ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರಿ ನೌಕರಿಯಲ್ಲಿ ಶೇ.5 ಮೀಸಲಾತಿ ನೀಡಿದರೆ, ಸರ್ಕಾರಿ ಶಾಲೆಗಳಲ್ಲೇ ಶಿಕ್ಷಕರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದೂ ಸೇರಿದಂತೆ ಪೂರಕ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಆ ಮೂಲಕ ಕನ್ನಡವನ್ನು ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಲಿ ಎಂದು ಮಹಿಳಾಪರ ಚಿಂತಕಿ ವನಜಾ ಮಹಲಿಂಗಯ್ಯ ಒತ್ತಾಯಿಸಿದ್ದಾರೆ.
- ಸರ್ಕಾರಿ ಶಾಲಾ ಶಿಕ್ಷಕ-ಶಿಕ್ಷಕಿಯರ ಮಕ್ಕಳನ್ನೂ ಸರ್ಕಾರಿ ಶಾಲೆಗಳಿಗೇ ಸೇರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಜರುಗಿಸಲಿ: ವನಜಾ ಮಹಲಿಂಗಯ್ಯ- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರಿ ನೌಕರಿಯಲ್ಲಿ ಶೇ.5 ಮೀಸಲಾತಿ ನೀಡಿದರೆ, ಸರ್ಕಾರಿ ಶಾಲೆಗಳಲ್ಲೇ ಶಿಕ್ಷಕರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದೂ ಸೇರಿದಂತೆ ಪೂರಕ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಆ ಮೂಲಕ ಕನ್ನಡವನ್ನು ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸಲು ಮುಂದಾಗಲಿ ಎಂದು ಮಹಿಳಾಪರ ಚಿಂತಕಿ ವನಜಾ ಮಹಲಿಂಗಯ್ಯ ಒತ್ತಾಯಿಸಿದ್ದಾರೆ.
ಕನ್ನಡವನ್ನು ಉಳಿಸಲು ರಾಜ್ಯ ಸರ್ಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್‌ನಂತಹ ಸಂಘ-ಸಂಸ್ಥೆಗಳು ಪ್ರಾಮಾಣಿಕ ಕೆಲಸ ಮಾಡಬೇಕು. ಕನ್ನಡ ಉಳಿಯುವುದು ಬರೀ ಭಾಷಣದಿಂದ ಅಲ್ಲ. ಕೆಲಸದಿಂದ ಮಾತ್ರ ಎಂಬುದನ್ನು ಸರ್ಕಾರ ಹಾಗೂ ಕ.ಸಾ.ಪ. ಸಹ ಅರಿಯಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಕಲ್ಪಿಸಿದರೆ ತನ್ನಿಂದ ತಾನೇ ಎಲ್ಲರೂ ಕನ್ನಡ ಕಲಿಯುತ್ತಾರೆ ಎಂದು ಅಭಿಪ್ರಾಯಿಸಿದ್ದಾರೆ.
ಬರೀ ನಾಮಫಲಕಗಳನ್ನು ಕನ್ನಡದಲ್ಲಿ ಹಾಕಿಸಿದರಷ್ಟೇ ಸಾಲದು, ಕ.ಸಾ.ಪ. ಸಹ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು ಕಷ್ಟಸಾಧ್ಯವೇನಲ್ಲ. ಮನಸ್ಸು ಮಾಡಬೇಕಷ್ಟೇ. ಅದಕ್ಕೆ ಅಗತ್ಯ ಶಿಕ್ಷಕರು, ಸಿಬ್ಬಂದಿ, ಸೌಲಭ್ಯಗಳನ್ನು ಸರ್ಕಾರ ಪ್ರಥಮಾದ್ಯತೆ ಮೇಲೆ ಕಲ್ಪಿಸಬೇಕು. ಒಬ್ಬರೇ ಶಿಕ್ಷಕರು ಐದು ತರಗತಿ ನಡೆಸುವುದು ಹೇಗೆ ಸಾಧ್ಯ? ಪ್ರತಿ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಬೇಕು ಎಂದಿದ್ದಾರೆ.
