ಯಲ್ಲಾಪುರ: ಇಂದಿನ ವಿದ್ಯಾರ್ಥಿಗಳು ಓದಿನ ಭರದಲ್ಲಿ ನಮ್ಮ ಭಾರತೀಯ ಶಿಕ್ಷಣ, ಸಂಸ್ಕಾರದಿಂದ ದೂರಹೋಗುತ್ತಿದ್ದಾರೆ. ಅದಕ್ಕಾಗಿ ಭಾರತೀಯ ಜೀವನ ಶಿಕ್ಷಣ ಎಂಬ ಒಂದು ವಿಶಿಷ್ಟವಾದ ವಿಷಯ ತಜ್ಞರನ್ನು ಸೇರಿಸಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾದ ಶಿಬಿರವನ್ನು ಏ. ೧೧ರಿಂದ ೧೮ರ ವರೆಗೆ ವಿಶ್ವದರ್ಶನದಲ್ಲಿ ಆಯೋಜಿಸಿದ್ದೇವೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರದ ೮ ದಿನದಲ್ಲಿ ಯೋಗ, ಮನೆಯಲ್ಲಿ ದೇವರ ಪ್ರಾರ್ಥನೆ, ಪೂಜೆ, ಹಿರಿಯರಿಗೆ ಗೌರವ ನೀಡುವುದು, ದೇಶಾಭಿಮಾನ ಬೆಳೆಸುವುದು ಮತ್ತು ೪ ಪುರಾಣ ಪುರುಷರು, ೪ ಕ್ರಾಂತಿಪುರುಷರ ಚರಿತ್ರೆ, ಮಕ್ಕಳ ಜತೆ ಗುಂಪು ಚರ್ಚೆ, ಸಂಜೆ ಆಟ, ಓಟ, ಹಿರಿಯ ವಿಷಯ ತಜ್ಞರಿಂದ ಶಾರೀರಿಕ, ಬೌದ್ಧಿಕ, ಮಾನಸಿಕ, ದೈಹಿಕವಾಗಿ ಸದೃಢರಾಗಲು ಚಿಂತನೆಗಳನ್ನು ನೀಡುವುದು. ತಜ್ಞರಿಂದ ಕುಟುಂಬ ವ್ಯವಸ್ಥೆಯ ನೈತಿಕ ಮೌಲ್ಯ, ಇತಿಹಾಸ, ವಿಜ್ಞಾನ ಪರಂಪರೆ, ಶ್ರದ್ಧೆ, ನಂಬಿಕೆಯನ್ನು ಬೆಳೆಸುವ ಕುರಿತು ಸರಿಯಾದ ಮಾರ್ಗದರ್ಶನದ ಜತೆ ವಸತಿ ರಹಿತ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.ಬೆಳಗ್ಗೆ ಸರಿಯಾಗಿ ೮ ಗಂಟೆಗೆ ಪ್ರಾರ್ಥನೆಯೊಂದಿಗೆ ಶಿಬಿರ ಪ್ರಾರಂಭಗೊಂಡು, ಸಂಜೆ ೬ರ ಹೊತ್ತಿಗೆ ಸಮಾಪ್ತಿಯಾಗಲಿದೆ. ಶಿಬಿರದಲ್ಲಿ ೨೦೦ ಮಕ್ಕಳಿಗೆ ಮಾತ್ರ ಅವಕಾಶವಿದೆ. ೫ನೇ ತರಗತಿ ಪಾಸಾದ ೯ನೇ ತರಗತಿ ಉತ್ತೀರ್ಣರಾದ ಮಕ್ಕಳಿಗೆ ಪ್ರವೇಶಕ್ಕೆ ಅವಕಾಶ ನೀಡಿದ್ದೇವೆ. ಈಗಾಗಲೇ ಶೇ. ೫೦ರಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ವಿಶ್ವದರ್ಶನ ಕಚೇರಿಯಲ್ಲಿ ತಮ್ಮ ಮಕ್ಕಳಿಗಾಗಿ ನೋಂದಾವಣಿ ಮಾಡಿಕೊಳ್ಳಬಹುದಾಗಿದೆ. ನೋಂದಾವಣಿಗಾಗಿ ೭೩೩೭೮೭೫೨೭೯ ಸಂಪರ್ಕಿಸಬಹುದು ಎಂದು ಹೇಳಿದರು.
ಸಂಘದ ಪ್ರಮುಖರಾದ ನರೇಂದ್ರ, ಕುಟುಂಬ ಪ್ರಬೋಧನ ಮುಖ್ಯಸ್ಥ ಸು. ರಾಮಣ್ಣ ಸೇರಿದಂತೆ ಅನೇಕ ಹಿರಿಯರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.ಮಾರ್ಗದರ್ಶಕರಾದ ಎಂ.ಎನ್. ಹೆಗಡೆ ಹಳವಳ್ಳಿ, ಅ.ಭಾ.ಸಾ.ಪ. ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ, ಶಿಬಿರ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ, ಸಹಸಂಚಾಲಕ ದೋಂಡು ಪಾಟೀಲ, ಸಮಿತಿಯ ಶ್ರೀರಾಮ ಲಾಲಗುಳಿ ಮತ್ತು ವಿಶ್ವದರ್ಶನದ ಸಿಇಒ ಅಜೇಯ ಭಾರತೀಯ ಉಪಸ್ಥಿತರಿದ್ದರು.
ವಿಶ್ವದರ್ಶನದಲ್ಲಿ ವಿಶ್ವದರ್ಶನ ಸೇವಾ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಗೋವರ್ಧನ ಗೋಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ೮ ದಿನಗಳ ಶಿಬಿರ ನಡೆಯಲಿದೆ.