ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತಿನ ಗೌರವ ಕಾರ್ಯದರ್ಶಿ ಎಂದು ಸ್ವಯಂ ಘೋಷಿಸಿಕೊಂಡಿರುವ ಗಾಮನಹಳ್ಳಿ ಮಹದೇವಸ್ವಾಮಿ ಅವರು ಜಿಲ್ಲಾ ಹಾಗೂ ಎಲ್ಲಾ ತಾಲೂಕು, ಹೋಬಳಿ ಘಟಕಗಳ ಕಸಾಪ ಪದಾಧಿಕಾರಿಗಳ ಸಭೆಯನ್ನು ಜಿಲ್ಲಾ ಕಸಾಪ ವಿ.ಹರ್ಷ ಅವರ ಅಧ್ಯಕ್ಷತೆಯಲ್ಲಿ ಫೆ.೨೨ರಂದು ಸಂಜೆ ೪.೩೦ಕ್ಕೆ ಕರೆದಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪ್ರಚಾರವಾಗಿರುವುದು ಕೇಂದ್ರ ಪರಿಷತ್ತಿನ ಗಮನಕ್ಕೆ ಬಂದಿದ್ದು, ಸಭೆ ಕರೆದಿರುವವರು ಮತ್ತು ಭಾಗವಹಿಸುವವರು ಎಲ್ಲರೂ ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳಾಗುತ್ತಾರೆ ಎಂದು ಎಚ್ಚರಿಕೆ ನೀಡಿದೆ.
ವಿ.ಹರ್ಷ ಜಿಲ್ಲಾ ಕಸಾಪ ಅಧ್ಯಕ್ಷರೂ ಅಲ್ಲ, ಮಹದೇವಸ್ವಾಮಿ ಗೌರವ ಕಾರ್ಯದರ್ಶಿಗಳೂ ಅಲ್ಲ. ಇದು ಅವರೇ ಸ್ವಯಂ ಘೋಷಿಸಿಕೊಂಡಿರುವ ಹುದ್ದೆಗಳಾಗಿವೆ. ಈ ಸಭೆ ಕರೆಯಲು ಬಳಸಿರುವ ಲೆಟರ್‌ಹೆಡ್‌ನಲ್ಲಿರುವ ಕಸಾಪ ಲೋಗೋ ಸೇರಿದಂತೆ ಇಡೀ ಪತ್ರ ಕೃತಕವಾಗಿ ರೂಪುಗೊಂಡಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅನುಮತಿ ಇಲ್ಲದೆ ಇಂತಹ ಪತ್ರವನ್ನು ರೂಪಿಸಿರುವುದೇ ಅಪರಾಧವಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕರು ಸ್ಪಷ್ಟಪಡಿಸಿದ್ದಾರೆ.ಇದೊಂದು ಕಾನೂನುಬಾಹಿರ ಮತ್ತು ಅನಧಿಕೃತ ಸಭೆಯಾಗಿದ್ದು, ಈ ಅನಧಿಕೃತ ಸಭೆಯಲ್ಲಿ ಭಾಗವಹಿಸುವವರು ಕಾನೂನಿನ ದೃಷ್ಟಿಯಿಂದ ತಪ್ಪಿತಸ್ಥರಾಗಿರುತ್ತಾರೆ ಎಂದು ಹೇಳಿದೆ.
ಇಂತಹ ಅಧಿಕಾರವಿರುವುದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಮಾತ್ರವಿದ್ದು, ಜಿಲ್ಲಾ ಘಟಕಗಳು ಲಿಖಿತ ರೂಪದಲ್ಲಿ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಹೀಗಾಗಿ ಸ್ವಯಂ ಘೋಷಿಸಿಕೊಂಡಿರುವ ಈ ಎರಡೂ ಹುದ್ದೆಗಳು ಅನಧಿಕೃತ ಎಂದು ಸ್ಪಷ್ಟಪಡಿಸಿದೆ.
ಈ ಸಭೆಯನ್ನು ಕರೆದಿರುವವರು ಮತ್ತು ಭಾಗವಹಿಸುವವರು ಎಲ್ಲರೂ ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳಾಗಿರುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮತ್ತೊಮ್ಮೆ ಎಚ್ಚರಿಸಿದೆ.ಹುದ್ದೆಗಾಗಿ ನಿಲ್ಲದ ಬಣ ಜಗಳ: ಪರಿಷತ್ತು ಅತಂತ್ರ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಿ.ರವಿಕುಮಾರ ಮರಣಹೊಂದಿದ ಬಳಿಕ ಕಾನೂನಾತ್ಮಕವಾಗಿ ಹೊಸ ಅಧ್ಯಕ್ಷರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ನೇಮಕ ಮಾಡಿದ್ದರೆ ಗೊಂದಲಗಳಿಗೆ ಅವಕಾಶವೇ ಇರುತ್ತಿರಲಿಲ್ಲ. ಅಧ್ಯಕ್ಷರನ್ನು ನೇಮಿಸಿದೆ ಅಧಿಕಾರವೆಲ್ಲವನ್ನೂ ತಮ್ಮಲ್ಲೇ ಇಟ್ಟುಕೊಂಡು ಸ್ವಪ್ರತಿಷ್ಠೆ, ಏಕಪಕ್ಷೀಯ ನಡೆ ಅನುಸರಿಸಿದ್ದರಿಂದ ಸಾಹಿತ್ಯ ಪರಿಷತ್ತು ಒಡೆದ ಮನೆಯಾಗುವುದಕ್ಕೆ ಮುಖ್ಯ ಕಾರಣರಾದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ನಂತರವೂ ಜನರಿಗೆ ಕೃತಜ್ಞತೆ ಹೇಳಿ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಅಧ್ಯಕ್ಷರ ನೇಮಕಕ್ಕೆ ಮುಂದಾಗದೆ ಜಿಲ್ಲಾ ಕಸಾಪ ಪದಾಧಿಕಾರಿಗಳೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ.