ಗುಂಡ್ಲುಪೇಟೆಯ ಆಹಾರ ಇಲಾಖೆಯ ಎಲ್ಲಾ ಹುದ್ದೆಗಳು ಖಾಲಿ ಖಾಲಿ

KannadaprabhaNewsNetwork |  
Published : Sep 14, 2024, 01:50 AM IST
ಆಹಾರ ಇಲಾಖೆ ಎಲ್ಲಾ ಹುದ್ದೆ ಖಾಲಿ ಖಾಲಿ! | Kannada Prabha

ಸಾರಾಂಶ

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಕಟ್ಟಡದ ೩೬ ನಂಬರ್‌ ಕೊಠಡಿಯೀಗ ಕಳೆದ ೩ ದಿನಗಳಿಂದ ಬೀಗ ಬಿದ್ದಿದೆ! ಆಹಾರ ಇಲಾಖೆಯ ಕೆಲಸಕ್ಕಾಗಿ ಬರುವ ಸಾರ್ವಜನಿಕರು, ಪಡಿತರ ವಿತರಕರು ಬಾಗಿಲಿಗೆ ಬೀಗ ಹಾಕಿರುವುದನ್ನು ನೋಡಿಕೊಂಡು ವಾಪಸ್‌ ತೆರಳುತ್ತಿದ್ದಾರೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ಆಹಾರ ಇಲಾಖೆಯಲ್ಲಿ ಎಲ್ಲಾ ಹುದ್ದೆಗಳು ಖಾಲಿ ಖಾಲಿಯಾಗಿದ್ದು, ಆಹಾರ ಇಲಾಖೆ ಗುಂಡ್ಲುಪೇಟೆಯಲ್ಲಿ ಇದೆಯಾ ಎಂಬ ಪ್ರಶ್ನೆ ಕಾಡುತ್ತಿದೆ!

ಪಟ್ಟಣದ ತಾಲೂಕು ಕಚೇರಿ ಕಟ್ಟಡದ ೩೬ ನಂಬರ್‌ ಕೊಠಡಿಯೀಗ ಕಳೆದ ೩ ದಿನಗಳಿಂದ ಬೀಗ ಬಿದ್ದಿದೆ! ಆಹಾರ ಇಲಾಖೆಯ ಕೆಲಸಕ್ಕಾಗಿ ಬರುವ ಸಾರ್ವಜನಿಕರು, ಪಡಿತರ ವಿತರಕರು ಬಾಗಿಲಿಗೆ ಬೀಗ ಹಾಕಿರುವುದನ್ನು ನೋಡಿಕೊಂಡು ವಾಪಸ್‌ ತೆರಳುತ್ತಿದ್ದಾರೆ. ಕಳೆದ ಜೂ.೨೮ ರಂದು ತಾಲೂಕಿನ ಹಂಗಳ ಗ್ರಾಮದಲ್ಲಿ ಜನ ಸಂಪರ್ಕ ಸಭೆ ಮುಗಿಸಿ ವಾಪಸ್‌ ಬರುವಾಗ ರಸ್ತೆ ಅಪಘಾತದಲ್ಲಿ ಆಹಾರ ನಿರೀಕ್ಷಕ ನಾಗೇಂದ್ರ ಸಾವನ್ನಪ್ಪಿದರು. ಬೈಕ್‌ ಹಿಂಬದಿ ಕುಳಿತಿದ್ದ ಆಹಾರ ಶಿರಸ್ತೇದಾರ್‌ ಕೆ.ಎಸ್.ರಮೇಶ್‌ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿ ಕೋಮಾದಲ್ಲಿದ್ದಾರೆ.

