ವಿಶ್ವವಿಖ್ಯಾತ ವೈರಮುಡಿ ಉತ್ಸವ ಸಕಲ ಸಿದ್ಧತೆ: ಸಚಿವ ಚಲುವರಾಯಸ್ವಾಮಿ

KannadaprabhaNewsNetwork | Published : Apr 6, 2025 1:51 AM

ಸಾರಾಂಶ

ವಿಶ್ವವಿಖ್ಯಾತ ವೈರಮುಡಿ ಉತ್ಸವಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿದ ತಂಡೋಪತಂಡವಾಗಿ ಈಗಾಗಲೇ ಆಗಮಿಸುತ್ತಿದ್ದಾರೆ. ಈಗಾಗಲೇ ಎಲ್ಲಾ ಛತ್ರಗಳು, ರಾಮಾನುಜ ಕೂಟಂಗಳು, ವಸತಿ ಗೃಹಗಳು ಭಕ್ತರಿಂದ ತುಂಬಿ ತುಳುಕುತ್ತಿದೆ. ಈ ಬಾರಿ ಸುಮಾರು ಒಂದರಿಂದ ಒಂದೂವರೆ ಲಕ್ಷದಷ್ಟು ಭಕ್ತರು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ.

ಕನ್ನಡಪ್ರಭ ವಾರ್ತೆ ಮಂಡ್ಯ/ಮೇಲುಕೋಟೆ

ಮೇಲುಕೋಟೆಯಲ್ಲಿ ಏ.7 ರಂದು ರಾತ್ರಿ ನಡೆಯಲಿರುವ ಚೆಲುವನಾರಾಯಣಸ್ವಾಮಿಯವರ ವಿಶ್ವ ವಿಖ್ಯಾತ ವೈರಮುಡಿ ಉತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ , ಜಿಲ್ಲಾಧಿಕಾರಿ ಡಾ.ಕುಮಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ದೇವಾಲಯ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವ ಸಿದ್ದತೆ ಸಭೆ ನಡೆಸಿದ ನಂತರ ಸಚಿವರು ಮತ್ತು ಜಿಲ್ಲಾಧಿಕಾರಿಗಳು ವೈರಮುಡಿ ಉತ್ಸವದ ವೇಳೆ ಭಕ್ತರಿಗೆ ಕೈಗೊಂಡಿರುವ ವ್ಯವಸ್ಥೆ, ಭದ್ರತೆಗಾಗಿ ಮುಂಜಾಗೃತ ಕ್ರಮಗಳ ಬಗ್ಗೆ ವಿವರಿಸಿದರು.

ವಿಶ್ವವಿಖ್ಯಾತ ವೈರಮುಡಿ ಉತ್ಸವಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿದ ತಂಡೋಪತಂಡವಾಗಿ ಈಗಾಗಲೇ ಆಗಮಿಸುತ್ತಿದ್ದಾರೆ. ಈಗಾಗಲೇ ಎಲ್ಲಾ ಛತ್ರಗಳು, ರಾಮಾನುಜ ಕೂಟಂಗಳು, ವಸತಿ ಗೃಹಗಳು ಭಕ್ತರಿಂದ ತುಂಬಿ ತುಳುಕುತ್ತಿದೆ. ಈ ಬಾರಿ ಸುಮಾರು ಒಂದರಿಂದ ಒಂದೂವರೆ ಲಕ್ಷದಷ್ಟು ಭಕ್ತರು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

140 ಬಸ್ ಗಳ ವ್ಯವಸ್ಥೆ:

