ಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದ ಪೂರ್ವಜ ಸಮುದಾಯ ಭವನದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ವಿಶ್ವವೇ ಗೌರವಿಸುವ ಮೇರು ವ್ಯಕ್ತಿತ್ವ ಹೊಂದಿದ್ದರೂ, ತಮ್ಮನ್ನು ಶಿಕ್ಷಕರೆಂದು ಗುರುತಿಸಿಕೊಳ್ಳುವುದರಲ್ಲೇ ಹೆಮ್ಮೆ ಪಟ್ಟವರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು.
ಎಸ್ಸೆಸ್ಸೆಲ್ಸಿ ಸಾಧನೆ ಹಾಗೂ ಶೈಕ್ಷಣಿಕ ಪ್ರಗತಿಗೆ ಶ್ಲಾಘನೆ:ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತವಾಗಿ ಅತ್ಯುನ್ನತ ಫಲಿತಾಂಶ ತರುವಲ್ಲಿ ಮತ್ತು ಸಮಗ್ರ ಕ್ರೀಡಾ ಪ್ರಶಸ್ತಿ ಮಾಗಡಿ ಪಾಲಾಗುವಲ್ಲಿ ತಾಲೂಕಿನ ಶಿಕ್ಷಕರ ಪಾತ್ರ ಶ್ಲಾಘನೀಯ. ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ಶಿಕ್ಷಕರು ಹಗಲಿರುಳು ದುಡಿಯುತ್ತಿದ್ದಾರೆ. ಇತ್ತೀಚಿನ ಮತದಾರರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲೂ ಶೇಕಡಾ 98ಕ್ಕೂ ಹೆಚ್ಚು ಪ್ರಗತಿ ಸಾಧಿಸಿರುವುದು ಶಿಕ್ಷಕರ ಬದ್ಧತೆಗೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಹಿಂದೆ ಕೇವಲ 36- 37ರಷ್ಟಿದ್ದ ಪ್ರೌಢಶಾಲೆಗಳ ಸಂಖ್ಯೆ ಇಂದು 65ಕ್ಕೂ ಹೆಚ್ಚು ತಲುಪಿದೆ. ರಾಜ್ಯದಲ್ಲೇ ಮಾದರಿಯಾಗುವಂತೆ 10 ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಮಾಗಡಿಗೆ ಮಂಜೂರಾಗಿವೆ. ಜೊತೆಗೆ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಒಂದು ಎಕರೆ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಗುರುಭವನ ನಿರ್ಮಾಣವಾಗುತ್ತಿದ್ದು, ಶೈಕ್ಷಣಿಕ ಕ್ಷೇತ್ರಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಿಶೇಷ ಇಚ್ಛಾಶಕ್ತಿ ತೋರಿದ್ದಾರೆ ಎಂದು ತಿಳಿಸಿದರು.
ಸರ್ವಪಲ್ಲಿ ಡಾ.ರಾಧಾಕೃಷ್ಣರವರ ಬಗ್ಗೆ ಉಪನ್ಯಾಸವನ್ನು ಚಿಕ್ಕಬಳ್ಳಾಪುರದ ನಾಗಶ್ರೀರವರು ನೀಡಿದರು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.