ ₹100 ಇರುತ್ತಿದ್ದ ಗುಲಾಬಿ ಹೂಗಳ ಬೆಲೆ ಹಬ್ಬದ ಕಾರಣಕ್ಕೆ ₹200ರ ಗಡಿ ದಾಟಿತ್ತು. ಸೇವಂತಿ ಮತ್ತು ಮಲ್ಲಿಗೆ ಹೂ ಮಾರಿಗೆ ತಲಾ ₹100, ₹80ರಂತೆ ಮಾರಾಟವಾದವು. ಮಾವಿನ ತಳಿರು ಜೋಡಿಗೆ 10, ಬಾಳೆಕಂಬ ಜೋಡಿಗೆ ₹80-₹100, ಗರಿಕೆ, ಬಿಲ್ವಪತ್ರೆ, ತುಳಸಿ ಒಂದು ಕಟ್ಟಿಗೆ ₹20 ನಿಗದಿ ಮಾಡಲಾಗಿತ್ತು. ಸೇಬು, ದಾಳಿಂಬೆ, ಸೀತಾಫಲ, ಚಿಕ್ಕು, ಮೋಸುಂಬಿ ಪ್ರತಿ ಕೆ.ಜಿ.ಗೆ ₹150 ರಿಂದ ₹200ಗೆ ಮಾರಾಟವಾಯಿತು. ಅಲಂಕಾರ ಸಾಮಗ್ರಿಗಳ ಖರೀದಿಯೂ ಜೋರಾಗಿತ್ತು.

ಪಟಾಕಿ ಖರೀದಿ:

ಹು-ಧಾ ಅವಳಿನಗರದಲ್ಲಿ ಪಟಾಕಿ ವ್ಯಾಪಾರಸ್ಥರಿಗೆ ಐದು ದಿನದವರೆಗೆ ಮಾತ್ರ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ಶುಕ್ರವಾರವೇ ನಗರದ ನೆಹರೂ ಮೈದಾನದಲ್ಲಿ ಪಟಾಕಿ ವ್ಯಾಪಾರ ನಡೆಯಿತು. ಸಾರ್ವಜನಿಕರು ಬಂದು ಖರೀದಿಯಲ್ಲಿ ತೊಡಗಿದ್ದರು.

ಗೌರಿ ಪೂಜೆ ಸಂಭ್ರಮ:

ಶುಕ್ರವಾರ ನಗರದ ವಿವಿಧೆಡೆ ಗೌರಿಪೂಜೆ ಸಂಭ್ರಮ-ಸಡಗರದಿಂದ ನಡೆಯಿತು. ಮಹಿಳೆಯರು ಮನೆಯಲ್ಲಿ ಗೌರಿ ಮೂರ್ತಿಗೆ ಅಲಂಕಾರ ಮಾಡಿ, ಕಡುಬಿನ ಹಾರ, ಕರ್ಚಿಕಾಯಿ-ಚಕ್ಕಲಿ ಹಾರ ಮಾಡಿ ಅಲಂಕರಿಸಿದ್ದರು.

ಪೊಲೀಸ್‌ ಕಮಿಷನರ್ ಸಿಟಿ ರೌಂಡ್:

ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಗಣೇಶ ಹಬ್ಬದ ಹಿನ್ನೆಲೆ ನಗರದಲ್ಲಿ ಹಾಕಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಪೆಂಡಾಲ್‌ಗಳನ್ನು ಪರಿಶೀಲಿಸಿದರು. ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಉತ್ಸವ ಸಮಿತಿ ಪದಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇನ್ನೂ ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಭದ್ರತೆಗೆ ನಿಯೋಜಿಸಿದ ಸಿಬ್ಬಂದಿಗಳಿಗೆ ಸಲಹೆ ಸೂಚನೆ ನೀಡಿದರು.

ಟ್ರಾಫಿಕ್‌ಗೆ ಬೆಂಗಳೂರ ಸಿಬ್ಬಂದಿ:

ಹು-ಧಾ ಅವಳಿನಗರದಲ್ಲಿ ಒಟ್ಟು 805 ಜನ ಪೊಲೀಸ್ ಸಿಬ್ಬಂದಿಯನ್ನು ನಗರದ ವಿವಿಧ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಜೊತೆಗೆ, 500 ಗೃಹರಕ್ಷಕ ಸಿಬ್ಬಂದಿಯೂ ಇರಲಿದ್ದಾರೆ. ಗಣೇಶ ಹಬ್ಬವೂ 11 ದಿನ ನಡೆಯಲಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು 50 ಜನ ಪೊಲೀಸ್ ಸಿಬ್ಬಂದಿಯನ್ನು ಬೆಂಗಳೂರಿನಿಂದ ಆಗಮಿಸಲಿದ್ದಾರೆ. ಇದರಲ್ಲಿ 1 ಪಿಐ, 2 ಎಎಸ್‌ಐ, 47 ಜನ ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್ ಕರ್ತವ್ಯನಿರ್ವಹಿಸಲಿದ್ದಾರೆ. ಕೆಎಸ್‌ಆರ್‌ಪಿ, ಸಿಆರ್‌ಪಿ ತಲಾ ಒಂದು ತುಕಡಿ ಹಾಗೂ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ ಸಹ ನಿಯೋಜಿಸಲಾಗಿದೆ. ಈ ನಡುವೆ ಈದ್ಗಾ ಮೈದಾನ ಸುತ್ತಲು ಸೇರಿದಂತೆ ವಿವಿಧೆಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ಹಾಲಗಂಬಕ್ಕೆ ಪೂಜೆ:

ಈ ನಡುವೆ ಈದ್ಗಾ ಮೈದಾನದಲ್ಲಿ ನಡೆಯಲಿರುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಹಾಲಗಂಬಕ್ಕೆ ಪೂಜೆ ಸಲ್ಲಿಸಲಾಯಿತು.

ಶಾಸಕ ಮಹೇಶ ಟೆಂಗಿನಕಾಯಿ, ಸ್ವರ್ಣ ಗ್ರೂಪ್‌ ಆಫ್‌ ಕಂಪನೀಸ್‌ನ ಎಂಡಿ ಎಚ್‌ಸಿಎಸ್‌ವಿ ಪ್ರಸಾದ, ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ, ರಾಣಿ ಚೆನ್ನಮ್ಮ ಮೈದಾನ ಗಜಾನನ ಮಹಾಮಂಡಳದ ಅಧ್ಯಕ್ಷ ಸಂಜೀವ ಬಡಸ್ಕರ್‌ ಸೇರಿದಂತೆ ಹಲವರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಹಾಲಗಂಬಕ್ಕೆ ಪೂಜೆ ಸಲ್ಲಿಸಿದ ನಂತರ ಪೆಂಡಾಲ್‌ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬೆಳಗ್ಗೆ 6 ಗಂಟೆಯಿಂದ 8 ಗಂಟೆಯೊಳಗೆ ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆ ನಡೆಯಲಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