ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ದಾವಣಗೆರೆ ತಾಲೂಕಿನ ಶ್ಯಾಗಲೆ ಗ್ರಾಮದಲ್ಲಿ ಶನಿವಾರ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, 15ನೇ ಹಣಕಾಸು ಯೋಜನೆಯಡಿ 17 ಲಕ್ಷ ರು.ವೆಚ್ಚದಲ್ಲಿ ನಿರ್ಮಿಸಿದ ಘನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟಿಸಿ ಮಾತನಾಡಿದರು.
ಜನರು ತಮ್ಮ ಮನೆಯಂಗಳ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಗ್ರಹವಾದ ಘನ ತ್ಯಾಜ್ಯವನ್ನು ಸ್ಥಳೀಯವಾಗಿಯೇ ವಿಲೇವಾರಿ ಮಾಡುವ ಸಲುವಾಗಿ ಗ್ರಾ.ಪಂ. ಮಟ್ಟದಲ್ಲೇ ಘನ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣಾ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಈಗಾಗಲೇ ತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಅದೇ ಮಾದರಿಯಲ್ಲಿ ಶ್ಯಾಗಲೆ ಗ್ರಾಮದಲ್ಲೂ ನಿರ್ವಹಿಸಬೇಕು. ಜನರು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.ನಗರ ಪ್ರದೇಶಗಳಂತೆಯೇ ಗ್ರಾಮಗಳಲ್ಲಿಯೂ ಶುಚಿತ್ವ ಕಾಪಾಡಲು ಮತ್ತು ಘನ, ದ್ರವ ತ್ಯಾಜ್ಯವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ಗ್ರಾಮೀಣ ಜನರಿಗೆ ಮನವರಿಕೆ ಮಾಡಲು ಘಟಕಗಳನ್ನು ಪ್ರಾರಂಭಿಸಲಾಗುತ್ತಿದ್ದು, ಗ್ರಾಮಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಜನತೆಗೆ ಅರಿವು ಮೂಡಿಸಲು ಅಧಿಕಾರಿಗಳು ಮೊದಲು ಒತ್ತು ನೀಡಬೇಕೆಂದರು.
ನಗರ ಪ್ರದೇಶದಲ್ಲಿ ಪೌರಕಾರ್ಮಿಕರು ನೇಮಕ ಮಾಡಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಕೂಡ ಪೌರ ಕಾರ್ಮಿಕರನ್ನು ನೇಮಿಸಿ ಗ್ರಾಮಗಳ ಸ್ವಚ್ಛತೆ ಮತ್ತು ಶುದ್ಧ ಪರಿಸರ ನಿರ್ಮಾಣ ಮಾಡಬೇಕು ಎಂದು ಈಗಾಗಲೇ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇನೆ ಎಂದು ಅಭಿಪ್ರಾಯಪಟ್ಟರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಮಲಮ್ಮ ಓಬಳಪ್ಪ, ಗ್ರಾಮ ಪಂಚಾಯತ್ ಸರ್ವ ಸದಸ್ಯರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮಭೋವಿ, ಪಿಡಿಒ ಲೋಹಿತ್ ಕುಮಾರ್, ಮುಖಂಡರಾದ ಸತೀಶ್, ಮಂಜಣ್ಣ, ಪರಮೇಶ್ವರಪ್ಪ, ತಿಪ್ಪೇಶ್, ಶಿವಕುಮಾರ್, ವಿಜಯಕುಮಾರ್, ಕೋಡಿಹಳ್ಳಿ ವಿಶ್ವನಾಥ್ , ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಇತರರು ಹಾಜರಿದ್ದರು.
ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶಕ್ಕೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತಿದ್ದು, ಗ್ರಾಮಸ್ಥರು ಸದುಪಯೋಗ ಮಾಡಿಕೊಳ್ಳಬೇಕು.ಕೆ.ಎಸ್.ಬಸವಂತಪ್ಪ ಶಾಸಕ.