ಇಂಗ್ಲಿಷ್ ಭಾಷೆಯ ಬಗ್ಗೆ ನಮ್ಮ ಮಕ್ಕಳು, ಪಾಲಕರು ಸೇರಿದಂತೆ ಸಾರ್ವಜನಿಕವಾಗಿ ಇರುವಂತಹ ಭಯ ನಿವಾರಣೆ ಮಾಡಬೇಕು. ಸರ್ಕಾರಿ ಶಾಲೆಯೆಂದರೆ ಬರೀ ಕನ್ನಡ ಮಾಧ್ಯಮವೆಂಬ ಭ್ರಮೆ ಬೇಡ. ಆಯ್ದ ಸರ್ಕಾರಿ ಶಾಲೆಗಳನ್ನಷ್ಟೇ ಆಂಗ್ಲ ಮಾಧ್ಯಮ ಶಾಲೆಗಳಾಗಿ ಮಾಡದೇ, ಎಲ್ಲ ಸರ್ಕಾರಿ ಶಾಲೆಗಳಲ್ಲೂ 1ನೇ ತರಗತಿಯಿಂದಲೇ ಉತ್ತಮವಾಗಿ ಇಂಗ್ಲಿಷ್ ಭಾಷೆಯನ್ನೂ ಕಲಿಸುವ ಕೆಲಸವಾಗಬೇಕು. ಹಾಗಾದಾಗ ಮಾತ್ರ ಖಾಸಗಿ ಶಾಲೆಗಳ ಬದಲಿಗೆ ಸರ್ಕಾರಿ ಶಾಲೆಗೆ ಪಾಲಕರು ಮಕ್ಕಳನ್ನು ದಾಖಲಿಸುತ್ತಾರೆ ಎಂದು ಸಲಹೆ ನೀಡಿದ್ದಾರೆ.
ಶಾಲೆಗಳು ಶಾಲೆಯಂತೆಯೇ ಇರಬೇಕು. ಉತ್ತಮ ಶೌಚಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ, ಕಂಪ್ಯೂಟರ್ ಸಿಸ್ಟಂ ಹೀಗೆ ಖಾಸಗಿ ಶಾಲೆಯಲ್ಲಿ ಏನೆಲ್ಲಾ ಸೌಲಭ್ಯವಿದೆಯೋ ಅದನ್ನೆಲ್ಲಾ ಸರ್ಕಾರಿ ಶಾಲೆಗಳಿಗೂ ನೀಡಬೇಕು. ಶೇ.90ರಷ್ಟು ಸರ್ಕಾರಿ ಶಾಲಾ ಶಿಕ್ಷಕ-ಶಿಕ್ಷಕಿಯರೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಿಲ್ಲ? ಇದು ಕಹಿಸತ್ಯ. ಸರ್ಕಾರಿ ಶಾಲೆಗಳ ವ್ಯವಸ್ಥೆ ಸರಿ ಇಲ್ಲವೆಂಬ ಧೋರಣೆ ಅದೇ ಸರ್ಕಾರಿ ಶಾಲೆಗಳ ಶಿಕ್ಷಕ-ಶಿಕ್ಷಕಿಯರದ್ದಾ ಎಂದೂ ವನಜಾ ಪ್ರಶ್ನಿಸಿದ್ದಾರೆ.