ವೈರಮುಡಿ ಉತ್ಸವಕ್ಕೆ ಆಗಮಿಸುವ ಭಕ್ತರಿಗಾಗಿ ಮೇಲುಕೋಟೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ಪಟ್ಟಣ, ನಗರ ಭಾಗಗಳಿಂದ ಸುಮಾರು 140 ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಕಡೆಯಿಂದ 10, ಮೈಸೂರು ಕಡೆಯಿಂದ 40, ಮದ್ದೂರು, ನಾಗಮಂಗಲ, ಪಾಂಡವಪುರ ಕಡೆಯಿಂದ ತಲಾ 5, ಕೆ.ಆರ್.ಪೇಟೆಯಿಂದ 10, ಶ್ರೀರಂಗಪಟ್ಟಣದಿಂದ 15 ಹಾಗೂ ಮಂಡ್ಯ ನಗರಿಂದ ನಿರಂತರ ಸಂಚಾರಕ್ಕೆ 50 ಬಸ್ ಗಳು ಜೊತೆಗೆ ಮುಂಗಡ ಸೀಟು ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ವಾಹನಗಳ ನಿಲ್ದಾಣಕ್ಕೆ 14 ಕಡೇ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳದಿಂದ ದೇಗುಲದವರೆಗೆ ಓಡಾಡಲು ಹಿರಿಯ ನಾಗರೀಕರು, ಗರ್ಭಿಣಿಯರಿಗೆ ಉಚಿತ 10 ಬಸ್ ವ್ಯವಸ್ಥೆ, ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರ ಜೊತೆಗೆ ಅಗತ್ಯ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಶಾಶ್ವತ ಸಿಸಿ ಕ್ಯಾಮೆರಾ ಅಳವಡಿಕೆ:

ಈ ಹಿಂದೆ ಉತ್ಸವದ ಮೇಲೆ ಮಾತ್ರ ಅಳವಡಿಸುತ್ತಿದ್ದ ಸಿಸಿ ಕ್ಯಾಮೆರಾಗಳನ್ನು ಈ ಬಾರಿ ಭದ್ರತೆ ದೃಷ್ಟಿಯಿಂದ ಮೇಲುಕೋಟೆ ಹಾಗೂ ದೇಗುಲದ ಸುತ್ತಾಮುತ್ತಾ ಸುಮಾರು 19 ಲಕ್ಷ ರು. ವೆಚ್ಚದಲ್ಲಿ ಶಾಶ್ವತವಾಗಿ 40 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.

ದೇಗುಲದ ಸುತ್ತಾಮುತ್ತಾ, ಹೆಚ್ಚು ಜನರು ಸೇರುವ ಪ್ರಮುಖ ಭಾಗಗಳಲ್ಲಿ ಟ್ಯಾಂಕ್ ಮೂಲಕ, ತಾತ್ಕಾಲಿಕ ನಲ್ಲಿಗಳನ್ನು ಅಳವಡಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ತುರ್ತು ವೈದ್ಯಕೀಯ ಸೇವೆ, ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ. ದಿನದ 24 ಗಂಟೆಯೂ ಪ್ರಮುಖ ಸ್ಥಳಗಳಲ್ಲಿ ಆರೋಗ್ಯ ಸಿಬ್ಬಂದಿ, 10 ಮಂದಿ ನುರಿತ ವೈದ್ಯರು, ಆಂಬ್ಯುಲೆನ್ಸ್ ನೊಂದಿಗೆ ಕೆಲಸ ನಿರ್ವಹಿಸಲಿದ್ದಾರೆ ಎಂದರು.

ನಿರಂತರ ಪ್ರಸಾದ ವಿತರಣೆ:

ದೇಗುಲದ ವತಿಯಿಂದ ಮೊದಲ ಬಾರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಿದ್ದು, ವೈರಮುಡಿ ಉತ್ಸವಕ್ಕೆ ಆಗಮಿಸುವ ಭಕ್ತರಿಗೆ ಏ.7ರ ಬೆಳಗ್ಗೆ 8 ರಿಂದ ಏ.8ರ ಬೆಳಗ್ಗೆ 8 ಗಂಟೆವರೆಗೆ ನಿರಂತರವಾಗಿ ಪ್ರಸಾದ ವಿತರಣೆ ಮಾಡಲಾಗಿದೆ. ಭಕ್ತರಿಗೆ 40 ಕಡೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಭದ್ರತೆಗೆ ಪೊಲೀಸರ ನಿಯೋಜನೆ:

ಉತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು 5 ಮಂದಿ ಡಿವೈಎಸ್ಪಿ, 34 ಸಿಪಿಐ, 79 ಪಿಎಸ್ ಐ, 128 ಎಎಸ್ ಐ, 664, ಪೇದೆ, ಮುಖ್ಯಪೇದೆಗಳು, 86 ಮಹಿಳಾ ಪೇದೆಗಳು, 100 ಮಂದಿ ಗೃಹರಕ್ಷಕದಳ ಸಿಬ್ಬಂದಿ ಸೇರಿದಂತೆ 1096 ಮಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದರು.

ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಇದ್ದರು.

Share this article