ಟೆಬೆಟಿಯನ್ ಬಡಾವಣೆಯಲ್ಲಿ ಭರದ ತಯಾರಿ । ರಾರಾಜಿಸುತ್ತಿರುವ ಬ್ಯಾನರ್, ಕಟೌಟ್‌ಗಳು
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಟಿಬೆಟಿಯನ್ ಧರ್ಮಗುರು ದಲೈಲಾಮಾ ಡಿ. 12ರಂದು ಇಲ್ಲಿಯ ಟಿಬೆಟಿಯನ್ ಕಾಲನಿಗೆ ಆಗಮಿಸುತ್ತಿರುವ ಹಿನ್ನೆಲೆ ಅವರ ಸ್ವಾಗತಕ್ಕೆ ಟೆಬೆಟಿಯನ್ ಬಡಾವಣೆಯಲ್ಲಿ ಭರದ ಸಿದ್ಧತೆ ನಡೆದಿದೆ.
ಟಿಬೆಟಿಯನ್ ಕಾಲನಿ ಈಗ ಟಿಬೆಟಿಯನ್ ಸಂಸ್ಕೃತಿಯಂತೆ ಶೃಂಗಾರಗೊಂಡಿದೆ. ಹಲವು ವರ್ಷಗಳಿಂದ ದುರಸ್ತಿ ಕಾಣದ ರಸ್ತೆಗಳು ಡಾಂಬರಿಕರಣಗೊಳ್ಳುತ್ತಿವೆ. ಕಾಲನಿಯ ಮಠಗಳು ಸುಣ್ಣ ಬಣ್ಣ ಹಚ್ಚಿಕೊಂಡು ಕಂಗೊಳಿಸುತ್ತಿವೆ. ಕಾಲನಿಯ ಪ್ರತಿ ರಸ್ತೆಗಳಲ್ಲಿ ದಲೈಲಾಮಾ ಸ್ವಾಗತದ ಬ್ಯಾನರ್, ಕಟೌಟ್‌ಗಳು ರಾರಾಜಿಸುತ್ತಿವೆ.ವ್ಯಾಪಾರಕ್ಕೆಂದು ಮುಂಬೈ, ಪುಣೆ, ಬೆಂಗಳೂರ, ದೆಹಲಿ, ಚೆನ್ನೈ, ಹಿಮಾಚ್ಚಲ ಪ್ರದೇಶ ಸೇರಿದಂತೆ ವಿವಿಧ ಕಡೆಗೆ ವಲಸೆ ಹೋಗಿದ್ದ ಇಲ್ಲಿಯ ಸಹಸ್ರಾರು ಟಿಬೆಟಿಯನ್ನರು ಈಗ ತಮ್ಮ ಧರ್ಮ ಗುರು ಪಾದಾರ್ಪಣೆ ಮಾಡುತ್ತಿರುವುದರಿಂದ ನಿತ್ಯ ದಂಡು ದಂಡಾಗಿ ಗೂಡಿಗೆ ಮರಳುತ್ತಿದ್ದಾರೆ.
ಡಿ.೧೨ ರಂದು ಸುಮಾರು ೪೫ ದಿನಗಳ ಪ್ರವಾಸಕ್ಕಾಗಿ ಇಲ್ಲಿಗೆ ಆಗಮಿಸುತ್ತಿರುವ ದಲೈ ಲಾಮಾ ಅವರು, ಇಲ್ಲಿ ತಂಗಿರುವವರೆಗೂ ಕಾಲನಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. ವಿವಿಧ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯಪಾಲರು ಸೇರಿದಂತೆ ಹಲವು ಗಣ್ಯರು ದಲೈಲಾಮಾ ಅವರೊಂದಿಗೆ ಆಗಮಿಸುವ ನಿರೀಕ್ಷೆ ಇದೆ. ದಲೈ ಲೈಮಾ ಇಲ್ಲಿಯ ಸಹಸ್ರಾರು ಬಿಕ್ಕುಗಳಿಗೆ ದೀಕ್ಷೆ ನೀಡಲಿದ್ದಾರೆ. ನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಟಿಬೆಟಿಯನ್ ಬಿಕ್ಕುಗಳಿಗೆ ಧರ್ಮ ಭೋದನೆ ಮಾಡುತ್ತ ಧಾರ್ಮಿಕ ಕಾರ್ಯಕ್ರಮ ನಡೆಸಲಿದ್ದಾರೆ.ಭದ್ರತೆ; ಪ್ರವಾಸಿಗರಿಗೆ ಅವಕಾಶ ಇಲ್ಲ
ದಲೈಲಾಮಾ ಅವರು ತಂಗುವುದು ಎಕರೆ ವಿಸ್ತೀರ್ಣದಲ್ಲಿರುವ ಮೊನೆಸ್ಟ್ರಿಯಲ್ಲಿ. ಆದರೆ ಪೊಲೀಸ್ ಬಂದೋಬಸ್ತ್ ಮಾತ್ರ ಇಡೀ ಟಿಬೆಟಿಯನ್ ಕಾಲನಿ ಸುತ್ತ ಮಾಡಲಾಗುತ್ತದೆ. ಸುಮಾರು ೧ ಸಾವಿರದಷ್ಟು ಪೊಲೀಸರು ದಲೈ ಲಾಮಾ ಅವರ ಕಾವಲಿಗೆ ಆಗಮಿಸುತ್ತಿದ್ದಾರೆ. ಹೊರಗಿನವರು ಯಾರು ಸಹ ಮೊನೆಸ್ಟ್ರಿ ಆವರಣದೊಳಗೆ ಹೋಗುವಂತಿಲ್ಲ. ಸುತ್ತ ಪೊಲೀಸ್ ಸರ್ಪಗಾವಲಿನೊಂದಿಗೆ ತೀವ್ರ ಭದ್ರತೆ ವ್ಯವಸ್ಥೆ ಮಾಡಲಾಗುತ್ತಿದೆ. ಪಾಸ್ ಇಲ್ಲದೆ ಯಾರಾದರು ಒಳಪ್ರವೇಶಿಸಲು ಯತ್ನಿಸಿದರೆ ಪೊಲೀಸರು ಹೊರದಬ್ಬುವುದು ಖಂಡಿತ. ಪೊಲೀಸರು ಸಹ ಪಾಸನ್ನು ಇಟ್ಟುಕೊಂಡೆ ಕಾರ್ಯನಿರ್ವಹಿಸಬೇಕು. ಏಕೆಂದರೆ ಕೇಂದ್ರ ಹಾಗೂ ಟಿಬೆಟಿಯನ್ನರ ಸೆಕ್ಯುರಿಟಿ ಕೂಡ ಇರುತ್ತದೆ. ಉತ್ತಮ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿರುವ ಇಲ್ಲಿಯ ಟಿಬೆಟಿಯನ್ ಕಾಲನಿಯಲ್ಲಿ ದಲೈಲಾಮಾ ಇರುವವರೆಗೂ ಪ್ರವಾಸಿಗರಿಗೆ ಅವಕಾಶವಿರುವುದಿಲ್ಲ.