ಹಾವೇರಿ: ಸರ್ಕಾರದ ಯೋಜನೆಗಳಲ್ಲಿ ಅಂಗವಿಕಲರಿಗೆ ಶೇ. 5ರಷ್ಟು ಮೀಸಲಾತಿ ನೀಡಲಾಗಿದೆ. ವಿವಿಧ ಯೋಜನೆಗಳ ಆಯ್ಕೆಯಲ್ಲಿ ಅಂಗವಿಕಲರಿಗೆ ಆದ್ಯತೆ ನೀಡಬೇಕು. ಅಂಗವಿಕಲರ ಅಭಿವೃದ್ಧಿಗೆ ಮೀಸಲಾದ ಅನುದಾನ ಸದ್ಬಳಕೆಯಾಗಬೇಕು ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯುಕ್ತರಾದ ದಾಸ್ ಸೂರ್ಯವಂಶಿ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬುಧವಾರ ಅಂಗವಿಕಲರ ಅಭಿವೃದ್ಧಿ ಕಾರ್ಯಕ್ರಮದಡಿ ಶೇ. 5ರಷ್ಟು ಮೀಸಲಿರುವ ಅನುದಾನದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಗವಿಕಲರಿಗೆ ಮೀಸಲಿಸುವ ಅನುದಾನವನ್ನು ಕಾಲಮಿತಿಯೊಳಗೆ ವೆಚ್ಚ ಮಾಡಬೇಕು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದರು.ದೇಶದಲ್ಲಿ ಅಂದಾಜು 23 ಕೋಟಿ ಹಾಗೂ ರಾಜ್ಯದಲ್ಲಿ ಒಂದು ಕೋಟಿ ಅಂಗವಿಕಲರಿದ್ದಾರೆ. 21 ಬಗೆಯ ವಿಕಲತೆಯನ್ನು ಗುರುತಿಸಲಾಗಿದೆ. ಅಂಗವಿಕಲರಿಗೆ ಶಿಕ್ಷಣ, ಉದ್ಯೋಗ ಹಾಗೂ ಸ್ವಯಂ ಉದ್ಯೋಗಕ್ಕೆ ಸಾಲ ಹಾಗೂ ಸಹಾಯಧನ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಕಚೇರಿಗೆ ಅಂಗವಿಕಲರು ಬಂದಾಗ ಅವರ ಸಮಸ್ಯೆಗಳನ್ನು ಸೌಜನ್ಯದಿಂದ ಆಲಿಸುವ ಮೂಲಕ ಅವರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಸರ್ಕಾರಿ ಕಚೇರಿಗಳು, ಪ್ರವಾಸಿ ತಾಣಗಳು, ಬಸ್ ನಿಲ್ದಾಣ, ಶಾಲಾ- ಕಾಲೇಜುಗಳು ಅಂಗವಿಕಲ ಸ್ನೇಹಿಯಾಗಿರಬೇಕು. ರ‍್ಯಾಂಪ್, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಹೊಂದಿರಬೇಕು. ಶ್ರವಣದೋಷ ಅಥವಾ ಅಂಧ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ಕೊಡಲು ಬಂದರೆ ಅಲ್ಲಿ ಬ್ರೈಲ್ ಲಿಪಿ ಹಾಗೂ ಸೈನ್ ಲಾಂಗ್ವೇಜ್ ಪರಿಣಿತರು ಇರಬೇಕು. ಇಲ್ಲವಾದರೆ ಶ್ರವಣದೋಷ ವ್ಯಕ್ತಿ ಹಾಗೂ ಅಂಧ ವ್ಯಕ್ತಿ ಹೇಗೆ ದೂರು ನೀಡಲು ಸಾಧ್ಯ. ಹಾಗಾಗಿ ಪೊಲೀಸ್ ಠಾಣೆಗಳಲ್ಲಿ ಬ್ರೈಲ್ ಲಿಪಿ ಹಾಗೂ ಸೈನ್ ಲಾಂಗ್ವೇಜ್ ಪರಿಣಿತರು ಇರುವಂತೆ ನೋಡಿಕೊಳ್ಳಬೇಕು ಎಂದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ಈಗಾಗಲೇ ಲಿಂಗತ್ವ ಅಲ್ಪಸಂಖ್ಯಾತರಿಗೆ ತರಬೇತಿ ನೀಡಿ, ಅಕ್ಕ ಕೆಫೆ ಆರಂಭಿಸಲಾಗಿದೆ. ಅದೇ ರೀತಿ ಅಂಗವಿಕಲರು ಮುಂದೆ ಬಂದರೆ ಅವರಿಗೆ ತರಬೇತಿ ನೀಡಿ, ಕೆಫೆ ಆರಂಭಿಸಲು ಚಿಂತನೆ ಮಾಡಲಾಗಿದೆ ಎಂದರು.
ಅಂಗವಿಕಲರ ಶಿಕ್ಷಣಕ್ಕೆ ಆದ್ಯತೆ ನೀಡಿ..ಅಂಗವಿಕಲರಿಗೆ ಸಾಧನ- ಸಲಕರಣೆ ನೀಡುವ ಜತೆಗೆ ಅವರ ಶಿಕ್ಷಣಕ್ಕೆ ಒತ್ತು ನೀಡಬೇಕು. ಸರ್ವ ಶಿಕ್ಷಣ ಅಭಿಯಾನದಡಿ ಶಾಲೆಗಳಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು. ಶ್ರವಣದೋಷ ಮಕ್ಕಳಿಗೆ ಸೈನ್ ಲಾಂಗ್ವೇಜ್ ಹಾಗೂ ಅಂಧ ಮಕ್ಕಳಿಗೆ ಬ್ರೈಲ್ ಲಿಪಿ ಪರಿಣಿತರಿಂದ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಅಂಗವಿಕಲರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.