ಅಂದಿನಿಂದ ಇಂದಿನ ತನಕ ಆಹಾರ ಶಿರಸ್ತೇದಾರ್‌, ಆಹಾರ ನಿರೀಕ್ಷಕರ ಹುದ್ದೆ ಖಾಲಿ ಬಿದ್ದಿದೆ. ಇದೀಗ ಸೆ.೧೦ ರಿಂದ ಆಹಾರ ನಿರೀಕ್ಷಕಿ ಪೂರ್ಣಿಮ ಕೂಡ ಹೆರಿಗೆ ರಜೆ ಮೇಲೆ ತೆರಳಿರುವ ಕಾರಣ ಆಹಾರ ಇಲಾಖೆಗೆ ಬೀಗ ಬಿದ್ದಿದೆ. ಆಹಾರ ಶಿರಸ್ತೇದಾರ್‌ ಇಲ್ಲ, ಆಹಾರ ನಿರೀಕ್ಷಕರು ಇಲ್ಲ ಮತ್ತು ಆಹಾರ ಇಲಾಖೆ ಎಸ್‌ಡಿಎ ಕೂಡ ಇಲ್ಲದ್ದರಿಂದ ಎಲ್ಲಾ ಇಲ್ಲದರಲ್ಲಿಯೇ ಕಳೆದು ಹೋಗಿದೆ. ಶಾಲಾ, ಕಾಲೇಜಿಗೆ ಹಾಗೂ ಆಸ್ಪತ್ರೆಗೆ ತುರ್ತಾಗಿ ಪಡಿತರ ಚೀಟಿಗೆ ಹೆಸರು ಸೇರಿಸಲು ಆಹಾರ ಇಲಾಖೆಯೇ ಇಲ್ಲದಿರುವಾಗ ಇನ್ನೆಲ್ಲಿ ಆಹಾರ ಇಲಾಖೆಯಲ್ಲಿ ಕೆಲಸ ಎಂದು ಪಡಿತರ ವಿತರಕರೇ ಅಲವತ್ತುಕೊಂಡಿದ್ದಾರೆ.

ಪೋರ್ಟಿಬಲಿಟಿಯಡಿ ಪಡಿತರ ವಿತರಿಸಲು ಆಗುತ್ತಿಲ್ಲ. ಪೋರ್ಟಿಬಲಿಟಿಗೆ ಆಹಾರ ಇಲಾಖೆಯ ಶಿರಸ್ತೇದಾರ್‌ ಅಥವಾ ಆಹಾರ ನಿರೀಕ್ಷಕರು ಲಾಗಿನ್‌ ಕೊಡಬೇಕು. ಲಾಗಿನ್‌ ಕೊಡಲು ಅಧಿಕಾರಿಗಳೇ ಇಲ್ಲ ಹಾಗಾಗಿ ಪೋರ್ಟಿಬಲಿಟಿಯಲ್ಲಿ ಕಾಯುವ ಮಂದಿಗೆ ಈ ತಿಂಗಳು ಪಡಿತರ ಸಿಗುತ್ತಿಲ್ಲ ಎನ್ನಲಾಗಿದೆ.

ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ ಅವರು ಗುಂಡ್ಲುಪೇಟೆ ಆಹಾರ ಇಲಾಖೆಗೆ ಚಾಮರಾಜನಗರದ ಆಹಾರ ಶಿರಸ್ತೇದಾರ್‌ ಮಹೇಶ್‌ರನ್ನು ನಿಯೋಜಿಸಿದ್ದಾರೆ. ಆದರೆ ಅವರು ಇಂದಿನ ತನಕ ಗುಂಡ್ಲುಪೇಟೆ ಕಚೇರಿಗೆ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇಲ್ಲಿನ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ತವರಲ್ಲಿ ಆಹಾರ ಇಲಾಖೆ ಎಲ್ಲಾ ಹುದ್ದೆಗಳು ಖಾಲಿ ಬಿದ್ದ ಕಾರಣ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ ಎಂಬುದೇ ಬೇಸರದ ಸಂಗತಿ ಎಂದು ಸಾರ್ವಜನಿಕರು ಹೇಳಿದ್ದಾರೆ.

ಇಲ್ಲಿನ ಆಹಾರ ಇಲಾಖೆಯಲ್ಲಿ ಆಹಾರ ಶಿರಸ್ತೇದಾರ್‌ ಆಸ್ಪತ್ರೆಯಲ್ಲಿದ್ದಾರೆ. ಓರ್ವ ಆಹಾರ ನಿರೀಕ್ಷಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಕಾರಣ ಎರಡು ಹುದ್ದೆಗಳು ಖಾಲಿಯಾಗಿವೆ. ಅಲ್ಲದೆ ಕಳೆದ ಎರಡು ದಿನಗಳಿಂದ ಆಹಾರ ನಿರೀಕ್ಷಕರು ಹೆರಿಗೆ ರಜೆ ಮೇಲೆ ತೆರಳಿದ್ದಾರೆ. ಆ ಹುದ್ದೆಯು ಖಾಲಿಯಾಗಿದೆ. ಚಾಮಗರಾಜನಗರ ಆಹಾರ ಶಿರಸ್ತೇದಾರ್‌ ಮಹೇಶ್‌ರನ್ನು ನಿಯೋಜಿಸಲಾಗಿದೆ ಅವರು ಇನ್ನೂ ಬಂದಿಲ್ಲ.

ಟಿ.ರಮೇಶ್‌ ಬಾಬು, ತಹಸೀಲ್ದಾರ್

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