ಕಾಮಗಾರಿಗಳಿಗೆ ಗುದ್ದಲಿ ಪೂಜೆ
ಚಿಕ್ಕಮಗಳೂರು: ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ. ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸಾರ್ವಜನಿಕರ ಅಗತ್ಯತೆಗಳನ್ನು ಪೂರೈಸುವುದೇ ನನ್ನ ಗುರಿ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.ತಾಲೂಕಿನ ಹುಲಿಕೆರೆ, ಪಿಳ್ಳೇನಹಳ್ಳಿ, ಎಸ್.ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ದೇವಸ್ಥಾನ, ಸಮುದಾಯ ಭವನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಪಿಳ್ಳೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ೧ ಕೋಟಿ ೨೩ ಲಕ್ಷ ರು., ಎಸ್ ಬಿದರೆ ಗ್ರಾಮ ಪಂಚಾಯಿತಿಗೆ ೭೩ ಲಕ್ಷ ರು. ಹಾಗೂ ಹುಲಿಕೆರೆ ಗ್ರಾಮ ಪಂಚಾಯಿತಿಗೆ ೧ ಕೋಟಿ ೮೦ ಲಕ್ಷ ರು. ಅನುದಾನವನ್ನು ನೀಡಿ ರಸ್ತೆ, ದೇವಾಲಯ, ಸಮುದಾಯ ಭವನ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಅಧಿಕಾರಿಗಳಿಗೆ ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಸೂಚಿಸಲಾಗಿದೆ ಎಂದರು.ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹಂತ-ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. ಈ ಅನುದಾನದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಮುನ್ನಡೆ ಸಾಧಿಸುತ್ತೇವೆ. ಸಖರಾಯಪಟ್ಟಣದ ಬರಗಾಲ ಪೀಡಿತ ಪ್ರದೇಶಗಳಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು ೬ ಕೋಟಿ ರು.ಗೂ ಹೆಚ್ಚು ಅನುದಾನ ಮೀಸಲಿಡಲಾಗಿದೆ ಎಂದರು.
ಮುಖ್ಯಮಂತ್ರಿಗಳು ಜಿಲ್ಲೆಯ ಗ್ರಾಮಾಂತರ ಭಾಗಗಳಿಗೆ ೧೦ ಕೋಟಿ ರು. ವಿಶೇಷ ಅನುದಾನವನ್ನು ನೀಡುತ್ತಿದ್ದಾರೆ, ಅದರ ಕ್ರಿಯಾ ಯೋಜನೆಯು ನಿರ್ವಹಿಸಲಾಗುತ್ತಿದೆ. ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಮಾದರಿಯಾಗಿರಿಸಿಕೊಂಡು ದೇಶದ ವಿವಿಧ ರಾಜ್ಯಗಳು ಚುನಾವಣೆಯನ್ನು ಎದುರಿಸುವ ಕಾರ್ಯವನ್ನು ಮಾಡುತ್ತಿವೆ ಎಂದರು.ಹುಲಿಕೆರೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಪಿಳ್ಳೇನಹಳ್ಳಿ ಗ್ರಾಪಂ ಅಧ್ಯಕ್ಷ ಮಹೇಂದ್ರ ಆಚಾರ್, ಎಸ್.ಬಿದರೆ ಗ್ರಾಪಂ ಅಧ್ಯಕ್ಷ ಸತೀಶ್, ಪಿಳ್ಳೇನಹಳ್ಳಿ ರಮೇಶ್, ಲೋಕೇಶ್, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.