ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮತದಾನ ಜಾಗೃತಿ ಅಭಿಯಾನದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಕುರಿತು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು, ಪಿಡಿಒ, ಬಿಲ್‍ಒಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿ, ಎಲ್ಲ ಗ್ರಾ.ಪಂ ಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿ ದಿನ ವಿವಿಧ ರೀತಿಯಲ್ಲಿ, ವಿನೂತನವಾಗಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಬಿಎಲ್‍ಒಗಳು, ಪಿಡಿಒ, ಮತದಾರರ ವೇದಿಕೆಗಳು, ವಿವಿಧ ಸಂಘ ಸಂಸ್ಥೆಗಳವರು ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಿ-ವಿಜಿಲ್ ಆ್ಯಪ್ ಬಳಕೆ ಬಗ್ಗೆ ಹಾಗೂ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ನೈತಿಕ ಚುನಾವಣೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಸಾರ್ವಜನಿಕರು ಸಹ ಮತದಾನದ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಚುನಾವಣಾ ಅಕ್ರಮಗಳು, ಅವ್ಯವಹಾರಗಳು ಕಂಡುಬಂದಲ್ಲಿ ತಮ್ಮ ಮೊಬೈಲ್ ನಲ್ಲಿ ಸಿ-ವಿಜಿಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ದೂರು ನೀಡಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಜಿ.ಪಂ.ಸಿಪಿಒ ಗಾಯತ್ರಿ ಮಾತನಾಡಿ, ಜಿಲ್ಲೆಯಲ್ಲಿ ಕಡಿಮೆ ಮತದಾನ ಆಗುವ ಮತಗಟ್ಟೆಗಳು, ನಗರ ಭಾಗದಲ್ಲಿ ಸ್ಲಂ ಪ್ರದೇಶಗಳು, ಇತರೆಡೆ ಮತದಾನ ಪ್ರಮಾಣ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮದ್ಯ, ಹೆಂಡ, ಹಣ ಇತರೆ ಆಮಿಷ ತೋರಿಸುವುದು, ಹೆದರಿಸಿ, ಬೆದರಿಸಿ ಮತ ಕೇಳುವುದು, ಕೋಮು ದ್ವೇಷ ಬಿತ್ತುವುದು, ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ಸೇರಿದಂತೆ ಯಾವುದೇ ರೀತಿಯ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತು ಸಾರ್ವಜನಿಕರು ಸಿ-ವಿಜಿಲ್ ಮೂಲಕ ದೂರು ಸಲ್ಲಿಸಬಹುದು ಎಂದರು.
ಜಾಗೃತ ಮತದಾರರ ವೇದಿಕೆ ಅಧ್ಯಕ್ಷ ಕೆ.ಸಿ.ಬಸವರಾಜಪ್ಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಬಿಎಲ್‍ಒ, ಪಿಡಿಒಗಳು ಪರಿಣಾಮಕಾರಿ ಮತದಾನ ಜಾಗೃತಿ ಕಾರ್ಯಕ್ರಮಗಳ ಕುರಿತು ಸಲಹೆ ನೀಡಿದರು.