ಒಬ್ಬ ಶಿಕ್ಷಕರು ರಜೆ ಹಾಕಿದರೆ ಇಡೀ ದಿನ ಆ ತರಗತಿ ಖಾಲಿ ಇರುತ್ತದೆ. ಶಾಲೆಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಶಿಕ್ಷಕರೂ ಇಲ್ಲ. ಇರುವ ಶಿಕ್ಷಕರಿಗೆ ಸರ್ಕಾರದಿಂದ ಬರುವಂತಹ ಆದೇಶ, ಸುತ್ತೋಲೆ ಪಾಲಿಸಬೇಕಾದ ಹೊರೆ ಇರುತ್ತದೆ. ಜನಗಣತಿ, ಚುನಾವಣೆ ಕರ್ತವ್ಯ, ಮಧ್ಯಾಹ್ನದ ಬಿಸಿಯೂಟದ ಲೆಕ್ಕ, ಸೊಪ್ಪು, ಹಣ್ಣು, ತರಕಾರಿ, ದಿನಸಿ ಲೆಕ್ಕ, ಜನಪ್ರತಿನಿಧಿಗಳ ಕಾರ್ಯಕ್ರಮ, ಸಂಘಗಳ ಚುನಾವಣೆ, ಸಭೆಗಳೆಂದೇ ಬೋಧನೆಯ ಅವಧಿಯಲ್ಲಿ ಶಿಕ್ಷಕರ ಹೇಗೆಲ್ಲಾ ಕೆಲಸ ಮಾಡಬೇಕೆಂಬ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
- - -
(ಬಾಕ್ಸ್)
* ಸರ್ಕಾರಿ ಶಾಲೆ-ಸಂಸಾರ ಎರಡೂ ಒಂದೇ, ಕಟ್ಟಿ ಬೆಳೆಸಿದರೆ ಮಾತ್ರ ಉಳಿಯಬಲ್ಲದು
ಕ.ಸಾ.ಪ. ಅಂದರೆ ವರ್ಷಕ್ಕೊಮ್ಮೆ ಸಾಹಿತ್ಯ ಸಮ್ಮೇಳನ ಮಾಡುವುದು, ಬಂದವರಿಗೆ ಭಕ್ಷ್ಯ ಭೋಜನದ ಉಪಚಾರ ಮಾಡುವ ಕಾರ್ಯಕ್ರಮಗಳಾಗಬಾರದು. ಹಳ್ಳಿಹಳ್ಳಿಗೂ ಹೋಗಿ, ಕನ್ನಡ ನಾಟಕ, ಕನ್ನಡ ಕವಿಗೋಷ್ಠಿ, ಕನ್ನಡ ಭಾಷೆ, ನಾಡು, ನುಡಿ, ಸಾಧಕರ ಬಗ್ಗೆ ತಿಳಿಸುವ, ಮಕ್ಕಳಿಗೆ ಸ್ಪರ್ಧೆ ಏರ್ಪಡಿಸುವ ಕೆಲಸ ಮಾಡಬೇಕು. ಕನ್ನಡವನ್ನು ಮನೆ ಮತ್ತು ಮನದ ಭಾಷೆಯಾಗಿ ಉಳಿಸಬೇಕು. ಕನ್ನಡ ಉಳಿಸಿ ಎನ್ನುವುದು ವೇದಿಕೆಯ ಭಾಷಣದ ಸರಕಾಗದೇ, ಅದು ಕೃತಿಗೆ ಬರಬೇಕು. ಸರ್ಕಾರಿ ಶಾಲೆ ಮತ್ತು ಸಂಸಾರ ಎರಡೂ ಒಂದೇ. ತಾಳ್ಮೆಯಿಂದ, ಹೊಂದಾಣಿಕೆಯಿಂದ ಕಟ್ಟಿ ಬೆಳೆಸಿದರೆ ಮಾತ್ರ ಉಳಿಯುತ್ತದೆ. ಬಿಟ್ಟುಬಿಟ್ಟರೆ ಕುಸಿದು ಬೀಳುತ್ತದೆ ಎಂದು ವನಜಾ ಮಹಲಿಂಗಯ್ಯ ಸೂಚ್ಯವಾಗಿ ಎಚ್ಚರಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.