ಪತ್ನಿ ತನ್ನನ್ನು ಏಡ್ಸ್ ರೋಗಿ ಎಂದು ಸುಳ್ಳು ಸುದ್ದಿ ಹಬ್ಬಿಸುವುದಾಗಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾಳೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ದೂರು ನೀಡಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪತ್ನಿಯ ವಿರುದ್ಧ ಮಾರತ್ತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 

 ಬೆಂಗಳೂರು : ಪತ್ನಿ ತನ್ನನ್ನು ಏಡ್ಸ್ ರೋಗಿ ಎಂದು ಸುಳ್ಳು ಸುದ್ದಿ ಹಬ್ಬಿಸುವುದಾಗಿ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾಳೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ದೂರು ನೀಡಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪತ್ನಿಯ ವಿರುದ್ಧ ಮಾರತ್ತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಯಮಲೂರು ನಿವಾಸಿ ಹಾಗೂ ಉದ್ಯಮಿ ದೀಪಕ್‌ ಕುಮಾರ್‌ ನೀಡಿದ ದೂರಿನ ಅನ್ವಯ ಸ್ವಾತಿ (37) ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದೂರಿನ ವಿವರ:

ದೀಪಕ್‌ ಕುಮಾರ್‌ ಅವರು, ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯವಾದ ಸ್ವಾತಿಯನ್ನು 2022ರಲ್ಲಿ ವಿವಾಹವಾಗಿದ್ದರು. ವಿವಾಹದ ವೇಳೆ ತನ್ನ ವಿದ್ಯಾರ್ಹತೆ ಮತ್ತು ಕೆಲಸದ ಬಗ್ಗೆ ಆಕೆ ಸುಳ್ಳು ಹೇಳಿದ್ದಳು. ಈಕೆಗೆ ಈ ಹಿಂದೆ ಇಬ್ಬರು ಪುರುಷರರೊಂದಿಗೆ ಸಂಬಂಧ ಇರುವುದು ತನಗೆ ತಿಳಿಯಿತು. ಇದರಿಂದಾಗಿ ನಮ್ಮ ದಾಂಪತ್ಯದಲ್ಲಿ ಕಲಹ ಉಂಟಾಗಿತ್ತು. ಹೀಗಾಗಿ ಇಬ್ಬರು ಪ್ರತ್ಯೇಕವಾಗಿ ಇರೋಣವೆಂದು ಇ-ಮೇಲ್‌ ಮಾಡಿ ಆಕೆಗೆ ಮನವಿ ಮಾಡಿದ್ದೆ. ಆದರೆ ಆಕೆ ಇದಕ್ಕೆ ಆಕೆ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು. ಹಣ ನೀಡದಿದ್ದರೆ ತನ್ನನ್ನು ಏಡ್ಸ್ ರೋಗಿ ಎಂದು ಬಿಂಬಿಸುವುದಲ್ಲದೆ ವೇಶ್ಯಾವಾಟಿಕೆ ದಂಧೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಸುಳ್ಳು ಆರೋಪಗಳನ್ನು ಹಬ್ಬಿಸಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಭಾವಿ ವ್ಯಕ್ತಿಗಳ ಪರಿಚಯ ಹೊಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಳು

ಅಲ್ಲದೆ, ತಾನು ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ಪರಿಚಯ ಹೊಂದಿದ್ದೇನೆ ಎಂದು ಆಕೆ ಆಗಾಗ ಹೇಳಿಕೊಳ್ಳುತ್ತಿದ್ದಳು. ನನ್ನನ್ನು ವಿರೋಧಿಸಿದರೆ ನಿನ್ನ ವಿರುದ್ಧ ಏನು ಬೇಕಾದರೂ ಮಾಡಬಲ್ಲೆ ಎಂದು ಬೆದರಿಕೆ ಹಾಕುತ್ತಿದ್ದಳು. ಅಲ್ಲದೇ 2024 ರ ಜನವರಿ 29 ರಂದು ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ, ತನ್ನ ಸಹಚರರ ಜತೆ ಮನೆಗೆ ನುಗ್ಗಿ ಲಾಕರ್‌ ಒಡೆದು 18 ಲಕ್ಷ ನಗದು, ವಿದೇಶಿ ಕರೆನ್ಸಿಗಳು, 320 ಗ್ರಾಂ ಚಿನ್ನಾಭರಣ, 1.5 ಕೆ.ಜಿ ಬೆಳ್ಳಿ ವಸ್ತುಗಳು ಮತ್ತು ನಕಲಿ ಕೀ ಬಳಸಿ ಕಾರನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.